ಶ್ರೀಲಾಲ್ ಶುಕ್ಲಾ ಯುವ ಸಾಹಿತಿ ಪುರಸ್ಕಾರ ಈ ವರ್ಷದಿಂದ ಆರಂಭ
ನವದೆಹಲಿ: ಭಾರತೀಯ ರೈತರ ರಸಗೊಬ್ಬರ ಸಹಕಾರಿ ನಿಯಮಿತ (ಇಫ್ಕೋ) ತಮ್ಮ 2024ರ ಶ್ರೀಲಾಲ್ ಶುಕ್ಲಾ ಸ್ಮಾರಕ ಇಫ್ಕೋ ಸಾಹಿತ್ಯ ಪುರಸ್ಕಾರಕ್ಕೆ ಇಬ್ಬರನ್ನು ಆಯ್ಕೆ ಮಾಡಿದೆ. ಹೆಸರಾಂತ ಕಥೆಗಾರ ಚಂದ್ರಕಿಶೋರ್ ಜೈಸ್ವಾಲ್ ಶ್ರೀಲಾಲ್ ಶುಕ್ಲಾ ಸ್ಮಾರಕ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಇದೇ ಮೊದಲ ಸಲ ಪರಿಚಯಿಸಲಾಗಿರುವ ಶ್ರೀಲಾಲ್ ಶುಕ್ಲಾ ಸ್ಮಾರಕ ಇಫ್ಕೋ ಯುವ ಸಾಹಿತಿ ಪುರಸ್ಕಾರಕ್ಕೆ ರೇಣು ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ.
ಹಿರಿಯ ಬರಹಗಾರ ಅಸ್ಘರ್ ವಜಾಹತ್ ಅಧ್ಯಕ್ಷತೆಯ, ಪ್ರಮುಖರಾದ ಡಾ.ಅನಾಮಿಕಾ, ಪ್ರಿಯದರ್ಶನ್, ಯತೀಂದ್ರ ಮಿಶ್ರಾ, ಉತ್ಕರ್ಷ್ ಶುಕ್ಲಾ ಮತ್ತು ಡಾ.ನಳಿನ್ ವಿಕಾಸ್ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಶ್ರೀಲಾಲ್ ಶುಕ್ಲಾ ಸ್ಮಾರಕ ಇಫ್ಕೋ ಪುರಸ್ಕಾರವನ್ನು 2011ರಲ್ಲಿ ಆರಂಭಿಸಲಾಗಿದ್ದು ಈ ವರ್ಷ ಮೊದಲ ಬಾರಿ ಯುವ ಸಾಹಿತಿ ಪುರಸ್ಕಾರವನ್ನು ಸೇರಿಸಲಾಗಿದೆ. ವಿದ್ಯಾಸಾಗರ್ ನಾಟಿಯಾಲ್, ಶೇಖರ್ ಜೋಶಿ, ಸಂಜೀವ ಮಿಥಿಲೇಶ್ವರ್ ಮೊದಲಾದ ಪ್ರಮುಖರು ಈ ಪುರಸ್ಕಾರ ಪಡೆದಿದ್ದಾರೆ. ಪ್ರಶಸ್ತಿಯು ಸ್ಮರಣಿಕೆ ಮತ್ತು 11 ಲಕ್ಷ ರೂ. ನಗದು ಪುರಸ್ಕಾರವನ್ನು ಒಳಗೊಂಡಿದೆ. ಯುವ ಸಾಹಿತಿ ಪುರಸ್ಕಾರವು ಸ್ಮರಣಿಕೆ ಮತ್ತು 2.5 ಲಕ್ಷ ರೂ. ನಗದು ಪುರಸ್ಕಾರವನ್ನು ಒಳಗೊಂಡಿದೆ. ಸೆ.30ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK
ಬಿಹಾರದ ರಾಜ್ಯದವರಾದ ಚಂದ್ರಕಿಶೋರ್ ಜೈಸ್ವಾಲ್ ಮಾಧೇಪುರದಲ್ಲಿ 1940ರ ಫೆ.15ರಂದು ಜನಿಸಿದ್ದು ಪಟ್ನಾ ಯುನಿವರ್ಸಿಟಿಯಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದಿದ್ದರು. ಬಳಿಕ ಭಾಗಲ್ಪುರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಗವಾ ಗೈರ್‌ಹಾಜಿರ್, ಜೀಬಾಚ್ ಕಾ ಬೇಟಾ ಬುಧ್, ಶೀರ್‌ಶಾಕ್, ಡಾಹ್ ಇವರ ಪ್ರಮುಖ ಕಾದಂಬರಿಗಳು. ಮೈ ನಹೀಂ ಮಖಾನ್ ಖಾಯೋ, ರಂಗ್ ಭಂಗ್ ಇವರ ಪ್ರಮುಖ ಸಣ್ಣಕಥೆಗಳು. ತಮ್ಮ ಸಾಹತ್ಯ ಕ್ಷೇತ್ರದ ದುಡಿಮೆಗಾಗಿ ಹಲವಾರು ಪುರಸ್ಕಾರಗಳನ್ನು ಪಡೆದಿರುವ ಇವರಿಗೆ ರಾಮವೃಕ್ಷಾ ಬೇನಿಪುರಿ ಅವಾರ್ಡ್, ಬನಾರಸಿ ಪ್ರಸಾದ್ ಭೋಜ್‌ಪುರಿ ಅವಾರ್ಡ್, ಆನಂದ್ ಸಾಗರ್ ಕತಾಕ್ರಮ್ ಅವಾರ್ಡ್, ಬಿಹಾರ ಸರ್ಕಾರದ ಜನನಾಯಕ್ ಕರ್ಪೂರಿ ಠಾಕೂರ್ ಅವಾರ್ಡ್ ಪುರಸ್ಕಾರಗಳನ್ನು ಪಡೆದಿದ್ದಾರೆ. ಗವಾ ಗೈರ್‌ಹಾಜಿರ್ ಕಾದಂಬರಿಯು ರೂಯಿ ಕಾ ಬೋಜ್ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದ್ದು 1998ರ ಪನೋರಮ ರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.
ಇಫ್ಕೋ ಯುವ ಸಾಹಿತಿ ಪುರಸ್ಕಾರ ಪಡೆದಿರುವ 40ರ ಹರೆಯದ ರೇಣು ಯಾದವ್ ಉತ್ತರಪ್ರದೇಶದ ಗೋರಖ್‌ಪುರದಲ್ಲಿ 1984ರ ಸೆ.16ರಂದು ಜನಿಸಿದ್ದು ಎಂ.ಎ, ಎಂ.ಫಿಲ್ ಮತ್ತು ಪಿಎಚ್.ಡಿ ಪದವಿ ಪಡೆದು ಪ್ರಸ್ತುತ ಗ್ರೇಟರ್ ನೋಯ್ಡಾದ ಗೌತಮ ಬುದ್ಧ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಮಹಾದೇವಿ ವರ್ಮಾ ಕೇ ಕಾವ್ಯಾ ಮೇ ವೇದನಾ ಕಾ ಮನೋವಿಶ್ಲೇಷಣ್ ಎಂಬ ವಿಮರ್ಶಾ ಲೇಖನ, ಮೇ ಮುಕ್ತ್ ಹೂಂ ಎಂಬ ಕವನ ಸಂಕಲನ ಇವರ ಪ್ರಮುಖ ಕೃತಿಗಳು. ಇವರು ಹಲವಾರು ಕಥೆಗಳು, ಕವಿತೆಗಳು ಮತ್ತು ಸಂಶೋಧನಾ ಗ್ರಂಥಗಳನ್ನು ವಿವಿಧ ಪತ್ರಿಕೆಗಳು ಹಾಗೂ ಮ್ಯಾಗಜಿನ್‌ಗಳಲ್ಲಿ ಪ್ರಕಟಿಸಿದ್ದಾರೆ. ಸೃಜನ್ ಶ್ರೀ ಪುರಸ್ಕಾರ, ದೆಹಲಿಯ ದಲಿತ ಸಾಹಿತ್ಯ ಅಕಾಡೆಮಿಯ ವೀರಾಂಗನಾ ಸಾವಿತ್ರಿಬಾಯಿ ಫುಲೆ ನ್ಯಾಶನಲ್ ಫೆಲೋಶಿಪ್ ಅವಾರ್ಡ್‌ಗಳು ಇವರಿಗೆ ಲಭಿಸಿವೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com