ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ಕಾರ್ಯಕ್ರಮ
ಮಂಗಳೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ಮಂಗಳೂರಿನ ಶ್ರೀನಿವಾಸ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಂಗಳೂರಿನ ಸಹಾಯಕ ಪೊಲೀಸ್ ಆಯುಕ್ತೆ ಗೀತಾ ಕುಲಕರ್ಣಿಯವರು ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಿದರು.
https://chat.whatsapp.com/EbVKVnWB6rlHT1mWtsgbch
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಗೀತಾ ಕುಲಕರ್ಣಿ, ಮೂರು ರೀತಿಯಲ್ಲಿ ಸೈಬರ್ ಕ್ರೈಂ ಜಾಲಕ್ಕೆ ಸಿಲುಕಬಹುದು. ಇದರಿಂದ ಹೊರಬರಲು ನಮ್ಮಲ್ಲಿ ಸ್ವಯಂ ಜಾಗೃತಿಯಾಗಬೇಕು ಎಂದು ಎಚ್ಚರಿಕೆ ನೀಡಿದರು. ಮೊದಲನೆಯದಾಗಿ ನಮಗೆ ಪರಿಚಯವಿಲ್ಲದ ನಂಬರ್‌ನಿಂದ ಬರುವ ಯಾವುದೇ ವಿಡಿಯೋ ಕಾಲ್‌ಗೆ ಉತ್ತರಿಸುವ ಅಥವಾ ಅದನ್ನು ಅಟೆಂಡ್ ಮಾಡುವ ಕಾರ್ಯಕ್ಕೆ ನಾವು ಸಿಲುಕಬಾರದು. ಅಪರಿಚಿತರಿಂದ ಬರುವ ಯಾವುದೇ ವಿಡಿಯೋ ಕಾಲ್ ನಮ್ಮನ್ನು ಮೋಸದ ಜಾಲಕ್ಕೆ ಸಿಲುಕಿಸಬಹುದು ಎಂದು ಎಚ್ಚರಿಕೆ ನೀಡಿದ ಗೀತಾ ಕುಲಕರ್ಣಿಯವರು ಎರಡನೆಯದಾಗಿ ಬ್ಯಾಂಕ್‌ನಿಂದ ಕೆವೈಸಿ ಅಪ್‌ಡೇಟ್ ನೆಪದಲ್ಲಿ ಬರುವ ಕಾಲ್‌ಗಳಿಗೆ ಉತ್ತರಿಸಲು ಹೋಗಬೇಡಿ ಎಂದು ಎಚ್ಚರಿಸಿದರು.
ಬ್ಯಾಂಕ್‌ನಿಂದ ಕೆವೈಸಿ ಅಪ್‌ಡೇಟ್‌ಗಾಗಿ ಯಾರೂ ಕರೆ ಮಾಡುವುದಿಲ್ಲ. ಹಣಕಾಸಿಗೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ಫೋನ್‌ನಲ್ಲಿ ನೀಡಲು ಹೋಗಬಾರದು ಎಂದು ಮಾಹಿತಿ ನೀಡಿದರು. ಮೂರನೆಯದಾಗಿ ಒಂದು ವೇಳೆ ಯಾವುದೇ ಸೈಬರ್ ಕ್ರೈಂ ಜಾಲಕ್ಕೆ ಸಿಲುಕಿದರೆ ತಕ್ಷಣ ಟೋಲ್ ಫ್ರೀ ನಂಬರ್ 1930ಗೆ ಕರೆ ಮಾಡಿ ಮಾಹಿತಿ ನೀಡಬೇಕು, ಅಥವಾ cybercrime.gov.inನಲ್ಲಿ ಕಂಪ್ಲೇಂಟ್ ದಾಖಲು ಮಾಡಬಹುದು ಎಂದು ತಿಳಿಸಿದರು. ಕೊನೆಯದಾಗಿ ಯಾರಾದರೂ ಸೈಬರ್ ಕ್ರೈಂ ಬಗ್ಗೆ ಇತರರಿಗೆ ಮಾಹಿತಿ ನೀಡಲು ಬಯಸುವುದಾದರೆ Cyber Dost ನಲ್ಲಿ ಮಾಹಿತಿ ಪಡೆದು ಇತರರಿಗೆ ನೀಡಬಹುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಮಂಜುನಾಥ್ ಎಸ್.ಕೆ ಮಾತನಾಡಿ, ಮಹಿಳಾ ಸಾಧಕರ ಸಂಖ್ಯೆ ಹೆಚ್ಚಬೇಕು. ಅದೇ ಹಿಂದಿನ ಹೆಸರುಗಳನ್ನು ನಾವು ಉದಾಹರಣೆ ಕೊಡುವಂತೆ ಆಗಬಾರದು. ಮುಂಬರುವ ದಿನಗಳಲ್ಲಿ ಹೊಸ ಹೊಸ ಹೆಸರುಗಳನ್ನು ನಾವು ಉದಾಹರಣೆ ಕೊಡುವಷ್ಟು ಸಂಖ್ಯೆಯಲ್ಲಿ ಮಹಿಳೆಯರು ಸಾಧನೆ ಮಾಡಬೇಕು. ಎಲ್ಲ ಕ್ಷೇತ್ರಗಳಲ್ಲೂ ಮಹಿಳಾ ಸಾಧಕರು ಇದ್ದಾರೆ. ಅವರನ್ನು ಬೆಳಕಿಗೆ ತರುವ ಕೆಲಸವೂ ಆಗಬೇಕು. ಮಹಿಳೆಯವರಿಗೆ ಪ್ರಕೃತಿಯೇ ವಿಶೇಷವಾದ ಒಂದು ವರ ನೀಡಿದೆ. ಅದು ಎಂದರೆ ತಾಳ್ಮೆ, ಹೃದಯ ಶ್ರೀಮಂತಿಕೆ. ಇಂಥ ಗುಣಗಳಿಂದಾಗಿ ಮಹಿಳೆಯವರು ಎಲ್ಲ ಕೆಲಸಗಳನ್ನೂ ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಕಠಿಣ ಪರಿಶ್ರಮ, ಬದ್ಧತೆ, ವ್ಯವಸ್ಥಿತ ರೀತಿಯಲ್ಲಿ ಕೆಲಸ, ಪರಿಪೂರ್ಣತೆ ಇವುಗಳಿದ್ದರೆ ಯಾವುದೇ ಕೆಲಸದಲ್ಲಿ ಯಶಸ್ಸು ಪಡೆಯಬಹುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೋಹಿಣಿ ಸಾಲ್ಯಾನ್, ಸರಳಾ ಕಾಂಚನ್, ಶಾರದಾಮಣಿ ಶೇಖರ್ ಮತ್ತು ವೃಂದಾ ಅವರನ್ನು ಸನ್ಮಾನಿಸಲಾಯಿತು. ಮೂಡುಬಿದಿರೆಯ ಕೆಐಸಿಎಂ ಪ್ರಾಂಶುಪಾಲೆ ಬಿಂದು ನಾಯರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರ್‌ನ ಆಡಳಿತ ಅಧಿಕಾರಿ ಪ್ರಿಯಾ ರಾಜಮೋಹನ್ ಅವರನ್ನು ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಪ್ರಾಸ್ತಾವಿಕ ಮಾತನಾಡಿದರು. ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್ ಸ್ವಾಗತಿಸಿದರು. ಜಯಭಾರತ್ ಸೌಹಾರ್ದ ಸಹಕಾರಿ ಸಿಇಒ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ದ.ಕ. ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ನಂದನ್ ಬಿ.ಎನ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com