ಸಂಸ್ಥೆಯ ವಜ್ರಮಹೋತ್ಸವ ಆಚರಣೆಗೆ ವಿಶೇಷ ಕಳೆ
ಕಟೀಲು ಸಮೀಪದ ಉಲ್ಲಂಜೆಯಲ್ಲಿ ನಿರ್ಮಾಣ
ಮಂಗಳೂರು: ಠೇವಣಿ ಸಂಗ್ರಹಿಸುವುದು, ಸಾಲ ವಿತರಿಸುವುದು, ಸಾಲ ಮರುಪಾವತಿಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಆರೋಗ್ಯ, ರಕ್ತದಾನ ಶಿಬಿರಗಳಂತಹ ಆರ್ಥಿಕ ಚಟುವಟಿಕೆಗಳಲ್ಲೇ ನಿರತರಾಗಿರುವ ಕೋ-ಆಪರೇಟಿವ್ ಸೊಸೈಟಿಗಳು ಕೂಡ ತಮ್ಮ ವಿಶೇಷ ಕಾರ್ಯಕ್ರಮಗಳಿಗೆ ಮಾನವೀಯ ಸ್ಪರ್ಶ ಹೇಗೆ ಕೊಡಬಲ್ಲವು ಎಂಬುದಕ್ಕೆ ಮಂಗಳೂರಿನ ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ನಿದರ್ಶನ ಕೊಟ್ಟಿದೆ. ವಿಭಿನ್ನ ಯೋಚನೆ, ಯೋಜನೆಗಳನ್ನು ಕಾರ್ಯಗತಗೊಳಿಸಿದರೆ ಜನರು ಗುರುತಿಸುವ ಕೆಲಸ ಮಾಡಬಹುದು ಎಂಬುದನ್ನು ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಸಾಧಿಸಿ ತೋರಿಸಿದ್ದು, ತಮ್ಮ ಸಂಸ್ಥೆಯ ವಜ್ರ ಮಹೋತ್ಸವ ಆಚರಣೆಯ ಶುಭ ಸಂದರ್ಭದಲ್ಲಿ ಬಡ ಮಹಿಳೆಯೊಬ್ಬರಿಗೆ ಕಿನ್ನಿಗೋಳಿ ಸಮೀಪದ ಮೆನ್ನಬೆಟ್ಟು ಉಲ್ಲಂಜೆಯಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟಿದೆ.
https://chat.whatsapp.com/EbVKVnWB6rlHT1mWtsgbch
ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿಯು ಕ್ರಿಯಾಶೀಲ ವ್ಯವಸ್ಥಾಪನೆ, ದಕ್ಷ ಆಡಳಿತ ನಿರ್ವಹಣೆಯಿಂದ ಹೆಸರು ವಾಸಿಯಾಗಿದೆ. ಎರಡು ಬಾರಿ ರಾಜ್ಯದ ಉತ್ತಮ ಸಹಕಾರಿ ಸಂಘ ಪ್ರಶಸ್ತಿ, ನಾಲ್ಕು ಬಾರಿ ಜಿಲ್ಲೆಯ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಹಾಗೂ ಆರು ಬಾರಿ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಉತ್ತಮ ವ್ಯವಹಾರ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಸಾಧನಾ ಪ್ರಶಸ್ತಿ ಪಡೆದಿದೆ. ಜನಪರ ಕಾರ್ಯ, ಸಮಾಜಮುಖಿ ಕೆಲಸಗಳ ಮೂಲಕ ವಜ್ರಮಹೋತ್ಸವ ಆಚರಣೆಯ ಸಂಭ್ರಮವನ್ನು ಕಾಣುತ್ತಿರುವ ಈ ಸೊಸೈಟಿಯು ತಮ್ಮ ವಜ್ರಮಹೋತ್ಸವ ಆಚರಣೆಯ ಗೃಹ ನಿರ್ಮಾಣ ಯೋಜನೆಯಡಿ ಉಲ್ಲಂಜೆಯ ವೀಣಾ ಹರೀಶ್ ಆಚಾರ್ಯ ಎಂಬುವವರಿಗೆ ಹೊಸ ಮನೆಯನ್ನೇ ನಿರ್ಮಿಸಿಕೊಟ್ಟಿದೆ.
ಸಂಸ್ಥೆಯ ವಜ್ರಮಹೋತ್ಸವ ಆಚರಣೆಯ ಅಂಗವಾಗಿ ಹಮ್ಮಿಕೊಂಡ ಗೃಹನಿರ್ಮಾಣ ಯೋಜನೆಯಡಿಯಲ್ಲಿ ವೀಣಾ ಅವರ ಮನೆಗೆ ತೆರಳಿ ಪರಿಶೀಲಿಸಿದಾಗ ಆ ಮನೆ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿತ್ತು. ಅವರ ಪತಿಯೂ ಅನಾರೋಗ್ಯದಲ್ಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆ ಮನೆಗೆ ತೆರಳಿದಾಗ ಮನೆ ಸೋರುತ್ತಿದ್ದು, ಹಂಚಿನ ಮನೆಯ ಪಕ್ಕಾಸು ತುಂಡಾಗಿ, ಸಿಮೆಂಟ್ ಶೀಟ್ ಒಡೆದು ನೀರು ಒಳಗೆ ಬೀಳುತ್ತಿತ್ತು. ಮನೆಯ ಒಳಗೆ ಕುಳಿತುಕೊಳ್ಳುವುದೂ ಕಷ್ಟವಾಗುತ್ತಿತ್ತು. ವೀಣಾ ಅವರ ಪುತ್ರನ ವಿದ್ಯಾಭ್ಯಾಸಕ್ಕೂ ಸಮಸ್ಯೆಯಾಗುತ್ತಿತ್ತು. ಈ ಮಧ್ಯೆ ಅವರ ಪತಿ ಕೂಡ ಅನಾರೋಗ್ಯದಿಂದ ನಿಧನರಾಗಿದ್ದು ಮಹಿಳೆ ಇದರಿಂದ ತುಂಬ ಕಷ್ಟಕ್ಕೊಳಗಾಗಿದ್ದರು. ಇಂಥ ಕಷ್ಟದ ಸಂದರ್ಭದಲ್ಲೇ ಆ ಮನೆಯ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡ ಎಸ್.ಕೆ ಗೋಲ್ಡ್‌ಸ್ಮಿತ್ಸ್ ಸೊಸೈಟಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಮುತುವರ್ಜಿ ವಹಿಸಿಕೊಂಡು ಕೆಲಸ ನಿರ್ವಹಿಸಿತು.
ಏಳೂವರೆ ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆಯ ನಿರ್ಮಾಣವಾಗಿದ್ದು ಮಾರ್ಚ್ 23ರಂದು ಭಾನುವಾರ ಬೆಳಗ್ಗೆ 11.30ಕ್ಕೆ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಲಿದ್ದು, ಎಸ್.ಕೆ ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಶ್ರೀ ಪಿ. ಉಪೇಂದ್ರ ಆಚಾರ್ಯ ಅಧ್ಯಕ್ಷತೆಯಲ್ಲಿ ಶಾಸಕ ಶ್ರೀ ಎ. ಉಮಾನಾಥ ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ. ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಜಯಶಂಕರ್ ಪ್ರಸಾದ್ ಎಸ್, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಜಗದೀಶ ಆಚಾರ್ಯ ಸುರಗಿರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷ ಎ.ಆನಂದ ಆಚಾರ್ಯ, ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ, ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ ವಿಶ್ವಜ್ಞಮೂರ್ತಿ, ವಿ.ಜಯ ಆಚಾರ್, ಕೆ.ಶಶಿಕಾಂತ ಆಚಾರ್ಯ, ಮಲ್ಲಪ್ಪ ಎನ್.ಪತ್ತಾರ್, ರೋಹಿಣಿ ಎಂ.ಪಿ., ಜ್ಯೋತಿ ಎಂ.ವಿ, ರಮೇಶ್ ರಾವ್ ಯು., ಕೆ.ಪ್ರಕಾಶ್ ಆಚಾರ್ಯ, ಮಂಜುನಾಥ ಆಚಾರ್ಯ, ಚಂದ್ರಶೇಖರ್ ಎ.ಎಸ್ ಪಾಲ್ಗೊಳ್ಳಲಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com