ಸಹಕಾರಿ ಶಿಕ್ಷಣದ ಜತೆಗೆ ಅಪ್‌ಡೇಟ್ ತುಂಬಾ ಮುಖ್ಯ: ನನ್ಯ ಅಚ್ಚುತ ಮೂಡೆತ್ತಾಯ ಅಭಿಪ್ರಾಯ
ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಸಹಕಾರ ಇಲಾಖೆ ದ.ಕ ಜಿಲ್ಲೆ ಇವರ ಸಹಕಾರದೊಂದಿಗೆ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ನೇತೃತ್ವದಲ್ಲಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗೆ ಜಿಲ್ಲಾಮಟ್ಟದ ತರಬೇತಿ ಕಾರ್ಯಕ್ರಮ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿವಸದನ ಸಭಾಂಗಣದಲ್ಲಿ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಕಾರ್ಯಕ್ರಮ ಉದ್ಘಾಟಿಸಿದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಮಾತನಾಡಿ, ಜಿಲ್ಲಾಮಟ್ಟದ ತರಬೇತಿ ಕಾರ್ಯಕ್ರಮ ಹೆಚ್ಚಾಗಿ ಮಂಗಳೂರಿನಲ್ಲಿ ನಡೆಯುತ್ತಿತ್ತು. ಅದರೆ ಈ ಬಾರಿ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಯೂನಿಯನ್‌ನ ಜಿಲ್ಲಾಧ್ಯಕ್ಷರಾದ ಬಳಿಕ ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಹಳ್ಳಿಗೆ ತರುವ ಮೂಲಕ ಈ ಭಾಗದ ಪುತ್ತೂರು-ಕಡಬ ತಾಲೂಕಿನ ಸಹಕಾರ ಸಂಘದ ನಿರ್ದೇಶಕರಿಗೆ, ಸಿಬ್ಬಂದಿಗೆ ಹೆಚ್ಚಿನ ಅನುಕೂಲವಾಗಿದೆ. ಪ್ರಮುಖವಾಗಿ ಸಹಕಾರಿ ಕ್ಷೇತ್ರದಲ್ಲಿ ಎಷ್ಟೇ ವರ್ಷದ ಅನುಭವ ಇದ್ದರೂ ಕೂಡ ನಾವು ಮತ್ತೆ ಮತ್ತೆ ಅಪ್‌ಡೇಟ್ ಆಗಬೇಕಾಗುತ್ತದೆ. ಯಾಕೆಂದರೆ ಸಹಕಾರ ಕ್ಷೇತ್ರದಲ್ಲಿ ಕಾನೂನಿನ ಬದಲಾವಣೆ, ವ್ಯವಸ್ಥೆಯ ಬದಲಾವಣೆ, ಹೊಸ ಹೊಸ ಸುತ್ತೋಲೆಗಳು, ನಿಯಮಗಳು ಬರುತ್ತಲೇ ಇರುತ್ತವೆ. ಆ ನಿಟ್ಟಿನಲ್ಲಿ ಇಂತಹ ತರಬೇತಿ ಕಾರ್ಯಕ್ರಮದ ಮೂಲಕ ಸಹಕಾರಿ ಶಿಕ್ಷಣದ ಜತೆಗೆ ನಾವು ಮತ್ತಷ್ಟು ಅಪ್‌ಡೇಟ್ ಆಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಹಕಾರಿ ಸಂಘಗಳನ್ನು ಬಲಪಡಿಸುವುದೇ ತರಬೇತಿಯ ಮೂಲ ಉದ್ದೇಶ
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಲೊಟ್ಟು ಮಾತನಾಡಿ, ಜಿಲ್ಲಾ ಸಹಕಾರ ಯೂನಿಯನ್ ಮೂಲಕ ಜಿಲ್ಲೆಯಲ್ಲಿ ಐದು ಕಡೆ ತರಬೇತಿ ಕಾರ್ಯಕ್ರಮ ಆಯೋಜನೆ ಮಾಡಲಿದ್ದೇವೆ. ಸಹಕಾರ ಸಂಘಗಳು, ಸಹಕಾರಿ ವ್ಯವಸ್ಥೆಯನ್ನು ಬಲಪಡಿಸುವುದೇ ತರಬೇತಿ ಕಾರ್ಯಕ್ರಮದ ಮೂಲ ಉದ್ದೇಶ. ಸಹಕಾರ ಸಂಘದ ನಿರ್ದೇಶಕರಿಗೆ, ಸಿಬ್ಬಂದಿಗಳಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವ ಮೂಲಕ ಗ್ರಾಹಕರಿಗೆ, ಸದಸ್ಯರಿಗೆ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಸಹಕಾರ ಪತ್ರಿಕೆ ಮತ್ತೆ ಆರಂಭ
ನಿಂತು ಹೋಗಿರುವ ಸಹಕಾರ ಪತ್ರಿಕೆಯನ್ನು ಏಪ್ರಿಲ್‌ನಲ್ಲಿ ಮತ್ತೆ ಆರಂಭ ಮಾಡುವುದರ ಜತೆಗೆ, ಜಿಲ್ಲಾ ಸಹಕಾರ ಯೂನಿಯನ್‌ಗೆ ಕಛೇರಿ ನಿರ್ಮಾಣ ಸೇರಿದಂತೆ ಮುಂದಿನ ಮಹಾಸಭೆಯಲ್ಲಿ ಯೂನಿಯನ್‌ನಿಂದ ಸಹಕಾರ ಸಂಘಗಳಿಗೆ ಡಿವಿಡೆಂಡ್ ನೀಡುವಂತಹ ಸಂತೋಷದಾಯಕ ಸುದ್ದಿ ಹೊರಬರಲಿದೆ ಎಂದು ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಮಂಜುನಾಥ ಎನ್.ಎಸ್ ಮಾತನಾಡಿ ಸಹಕಾರ ಸಂಘದ ನಿರ್ದೇಶಕರಾದವರು ಮೊದಲು ಸಂಘದ ಬೈಲಾ ಪ್ರತಿಯನ್ನು ತೆಗೆದುಕೊಂಡು ಅಧ್ಯಯನ ಮಾಡಬೇಕು, ಆಗ ಮಾತ್ರ ನಾವು ಸಂಘದ ಬಗ್ಗೆ, ಸಹಕಾರ ಕ್ಷೇತ್ರದ ಬಗ್ಗೆ ಕೆಲಸ ಮಾಡಲು ಸುಲಭವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಮಾತ್ರವಲ್ಲ ಕ್ಷಣದಿಂದ ಕ್ಷಣಕ್ಕೆ ಆಕ್ಟ್ ಬದಲಾವಣೆ ಆಗುತ್ತಿರುತ್ತದೆ, ಹೊಸ ಹೊಸ ನಿಯಮಗಳು ಸೇರ್ಪಡೆಯಾಗುತ್ತಿರುತ್ತದೆ, ಹಾಗಾಗಿ ನಾವು ಬೈಲಾ, ಆಕ್ಟ್ ನಿಯಮಗಳನ್ನು ತಿಳಿದುಕೊಂಡು ಕಾನೂನಾತ್ಮಕವಾಗಿಯೇ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಇಂತಹ ತರಬೇತಿ ಕಾರ್ಯಕ್ರಮಗಳು ತುಂಬ ಅವಶ್ಯಕ ಎಂದು ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕ ಸಂಜೀವ ಪೂಜಾರಿ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮಂಜುನಾಥ ರೈ ಸಾಂತ್ಯ ಹಾಗೂ ಪುತ್ತೂರು ತಾಲೂಕು ಸಹಕಾರಿ ಯೂನಿಯನ್‌ನ ಅಧ್ಯಕ್ಷ ಪ್ರವೀಣ್ ರೈ ಮೇನಾಲ ಉಪಸ್ಥಿತರಿದ್ದರು.
ಸಹಕಾರ ಕಾಯ್ದೆ ಸ್ವರೂಪ, ಆಡಳಿತ ಮಂಡಳಿ ಸದಸ್ಯರ ಹಕ್ಕು ಮತ್ತು ಜವಾಬ್ದಾರಿ ವಿಷಯದಲ್ಲಿ ದ.ಕ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯ ಅಧೀಕ್ಷಕ ಎನ್.ಜೆ ಗೋಪಾಲ್ ಮತ್ತು ಐಎಂಬಿಪಿ, ಪಿಎಲ್‌ಗಳ ವಿಷಯದಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್‌ನ ನಿವೃತ್ತ ಸಿಇಒ ವಿಶ್ವನಾಥ ನಾಯರ್ ತರಬೇತಿ ನೀಡಿದರು. ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ ಸ್ವಾಗತಿಸಿ, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ ಹಿರೇಮಠ ವಂದಿಸಿದರು. ಕಾವು ಸಹಕಾರ ಸಂಘದ ಸಿಬ್ಬಂದಿ ಸುನೀಲ್ ನಿಧಿಮುಂಡ ಕಾರ್ಯಕ್ರಮ ನಿರ್ವಹಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com