ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿಕೆ
ಉಡುಪಿ: ಮೈಕ್ರೋ ಫೈನಾನ್ಸ್‌ಗಳಿಗೆ ಸಂಬಂಧಿಸಿ ರಾಜ್ಯ ಸರಕಾರ ಹೊರಡಿಸಿರುವ ಸುಗ್ರೀವಾಜ್ಞೆಯು ಸಹಕಾರ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಸಹಕಾರ ಸಂಸ್ಥೆಗಳು ಸಾಲಗಾರರ ಮನೆಗೆ ಹೋಗಿ ಕಿರುಕುಳ ಕೊಡಬಾರದು. ಸಾಲ ವಸೂಲು ಮಾಡಲು ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿದ್ದು, ಅದರ ಪ್ರಕಾರವೇ ಸಾಲ ವಸೂಲು ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
https://chat.whatsapp.com/EbVKVnWB6rlHT1mWtsgbch
ಸೈಬರ್ ಕ್ರೈಮ್, ಕಳವು ಹಾಗೂ ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದ ಸಾಕಷ್ಟು ಪ್ರಕರಣಗಳು ಸಹಕಾರಿ ಸಂಸ್ಥೆಗಳಲ್ಲಿ ನಡೆದಿವೆ. ಆದುದರಿಂದ ಎಲ್ಲ ಸಂಸ್ಥೆಗಳು ಕಡ್ಡಾಯವಾಗಿ ಸಿಸಿಟಿವಿ ಹಾಗೂ ಸೈರನ್ ಅಳವಡಿಸಬೇಕು. ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದೆ ಏನಾದರೂ ಅನಾಹುತಗಳಾದರೆ ಅದರ ಜವಾಬ್ದಾರಿಯನ್ನು ನಾವೇ ಹೊರಬೇಕಾಗುತ್ತದೆ ಎಂದು ಹೇಳಿದರು. ಸಹಕಾರ ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿಗಳ ಕೊರತೆ ಇದ್ದು, ಈ ಬಗ್ಗೆ ಸಹಕಾರ ಸಚಿವರಿಗೆ ಮನವಿ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲೂ ಸಾಕಷ್ಟು ಹುದ್ದೆಗಳು ಖಾಲಿ ಇವೆ ಎಂದು ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ 730 ಸಹಕಾರಿ ಸಂಸ್ಥೆಗಳಿವೆ. ಅದರ ಶಾಖೆಗಳನ್ನು ಸೇರಿಸಿದರೆ ಸುಮಾರು 2300 ಸಂಸ್ಥೆಗಳಿವೆ. ಜನ ನಮ್ಮ ಮೇಲೆ ವಿಶ್ವಾಸವಿಟ್ಟು ಸುಮಾರು 3800 ಕೋಟಿ ರೂ. ಠೇವಣಿ ಇರಿಸಿದ್ದಾರೆ. ಆದರೆ ಸಿಬ್ಬಂದಿ ಕೊರತೆಯಿಂದ ಈ ಎಲ್ಲ ಸಂಸ್ಥೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡಲು ಇಲಾಖಾಧಿಕಾರಿಗಳಿಗೆ ಆಗುತ್ತಿಲ್ಲ ಎಂದು ಜಯಕರ ಶೆಟ್ಟಿ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಹಾಮಂಡಳದ ನಿರ್ದೇಶಕ ಬಿ.ಸಿ.ಲೋಕಪ್ಪ ಗೌಡ ಮಾತನಾಡಿ, ಸಹಕಾರ ಸಂಸ್ಥೆಗಳು ಜನರ ವಿಶ್ವಾಸ, ನಂಬಿಕೆಯೊಂದಿಗೆ ಕಾರ್ಯ ದಕ್ಷತೆಯಿಂದ ಮುನ್ನಡೆದರೆ ಯಶಸ್ಸು ಗಳಿಬಹುದು. ತಂತ್ರಜ್ಞಾನ ಬಳಕೆಯ ಪರಿಣಾಮ ಸೈಬರ್ ಕ್ರೈಮ್‌ಗಳು ಹೆಚ್ಚಾಗುತ್ತಿದ್ದು ಇವುಗಳ ಬಗ್ಗೆ ಸಂಸ್ಥೆಗಳು ಸಾಕಷ್ಟು ಅರಿವು ಪಡೆದುಕೊಳ್ಳಬೇಕು ಎಂದರು.
ಮಹಾಮಂಡಳದ ನಾಮನಿರ್ದೇಶಿತ ನಿರ್ದೇಶಕ ಎನ್.ಗಂಗಣ್ಣ, ಮಹಾಮಂಡಳದ ನಿರ್ದೇಶಕರಾದ ರಾಮ ರೆಡ್ಡಿ, ಶಿವಪ್ರಸಾದ್, ವೃತ್ತಿಪರ ನಿರ್ದೇಶಕಿ ಕೆ.ಸಿ.ನಾಗರತ್ನ, ಸಹಕಾರ ಇಲಾಖೆಯ ಜಂಟಿ ಉಪನಿಬಂಧಕ ಪ್ರವೀಣ್ ನಾಯ್ಕ್, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಕೆ.ಆರ್.ಲಾವಣ್ಯ ಮುಖ್ಯ ಅತಿಥಿಗಳಾಗಿದ್ದರು.
ಸಹಕಾರ ಇಲಾಖೆಯ ರಾಜ್ಯಮಟ್ಟದ ಚರ್ಚಾಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಎಂಜಿಎಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಅವರನ್ನು ಸನ್ಮಾನಿಸಲಾಯಿತು. ಮಹಾಮಂಡಳದ ಹಿರಿಯ ಸಿಬ್ಬಂದಿ ಪೂರ್ಣಿಮಾ, ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಆಡಳಿತ ಮಂಡಳಿ ಸದಸ್ಯರಾದ ಗಂಗಾಧರ ಶೆಟ್ಟಿ, ಸುಧೀರ್ ವೈ., ಬಿ.ಪ್ರದೀಪ ಯಡಿಯಾಳ, ಬಿ.ಕರುಣಾಕರ ಶೆಟ್ಟಿ, ಹರೀಶ್ ಕಿಣಿ, ಬಿ.ಅರುಣ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು. ಯೂನಿಯನ್ ಮುಖ್ಯಕಾರ್ಯನಿರ್ವಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯ ಶ್ರೀಧರ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಹಕಾರ ಸಂಘಗಳ ಕುಂದಾಪುರ ವಿಭಾಗದ ಸಹಾಯಕ ನಿಬಂಧಕಿ ಸುಕನ್ಯಾ ‘ಸಹಕಾರ ಕಾಯಿದೆಯ ಇತ್ತೀಚಿನ ತಿದ್ದುಪಡಿಗಳು’, ಪೊಲೀಸ್ ಉಪನಿರೀಕ್ಷಕಿ ಮುಕ್ತಾ ಬಾಯಿ ‘ಸೈಬರ್ ಅಪರಾಧಗಳು ಮತ್ತು ಭದ್ರತಾ ಕ್ರಮಗಳು’ ಹಾಗೂ ಸನ್ನದು ಲೆಕ್ಕಪರಿಶೋಧಕ ವರುಣ್ ಭಟ್ ‘ಸಹಕಾರ ಸಂಸ್ಥೆಗಳಲ್ಲಿ ಆರ್ಥಿಕ ಶಿಸ್ತು’ ಕುರಿತು ಉಪನ್ಯಾಸ ನೀಡಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com