ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಆರು ಸದಸ್ಯರ ಹಣಕಾಸು ನೀತಿ ಸಮಿತಿ (MPC), ವಾಣಿಜ್ಯ ಬ್ಯಾಂಕುಗಳಿಗೆ ಆರ್ ಬಿಐ ನೀಡುವ ಸಾಲದ ದರವಾದ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ನಷ್ಟು ಕಡಿತ ಮಾಡಿದ್ದು, ಇದರಿಂದ ರೆಪೋ ದರ ಶೇಕಡಾ 6.25ಕ್ಕೆ ಇಳಿದಿದೆ.
ಈ ಹಿಂದಿನ ಐದು ವರ್ಷಗಳಲ್ಲಿ ಮೊದಲ ಬಾರಿ ಆರ್‌ಬಿಐ ರೆಪೋ ದರ ಕಡಿತ ಮಾಡಿದೆ. ಎರಡು ವರ್ಷಗಳ ಕಾಲ ರೆಪೋ ದರವನ್ನು ಸ್ಥಿರವಾಗಿ ಕಾಯ್ದಿರಿಸಲಾಗಿತ್ತು. ಈ ಹಿಂದೆ ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸಿದ್ದು 2020ರ ಮೇ ತಿಂಗಳಲ್ಲಿ.
ರೆಪೋ ದರ ಶೇಕಡಾ 6.5ರಷ್ಟಿತ್ತು. ಕೋವಿಡ್ ಸಾಂಕ್ರಾಮಿಕ ರೋಗದಿಂದ ದೇಶದ ಆರ್ಥಿಕತೆ ಕನಿಷ್ಠ ಮಟ್ಟಕ್ಕೆ ಇಳಿದ ನಂತರ ಬಳಕೆಯನ್ನು ಹೆಚ್ಚಿಸಲು ಮಧ್ಯಮ ವರ್ಗಕ್ಕೆ ಇದುವರೆಗಿನ ಅತಿದೊಡ್ಡ ತೆರಿಗೆ ವಿನಾಯಿತಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿದ್ದು ಅದಾದ ಒಂದೇ ವಾರದಲ್ಲಿ ಆರ್‌ಬಿಐ ರೆಪೋ ದರ ಕಡಿತದ ಕ್ರಮ ಕೈಗೊಂಡಿದೆ. ಹಣಕಾಸು ನೀತಿ ಚೌಕಟ್ಟನ್ನು ಪರಿಚಯಿಸಿದಾಗಿನಿಂದ ಸರಾಸರಿ ಹಣದುಬ್ಬರ ಕಡಿಮೆಯಾಗಿದೆ ಎಂದು RBI ಗವರ್ನರ್ ಸಂಜಯ್ ಮಲ್ಹೋತ್ರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಾರತೀಯ ಆರ್ಥಿಕತೆಯು ಜಾಗತಿಕ ಸವಾಲುಗಳಿಗೆ ನಿರೋಧಕವಾಗಿಲ್ಲದಿದ್ದರೂ ಪ್ರಬಲವಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಬ್ಯಾಂಕ್ ಆರ್ ಬಿಐಯ ದರ ನಿಗದಿ ಸಮಿತಿಯು ತನ್ನ “ತಟಸ್ಥ” ಹಣಕಾಸು ನೀತಿಯ ನಿಲುವನ್ನು ಮುಂದುವರಿಸಲಿದೆ ಎಂದು ಮಲ್ಹೋತ್ರಾ ಘೋಷಿಸಿದರು. ಈ ವಿಧಾನವು ಹಣದುಬ್ಬರ ನಿಯಂತ್ರಣ ಮತ್ತು ಆರ್ಥಿಕ ಬೆಳವಣಿಗೆಯನ್ನು ಸಮತೋಲನಗೊಳಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.