ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ನಿರ್ದೇಶಕ ಮಂಜುನಾಥ್ ಎಸ್.ಕೆ. ಅಭಿಪ್ರಾಯ
ಬಡ ಕುಟುಂಬದ ಭವಾನಿ ಜಿ.ನಾಯಕ್ ಕುಟುಂಬಕ್ಕೆ ನಿರ್ಮಿಸಿದ ಮನೆ ಹಸ್ತಾಂತರ
ಉಡುಪಿ: ಉಡುಪಿ ಜಿಲ್ಲೆಗೆ ಕೋಡಿ ಕನ್ಯಾಣದ ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಸಿಂಧೂರವಿದ್ದಂತೆ. ಸಹಕಾರಿ ಕ್ಷೇತ್ರದಲ್ಲಿ ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇದರ ನಿರ್ದೇಶಕ ಮಂಜುನಾಥ್ ಎಸ್.ಕೆ. ಹೇಳಿದರು.
ಕೋಡಿ ಕನ್ಯಾನದ ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ತಥಾಸ್ತು ಎಂಬ ಯೋಜನೆಯಡಿ ಬಡ ಕುಟುಂಬದ ಭವಾನಿ ಜಿ.ನಾಯಕ್ ಅವರಿಗೆ ನಿರ್ಮಿಸಿಕೊಟ್ಟ ಹೊಸ ಮನೆಯನ್ನು ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
https://chat.whatsapp.com/Ge11n7QCiMj5QyPvCc0H19
ಗ್ರಾಮೀಣ ಭಾಗದಲ್ಲಿ ಸಹಕಾರಿ ರಂಗವನ್ನು ಸ್ಥಾಪಿಸಿ ಬಡವರ ಕಣ್ಣೀರೊರೆಸುವ ಕಾಯಕ ಅತ್ಯಂತ ಶ್ರೇಷ್ಠವಾದ ಕಾರ್ಯ. ಸಹಕಾರಿ ರಂಗ ವ್ಯವಹಾರಕ್ಕೆ ಸೀಮಿತಗೊಳ್ಳದೆ ಅಶಕ್ತರಿಗೆ ಮಿಡಿಯುತ್ತಿದೆ ಎಂದರೆ ಈ ಕ್ಷೇತ್ರ ಬದಲಾವಣೆಯ ಪರ್ವವನ್ನು ಕಾಣುತ್ತಿದೆ ಎಂದರ್ಥ. ಸಹಕಾರಿ ರಂಗ ಸಮತಾವಾದದ ಚಿಂತನೆಯೊಂದಿಗೆ ಗ್ರಾಮೀಣ ಜನರ ಭವಣೆ ನೀಗಿಸುತ್ತಿದೆ. ದಶಮಾನೋತ್ಸವ ಸಂಭ್ರಮದಲ್ಲಿರುವ ಈ ಸಂಘ ಇನ್ನಷ್ಟು ಸಮಾಜಮುಖಿ ಕಾರ್ಯ ಮಾಡಲಿ ಎಂದು ಹಾರೈಸಿದರು.
ಗೃಹ ನಿರ್ಮಾಣಕ್ಕೆ ಸಹಕರಿಸಿದ ಪಂಚಾಯಿತಿ ಸದಸ್ಯ ಅಂತೋನಿ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಶ್ರೀ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶಂಭು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆ ಸಮಾಜಮುಖಿ ಕಾರ್ಯಗಳಿಗೆ ಸದಾ ಕಟಿಬದ್ಧವಾಗಿದ್ದು, ಲಾಭ ಗಳಿಸುವ ಜೊತೆಗೆ ಇಂತಹ ಮಾನವೀಯ ಕೈಂಕರ್ಯವನ್ನು ಮುಂದುವರಿಸುತ್ತಲೇ ಇರಲಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಮಹಾಬಲ ಕುಂದರ್ ಮತ್ತು ನಿರ್ದೇಶಕರು, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನಾಥ ಶೆಟ್ಟಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಉಡುಪಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್., ಧಾರ್ಮಿಕ ಮುಖಂಡ ಮಾಧವ ಉಪಾಧ್ಯಾಯ, ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಕೋಡಿ ಕನ್ಯಾಣ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ್ ಮೆಂಡನ್, ಪಿಡಿಒ ರವೀಂದ್ರ ರಾವ್, ಸದಸ್ಯ ಕೃಷ್ಣ ಪೂಜಾರಿ ಪಿ., ಕಾಮಾಕ್ಷಿ ಸೌಹಾರ್ದ ಸಹಕಾರಿ ಸಂಘ ಬೈಂದೂರು ಸಿಇಒ ಶ್ರೀನಿವಾಸ, ಭಾರತ್ ವಿಕಾಸ್ ಸೌಹಾರ್ದ ಸಹಕಾರಿ ಸಿಇಒ ರಾಜು, ಕಾಮಧೇನು ಸಹಕಾರಿ ಸಂಘ ಹಂದಟ್ಟು ಸಿಇಒ ಸತೀಶ್ ನಾಯ್ಕ, ಅಗ್ರಜ ಸೌಹಾರ್ದ ಸಹಕಾರಿ ಸಂಘದ ಸಿಇಒ ಗಣೇಶ್ ಕೋಟ್ಯಾನ್, ಪಂಚಗಂಗಾವಳಿ ಸೌಹಾರ್ದ ಸಹಕಾರಿ ಸಂಘ ಗಂಗೊಳ್ಳಿ ಸಿಇಒ ಸುಬ್ರಹ್ಮಣ್ಯ, ವರಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ಉಪ್ಪುಂದ ಸಿಇಒ ಸುಧಾಕರ್, ಸನ್ನಿಧಿ ಮಹಿಳಾ ಸೌಹಾರ್ದ ಸಹಕಾರಿ ಸಂಘ ಸಾಸ್ತಾನ ಸಿಇಒ ಸುದರ್ಶನ್, ಸಾರಸ್ವತ ಸೌಹಾರ್ದ ಸಹಕಾರಿ ಸಂಘ ಮಣಿಪಾಲ ಸಿಇಒ ಭುವನೇಶ್ ಪ್ರಭು, ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟ ಸಿಇಒ ಲೋಹಿತ್ ಸಾಲಿಯಾನ್, ಆತ್ಮಿಕ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಘುರಾಮ ಮರಕಾಲ, ಕೋಡಿ ಮೀನುಗಾರ ಸಹಕಾರಿ ಸಂಘದ ನಿರ್ದೇಶಕರು, ಉಡುಪಿ ಜಿಲ್ಲಾ ವಿವಿಧ ಸಹಕಾರಿ ಸಂಸ್ಥೆಗಳ ನಿರ್ದೇಶಕರು ಸಿಬ್ಬಂದಿ ಉಪಸ್ಥಿತರಿದ್ದರು. ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಕೋಡಿ ಕನ್ಯಾಣ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.
ಎಲ್ಲ ಕಡೆಯಿಂದಲೂ ಪ್ರಶಂಸೆ
ಹತ್ತಾರು ವರ್ಷಗಳಿಂದ ಬದುಕಿಗೊಂದು ಸೂರು ಕಟ್ಟಿಕೊಳ್ಳಬೇಕು ಎಂಬ ಮಹದಾಸೆ ಹೊಂದಿದ್ದ ಕೋಡಿ ಕನ್ಯಾನದ ಭವಾನಿ ಜಿ.ನಾಯಕ್ ಕುಟುಂಬಕ್ಕೆ ಮನೆ ನಿರ್ಮಿಸುವುದು ಕನಸಾಗಿಯೇ ಉಳಿದಿತ್ತು. ಸೋರುತ್ತಿರುವ ಮೇಲ್ಛಾವಣಿಯಿಂದಾಗಿ ವಾಸ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಹಳೆಯದಾದ ಮನೆಯಲ್ಲಿ ವಾಸವಿದ್ದ ಭವಾನಿ ಕುಟುಂಬಕ್ಕೆ ಆಸರೆಯಾಗಿ ಬಂದಿದ್ದು ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ. ಪ್ರಾಯಶಃ ಭವಾನಿ ಜೆ. ಅವರ ಕುಟುಂಬ ಕನಸಿನಲ್ಲಿಯೂ ಎಣಿಸದ ರೀತಿ ಮನೆ ಅದ್ಭುತವಾಗಿ ನಿರ್ಮಾಣವಾಗಿ ಗೃಹ ಹಸ್ತಾಂತರ ಪ್ರಕ್ರಿಯೆ ಆಗಿದೆ. ಊರಿನ ಸಂಘ ಸಂಸ್ಥೆಗಳ ಹಾಗೂ ಪೋಷಕರ, ದಾನಿಗಳ ಸಹಕಾರ ಪಡೆದು ಒಂದು ಸೌಹಾರ್ದ ಸಂಸ್ಥೆಯೊಂದು ತಮ್ಮದೇ ಬಡ ಗ್ರಾಹಕರಿಗೆ ಒಂದು ಸೂರು ನಿರ್ಮಿಸಿ ಕೊಟ್ಟಿರುವುದು ಸಹಕಾರ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿರುವುದಕ್ಕೆ ಬಹಳಷ್ಟು ಹೆಮ್ಮೆ ಎನಿಸುತ್ತದೆ. ಶ್ರೀ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘವು ಹೊಸ ಮೈಲಿಗಲ್ಲನ್ನು ಸ್ಥಾಪಿಸಿ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿದೆ. ಮಾನವೀಯತೆಯ ಕಾರ್ಯಕ್ಕೆ ತಥಾಸ್ತು ಎಂಬ ಯೋಜನೆ ಸೃಷ್ಟಿಸಿ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿರುವುದು ಸಹಕಾರಿ ರಂಗದಲ್ಲಿ ಕ್ರಿಯಾಶೀಲ ನಡಿಗೆಯಾಗಿದ್ದು, ಇದಕ್ಕೆ ಎಲ್ಲ ಕಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com