ಭಾರತ ಸಹಕಾರಿ ಒಕ್ಕೂಟದಿಂದ 2023-24ರ ಅತ್ಯುತ್ತಮ ಸಹಕಾರಿ ಸಂಘವೆಂದು ಖ್ಯಾತಿ
ಸಂಘದ ಅಧ್ಯಕ್ಷ ಜಾಕೀರ್ ಮೋಹಿಯುದ್ದೀನ್ ಮಾಹಿತಿ
ರಾಯಚೂರು: ಮಾನ್ವಿ ಪಟ್ಟಣದ ಶಿವಪ್ರಿಯ ಪತ್ತಿನ ಸೌಹಾರ್ದ ಸಹಕಾರಿ ಸಂಘವು ವರದಿ ವರ್ಷದಲ್ಲಿ 70.60 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಾಕೀರ್ ಮೋಹಿಯುದ್ದೀನ್ ಹೇಳಿದರು.
ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ 10ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, 2023-24ನೇ ಸಾಲಿನಲ್ಲಿ ಶಿವಪ್ರಿಯ ಪತ್ತಿನ ಸೌಹಾರ್ದ ಸಹಕಾರಿ ಸಂಘವು ಉತ್ತಮ ಸಹಕಾರಿ ಸೇವೆಗಾಗಿ ಭಾರತ ಸಹಕಾರಿ ಒಕ್ಕೂಟದಿಂದ ಅತ್ಯುತ್ತಮ ಸಹಕಾರಿ ಸಂಘವೆಂದು ಖ್ಯಾತಿ ಪಡೆದಿದೆ ಎಂದು ತಿಳಿಸಿದರು. 2014ರಲ್ಲಿ ಆರಂಭಗೊಂಡ ಶಿವಪ್ರಿಯ ಪತ್ತಿನ ಸೌಹಾರ್ದ ಸಹಕಾರಿ ಸಂಘವು 2015-16ನೇ ಸಾಲಿನಲ್ಲಿ ಸಂಪೂರ್ಣ ರಾಯಚೂರು ಜಿಲ್ಲೆಯಲ್ಲಿ ಕಾರ್ಯ ಆರಂಭಿಸಿ, 2018-19ರ ವೇಳೆಗೆ ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ, ಕಲಬುರಗಿ ಜಿಲ್ಲೆಯನ್ನೊಳಗೊಂಡ ಕಾರ್ಯವ್ಯಾಪ್ತಿಯಲ್ಲಿ ಕೆಲಸ ವಿಸ್ತರಿಸಿಕೊಂಡಿದೆ. ಉತ್ತಮ ಸಹಕಾರಿ ಸೇವೆಗಾಗಿ ಭಾರತ ಸಹಕಾರಿ ಒಕ್ಕೂಟದಿಂದ ಉತ್ತಮ ಸಹಕಾರಿ ಎಂಬ ಪ್ರಶಸ್ತಿ ಲಭಿಸಿದೆ ಎಂದರು.
https://chat.whatsapp.com/Ge11n7QCiMj5QyPvCc0H19
ಸದ್ಯ ಒಟ್ಟು 2415 ಸದಸ್ಯರಿದ್ದು 73.27 ಲಕ್ಷ ರೂ. ಒಟ್ಟು ಷೇರು ಬಂಡವಾಳವಿದೆ. ಒಟ್ಟು ವಿವಿಧ ರೀತಿಯ ಠೇವಣಿಗಳ ಮೊತ್ತ 18,07,40,372 ಕೋಟಿಗಳಷ್ಟಿದೆ. ಕಳೆದ ಸಾಲಿಗಿಂತ ಇದು 1,92,18,488 ರೂ.ಗಳಷ್ಟು ಹೆಚ್ಚಾಗಿದೆ. ಸದಸ್ಯರು ನಮ್ಮ ಸಹಕಾರಿಯ ಮೇಲೆ ಇಟ್ಟಿರುವ ವಿಶ್ವಾಸದ ಪ್ರತೀಕ ಇದು ಎಂದು ಹೇಳಿದರು. ಕರ್ನಾಟಕ ಸೌಹಾರ್ದ ಕಾಯ್ದೆಯ ಅನ್ವಯ ಎಲ್ಲಾ ಸದಸ್ಯ ರು ಸಹಕಾರಿಯಲ್ಲಿ ಖಾತೆಗಳನ್ನು ತೆರೆದು ವ್ಯವಹರಿಸಲು ಹಾಗೂ ತಮ್ಮ ಠೇವಣಿಗಳನ್ನು ಇಟ್ಟು ಸಹಕಾರಿಯ ಏಳಿಗೆಯಲ್ಲಿ ಸಹಕರಿಸಿದ್ದಾರೆ. ಕಳೆದ ಸಾಲಿನಲ್ಲಿ ದುಡಿಯುವ ಬಂಡವಾಳವು 1916.25 ಲಕ್ಷಗಳಷ್ಟಿತ್ತು, ಈ ಬಾರಿ ಅದು 2272.96 ಲಕ್ಷಗಳಾಗಿದೆ ಎಂದರು.
ಸಹಕಾರಿಯ ಮೂಲ ಉದ್ದೇಶವಾದ ಪರಸ್ಪರ ಸಹಕಾರ-ಪರಸ್ಪರ ಅಭಿವೃದ್ಧಿಗೆ ಅನುಗುಣವಾಗಿ ಸಹಕಾರಿಯು ಈ ಸಾಲಿನಲ್ಲಿ ಸದಸ್ಯರಿಗೆ ವಿವಿಧ ಉದ್ದೇಶಗಳಿಗೆ ಸಾಲ ನೀಡಿರುತ್ತದೆ. ವರದಿ ಸಾಲಿನ ಅಂತ್ಯಕ್ಕೆ ಸಾಲ ಮತ್ತು ಮುಂಗಡಗಳು 17,87,05,483 ಆಗಿದೆ. ಪ್ರಸಕ್ತ ಸಾಲಿನಲ್ಲಿ ಸಹಕಾರಿಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಪರಿಶ್ರಮದಿಂದಾಗಿ ಸಹಕಾರಿಯು ಸಾಲ ವಸೂಲಾತಿಯಲ್ಲಿ .97.31% ರಷ್ಟು ಪ್ರಗತಿ ಸಾಧಿಸಿದೆ. ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್‌ನಲ್ಲಿ ಮುದ್ದತ್ ಠೇವಣಿ ರೂಪದಲ್ಲಿ 108.67 ಲಕ್ಷ ರೂ. ಆರ್‌ಡಿಸಿಸಿ ಬ್ಯಾಂಕ್‌ನ ಮಾನವಿ ಶಾಖೆಯಲ್ಲಿ 2614 ಲಕ್ಷ, ವಿಕಾಸ ಬ್ಯಾಂಕ್‌ನ ಸಿಂಧನೂರು ಶಾಖೆಯಲ್ಲಿ 505.04 ಲಕ್ಷ ರೂ. ತೊಡಗಿಸಿದ್ದು ಪ್ರಸಕ್ತ ಸಾಲಿನಲ್ಲಿ 70.60 ಲಕ್ಷ ನಿವ್ವಳ ಲಾಭ ಗಳಿಸಿದೆ. ಈ 10 ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ಆರ್ಥಿಕ ಪ್ರಗತಿ ಸಾಧಿಸಲು ಸಹಕಾರಿಯ ಎಲ್ಲಾ ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪರಿಶ್ರಮ ಕಾರಣವಾಗಿದೆ ಎಂದು ಜಾಕೀರ್ ಮೋಹಿಯುದ್ದೀನ್ ತಿಳಿಸಿದರು.
2017-18ರ ಸಾಲಿನಲ್ಲಿ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷರಾದ ದಿ.ಮಮತಾ ಬಸವರಾಜ ಅವರ ಆಶಯದಂತೆ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸಹಕಾರಿಯಲ್ಲಿ ಇ-ಸ್ಟಾಂಪಿಂಗ್ ಸೇವೆ ಆರಂಭಿಸಲಾಗಿದೆ. ಕೆಎಚ್‌ಬಿ ಕಾಲೊನಿಯಲ್ಲಿಸಹಕಾರಿಗೆ ಸ್ವಂತ ನಿವೇಶನ ಖರೀದಿಸಲಾಗಿದ್ದು ಸಹಕಾರಿಗೆ ಸ್ವಂತ ಕಟ್ಟಡ ಹೊಂದುವ ಉದ್ದೇಶ ಈಡೇರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಶಿವಪ್ರಿಯ ಪತ್ತಿನ ಸೌಹಾರ್ದ ಸಹಕಾರಿಯು ಆರ್ಥಿಕ ವಹಿವಾಟುಗಳಿಗಷ್ಟೇ ಸೀಮಿತವಾಗದೆ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಶಾಲೆಯ ಅಭಿವೃದ್ಧಿ ಮತ್ತು 100ರಷ್ಟು ಫಲಿತಾಂಶ ಪಡೆದಾಗ ಪುರಸ್ಕಾರ ನೀಡಿದೆ. ಶಿಕ್ಷಣ, ಪರಿಸರ, ಸಾಹಿತ್ಯ, ಸಾಂಸ್ಕೃತಿಕ, ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಒದಗಿಸಿರುವುದರೆ ಜೊತೆಗೆ ಕೋವಿಡ್ ಸಮಯದಲ್ಲಿ ಗುರುತರವಾದ ಆರ್ಥಿಕ ಸೇವೆ ಸಲ್ಲಿಸುವ ಮೂಲಕ ಸಮಾಜಮುಖಿ ಸೇವೆಗಳನ್ನು ಮಾಡಲಾಗಿದೆ ಎಂದು ಜಾಕೀರ್ ಮೋಹಿಯುದ್ದೀನ್ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉತ್ತಮ ಗ್ರಾಹಕರನ್ನು ಗೌರವಿಸಲಾಯಿತು. ಎಂ.ನಾಗರಾಜ ಕಾರ್ಯಕ್ರಮ ಉದ್ಘಾಟಿಸಿದರು. ಶಿವಪ್ರಿಯ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಬಿ ನವೀನ ಕುಮಾರ್ ಪ್ರಸಕ್ತ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಸಹಕಾರಿಯ ಉಪಾಧ್ಯಕ್ಷ ಎಂ.ವೆಂಕಯ್ಯ ಶೆಟ್ಟಿ, ಲೆಕ್ಕಪರಿಶೋಧಕ ಶ್ರೀನಿವಾಸ ನೀಲಜೇರಿ, ನಿರ್ದೇಶಕರಾದ ಶ್ರೀನಿವಾಸ ಶೆಟ್ಟಿ, ನೀಲಕಂಠಪ್ಪ ಗೌಡ, ಕಾನೂನು ಸಲಹೆಗಾರ ಎ.ಎನ್.ರಾಜು ವಕೀಲ, ವೀರೇಶ ಸ್ವಾಮಿ ರೌಡೂರು, ಗೋವಿಂದ ಪವಾರ್, ಶರಣಪ್ಪ ಮೇಧಾ, ಶಿವಮೂರ್ತಿ, ಅಶೋಕಕುಮಾರ, ಲಲಿತ ಸಿಂಗ್, ರಣಚೂಡ್ ರಾಮ್, ಪಿ.ಪ್ರಸಾದ, ರವಿಚಂದ್ರ ಕಾಜಗಾರ, ರವಿಕುಮಾರ ಪ್ರದಾನಿ, ಕವಿತಾ ಷಣ್ಮುಕಾಚಾರಿ, ಸರಸ್ವತಿ ಅಶೋಕಕುಮಾರ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಪ್ರದಾನಿ, ದೇವಣ್ಣ, ಶ್ರುತಿ, ರಾಜು ಸೇರಿದಂತೆ ಸಹಕಾರಿಯ ಸದಸ್ಯರು, ವ್ಯಾಪಾರಸ್ಥರು ಭಾಗವಹಿಸಿದ್ದರು. ಶಿಕ್ಷಕ ಅಶೋಕಕುಮಾರ ಕಾರ್ಯಕ್ರಮ ನಿರೂಪಿಸಿದರು. ಲಲಿತ ಸಿಂಗ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com