ಇಂದು ವಿಶ್ವ ತೆಂಗು ದಿನಾಚರಣೆ
ಮಂಗಳೂರು: ತೆಂಗಿನಕಾಯಿ… ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ತೆಂಗಿನಕಾಯಿಗೂ ಒಂದು ದಿನವಿದೆ. 2009ರಲ್ಲಿ ವಿಶ್ವ ತೆಂಗಿನ ದಿನವನ್ನು ಪ್ರಾರಂಭಿಸಲಾಯಿತು. ಯುನೈಟೆಡ್ ನೇಷನ್ ಎಕನಾಮಿಕ್ ಆ್ಯಂಡ್ ಸೋಶಿಯಲ್ ಕಮಿಷನ್ ಫಾರ್ ಏಷ್ಯಾ ಆ್ಯಂಡ್ ಪೆಸಿಫಿಕ್ (ಯುಎನ್-ಇಎಸ್‌ಸಿಎಪಿ) ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಎಪಿಪಿಸಿ
ಏಷ್ಯನ್ ಪೆಸಿಫಿಕ್ ತೆಂಗಿನಕಾಯಿ ಸಮುದಾಯ (ಎಪಿಸಿಸಿ) ರಚನೆಯ ದಿನವನ್ನು ಸ್ಮರಿಸಲು ಪ್ರತಿವರ್ಷ ಸೆಪ್ಟೆಂಬರ್ 2 ಅನ್ನು ವಿಶ್ವ ತೆಂಗಿನ ದಿನವಾಗಿ ಆಚರಿಸಲಾಗುತ್ತದೆ.
ಎಪಿಸಿಸಿ 18 ಸದಸ್ಯ ರಾಷ್ಟ್ರಗಳ ಅಂತರ್ ಸರಕಾರಿ ಸಂಸ್ಥೆಯಾಗಿದ್ದು, ಎಪಿಸಿಸಿಯ ಸ್ಥಾಪಕ ಸದಸ್ಯರಲ್ಲಿ ಭಾರತ ಕೂಡ ಒಂದು. ತೆಂಗಿನಕಾಯಿಗಳ ಪ್ರಾಮುಖ್ಯತೆ ಮತ್ತು ಉಪಯೋಗಗಳನ್ನು ಎತ್ತಿ ಹಿಡಿಯಲು ವಿಶ್ವ ತೆಂಗಿನ ದಿನವನ್ನು ಆಚರಿಸಲಾಗುತ್ತಿದೆ.
ಉತ್ಪಾದನೆಯಲ್ಲಿ ಭಾರತಕ್ಕೆ 3ನೇ ಸ್ಥಾನ
ವಿಶ್ವದ ಪ್ರಮುಖ ತೆಂಗಿನಕಾಯಿ ಬೆಳೆಯುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ವಾರ್ಷಿಕ ತೆಂಗಿನ ಉತ್ಪಾದನೆಯು 20.82 ಲಕ್ಷ ಹೆಕ್ಟೇರ್‌ಗೆ 2395 ಕೋಟಿ ತೆಂಗಿನಕಾಯಿ ಬೆಳೆಯಲಾಗುತ್ತದೆ ಮತ್ತು ಒಂದು ಹೆಕ್ಟೇರ್‌ಗೆ ಉತ್ಪಾದಕತೆ 11,505 ತೆಂಗಿನಕಾಯಿ ಆಗಿದೆ. ತೆಂಗಿನಕಾಯಿ ದೇಶದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಸುಮಾರು 27,900 ಕೋಟಿ ರೂ.ಕೊಡುಗೆ ನೀಡಿದೆ.
90 ದೇಶಗಳಲ್ಲಿ ಅಧಿಪತ್ಯ
ತೆಂಗಿನಕಾಯಿಯನ್ನು ವಿಶ್ವಾದ್ಯಂತ 90ಕ್ಕೂ ಹೆಚ್ಚು ದೇಶಗಳಲ್ಲಿ ಬೆಳೆಯಲಾಗುತ್ತದೆ. ತೆಂಗಿನಕಾಯಿಯ ಜಾಗತಿಕ ಉತ್ಪಾದನೆ ವಾರ್ಷಿಕವಾಗಿ ಸುಮಾರು 55 ದಶಲಕ್ಷ ಟನ್‌ಗಳಷ್ಟಿದೆ. ಇಂಡೋನೇಷ್ಯಾವು ವಿಶ್ವದಲ್ಲೇ ಅತಿದೊಡ್ಡ ತೆಂಗಿನಕಾಯಿ ರಫ್ತು ದೇಶ. ಇಲ್ಲಿ ರಫ್ತು ಪ್ರಮಾಣ 290 ಸಾವಿರ ಟನ್. ಥಾಯ್‌ಲ್ಯಾಂಡ್ 70 ಸಾವಿರ ಟನ್ ರಫ್ತು ಮಾಡುತ್ತಿದ್ದು ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನ ವಿಯೆಟ್ನಾಂಗೆ. ಇಲ್ಲಿಯ ರಫ್ತು ಪ್ರಮಾಣ 57 ಸಾವಿರ ಟನ್. ಈ ಎಲ್ಲ ದೇಶಗಳು ಒಟ್ಟಾಗಿ ವಿಶ್ವದ ಒಟ್ಟು ರಫ್ತಿನ ಶೇ.23ರಷ್ಟು ಪಾಲು ಹೊಂದಿವೆ. ಭಾರತ 11 ಸಾವಿರ ಟನ್ ತೆಂಗಿನಕಾಯಿ ರಫ್ತು ಮಾಡುತ್ತಿದೆ.
ಭಾರತದಲ್ಲಿ ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯಗಳ ಪೈಕಿ ಕೇರಳ ಮೊದಲ ಸ್ಥಾನದಲ್ಲಿದೆ. ಸಿಡಿಬಿಯ 2016-2017ರ ಕೃಷಿ ಅಂಕಿ ಅಂಶಗಳ ಪ್ರಕಾರ ಕೇರಳ 7,448.65 ಮಿಲಿಯನ್ ತೆಂಗಿನಕಾಯಿ ಉತ್ಪಾದಿಸುತ್ತಿದೆ. ಕರ್ನಾಟಕ 6,773.05, ತಮಿಳುನಾಡು 6,570.63, ಆಂಧ್ರಪ್ರದೇಶ 1,377.53 ನಂತರದ ಸ್ಥಾನದಲ್ಲಿದೆ.
ಬಹೂಪಯೋಗಿ ವಸ್ತು
ತೆಂಗಿನ ಮರವನ್ನು ಕಲ್ಪವೃಕ್ಷವೆಂದೂ ಪೂಜಿಸಲಾಗುತ್ತದೆ. ಪೂಜೆಯಿಂದ ಹಿಡಿದು ಆಹಾರ ತಯಾರಿಸುವವರೆಗೆ ಹಲವು ಬಗೆಗಳಲ್ಲಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಶೇ. 90ರಷ್ಟು ಖಾದ್ಯಗಳ ತಯಾರಿಕೆಗೆ ತೆಂಗಿನಕಾಯಿ ಬೇಕೇ ಬೇಕು. ವಿವಿಧ ಭಕ್ಷ್ಯಗಳ ತಯಾರಿಕೆಯಲ್ಲಿ ಬಳಸುವ ತೆಂಗಿನಕಾಯಿ ಆರೋಗ್ಯಕ್ಕೂ ಉತ್ತಮ. ತೆಂಗಿನಕಾಯಿಯಿಂದಲೇ ತಯಾರಿಸುವ ತೆಂಗಿನೆಣ್ಣೆ ಕೂಡ ಹಲವು ರೀತಿಯ ಉಪಯೋಗಗಳನ್ನು ಹೊಂದಿದೆ. ಇದರಲ್ಲಿ ಪೋಷಕಾಂಶ ಸಮೃದ್ಧವಾಗಿರುತ್ತದೆ. ಇಂತಹ ಬಹುಪಯೋಗಿ ತೆಂಗಿನಕಾಯಿ ಮಹತ್ವವನ್ನು ತಿಳಿಸುವ ಉದ್ದೇಶದಿಂದಲೂ ಸೆಪ್ಟೆಂಬರ್ 2 ರಂದು ವಿಶ್ವ ತೆಂಗು ದಿನವನ್ನು ಆಚರಿಸಲಾಗುತ್ತದೆ.
ಸಮಗ್ರ ಕೃಷಿ
ತೆಂಗು-ಆಧಾರಿತ ಸಮಗ್ರ ಕೃಷಿಯಲ್ಲಿ ಪ್ರಮುಖ ಬೆಳೆ ತೆಂಗಿನಕಾಯಿಯನ್ನು ಹೊರತುಪಡಿಸಿ, ಅಂತರ ಬೆಳೆಗಳಾದ ತರಕಾರಿ, ಹಣ್ಣು, ಸಾಂಬಾರ ಪದಾರ್ಥಗಳನ್ನು ಬೆಳೆಯಬಹುದು. ಇಲ್ಲಿ ರೈತರು ಜಾನುವಾರುಗಳಂತಹ ಮಿತ್ರ ಉದ್ಯಮಗಳನ್ನು ಸಹ ಸಂಯೋಜಿಸಬಹುದು. ತೆಂಗಿನ ತೋಪಿನ ಸುತ್ತ ತೇಗ, ಹಲಸು, ಬ್ರೆಡ್‌ಫ್ರೂಟ್, ಗಾರ್ಸಿನಿಯಾ ಮತ್ತು ಮಾವಿನ ಮರಗಳನ್ನು ಸಹ ಬೆಳೆಸಬಹುದು. ಒಟ್ಟಾರೆ ತೆಂಗಿನ ತೋಪಿನ ನಡುವೆ ಈ ಎಲ್ಲಾ ಮರಗಿಡ, ಬೆಳೆಗಳನ್ನು ಬೆಳೆಸುವುದರಿಂದ ಇಂಗಾಲವನ್ನು ಬೇರ್ಪಡಿಸಲು ಸಹಾಯ ಮಾಡುತ್ತದೆ ಮತ್ತು ಕೃಷಿ ಉತ್ಪಾದಕತೆಯನ್ನು ಸುಧಾರಿಸುತ್ತದೆ ಎಂದು ಅಧ್ಯಯನ ಹೇಳಿದೆ. ತೆಂಗು ಆಧಾರಿತ ಸಮಗ್ರ ಬೇಸಾಯವು ಘಟಕ ಪ್ರದೇಶದಿಂದ ಇಳುವರಿಯನ್ನು ಹೆಚ್ಚಿಸಬಹುದು ಮತ್ತು ರಸಗೊಬ್ಬರಗಳ ಉಳಿತಾಯದಿಂದ ಉಂಟಾಗುವ ಪರಿಸರ ಸ್ನೇಹಿ ಪರಿಣಾಮಗಳ ಹೊರತಾಗಿ ಕೃಷಿ ಆದಾಯದಲ್ಲಿ ಗಣನೀಯ ಹೆಚ್ಚಳವನ್ನು ತರಬಹುದು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com