ವಿಟ್ಲ: ಸಹಕಾರಿ ಚಿಂತನೆಯಲ್ಲಿ ಆದರ್ಶ ರಾಷ್ಟ್ರ ನಿರ್ಮಾಣದ ಪರಿಕಲ್ಪನೆಯಿದೆ. ಸಹಕಾರಿ ತತ್ವ ಎಂಬುದು ಭಗವಂತ ಕರುಣಿಸಿದ ಆಧ್ಯಾತ್ಮಿಕ ವರ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಭಾನುವಾರ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2023-24ನೇ ಸಾಲಿನ ಸಾಮಾನ್ಯ ಸಭೆಯಲ್ಲಿ ಆಶೀರ್ವಚನ ನೀಡಿದರು.
ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಸೇವೆಯಿದ್ದರೆ ಸಂಸ್ಥೆ ಬೆಳವಣಿಗೆಯಾಗುತ್ತದೆ. ಸಂಸ್ಥೆಯ ಅಭಿವೃದ್ಧಿಯಲ್ಲಿ ಒಬ್ಬರಿಗೊಬ್ಬರ ಸಹಕಾರ ಅಗತ್ಯವಿದೆ. ಆಧ್ಯಾತ್ಮಿಕದ ಜತೆಗೆ ಸಮಾಜ ಸೇವೆಯನ್ನು ಮಾಡುವುದಕ್ಕಾಗಿ ಸಹಕಾರವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ವಿಶಾಲ ದೃಷ್ಟಿಕೋನ ಹಾಗೂ ವಿಸ್ತಾರ ಚಿಂತನೆಯಿದ್ದಾಗ ಭವಿಷ್ಯದಲ್ಲಿ ಸದೃಢವಾಗಬಹುದು. ಯಾಂತ್ರಿಕ ಬದುಕಿಗೆ ನಿಯಂತ್ರಣ ಹಾಕದೇ ಹೋದರೆ ಮುಂದಿನ ದಿನಗಳಲ್ಲಿ ಅಪಾಯ ನಿಶ್ಚಿತ. ಸ್ವ ಉದ್ಯೋಗ, ಕೃಷಿ ಸಂಬಂಧಿ ವಿಚಾರದಲ್ಲಿ ಸಹಕಾರಿಗಳು ಹೆಚ್ಚು ತೊಡಗಿಸಿಕೊಳ್ಳಬಹುದಾಗಿದೆ ಎಂದರು.
ಸಂಘದ ಅಧ್ಯಕ್ಷ ಸಹಕಾರ ರತ್ನ ಎ.ಸುರೇಶ್ ರೈ ಮಾತನಾಡಿ ಸಹಕಾರಿ 2023-24ನೇ ಸಾಲಿನಲ್ಲಿ 19 ಶಾಖೆಯನ್ನು ಹೊಂದಿ, 302.36 ಕೋಟಿ ರೂ. ಠೇವಣಿ ಸಂಗ್ರಹಿಸಿ 248.42 ಕೋಟಿ ರೂ.ಹೊರ ಬಾಕಿ ಸಾಲವಿದೆ. 550.78 ಕೋಟಿ ರೂ. ವ್ಯವಹಾರ ದಾಖಲಿಸಿ, 4.53 ಕೋಟಿ ರೂ. ಲಾಭ ಗಳಿಸಿದೆ. ಎ ಶ್ರೇಣಿಯಲ್ಲಿರುವ ಸಂಘ ಸದಸ್ಯರಿಗೆ ಶೇ.21ರಷ್ಟು ಡಿವಿಡೆಂಡ್ ನೀಡಲಿದೆ. ಅಂಗವಿಕಲರಿಗೆ ಸ್ವಾವಲಂಬಿ ಬದುಕಿಗೆ ಬೇಕಾದ ವ್ಯವಸ್ಥೆ, ರೈತರಿಗೆ ತೋಟದಲ್ಲಿ ಪಾಠ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಮುಂದಿನ ವರ್ಷಕ್ಕೆ ಶಾಖೆಗಳನ್ನು 30ಕ್ಕೆ ಏರಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಮಾತನಾಡಿ ವ್ಯವಹಾರ ಸೇರಿ ಪ್ರಗತಿಯನ್ನು ಗಮನಿಸಿದರೆ ರಾಜ್ಯದಲ್ಲಿ ಉತ್ತಮ ಸಹಕಾರದಲ್ಲಿ ಟಾಪ್ 25ರ ಒಳಗೆ ಒಡಿಯೂರು ಸಹಕಾರಿಯಿದೆ. ಸದಸ್ಯ ಹಾಗೂ ಆಡಳಿತ ಮಂಡಳಿಯ ಕಾರ್ಯದಿಂದ ಉತ್ತಮ ರೀತಿಯಲ್ಲಿ ಸಂಸ್ಥೆ ಬೆಳೆದು ಬಂದಿದ್ದು, ಬೇರೆ ಭಾಗದಿಂದ ಅಧ್ಯಯನಕ್ಕೆ ಬರುವ ರೀತಿಯಲ್ಲಿ ಸಂಸ್ಥೆ ಬಳೆದಿದೆ ಎಂದರು. ಸಾದ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ಕೇಂದ್ರ ಕಛೇರಿ ಹಾಗೂ ಶಾಖೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಅಧಿಕಾರಿಗಳನ್ನು ಗೌರವಿಸಲಾಯಿತು.
ಲೆಕ್ಕಪರಿಶೋಧಕ ಟಿ.ರಾಮ್ ಮೋಹನ್ ರೈ, ನಿರ್ದೇಶಕರಾದ ವೇಣುಗೋಪಾಲ ಮಾರ್ಲ, ತಾರಾನಾಥ ಶೆಟ್ಟಿ, ಲೋಕನಾಥ ಶೆಟ್ಟಿ, ಶಾರದಾಮಣಿ, ಸರಿತಾ ಅಶೋಕ್, ಗಣಪತಿ ಭಟ್ ಸೇರಾಜೆ, ಮೋನಪ್ಪ ಪೂಜಾರಿ ಕೆರೆಮನೆ, ಸೋಮಪ್ಪ ನಾಯಕ್ ಕಡಬ, ಗಣೇಶ್ ಅತ್ತಾವರ, ಭವಾನಿಶಂಕರ ಶೆಟ್ಟಿ, ಅಶೋಕ್ ಕುಮಾರ್ ಯು.ಎಸ್. ಜಯಪ್ರಕಾಶ ರೈ ಎನ್., ಎಂ.ಉಗ್ಗಪ್ಪ ಶೆಟ್ಟಿ, ಕರುಣಾಕರ ಜೆ. ಉಚ್ಚಿಲ ಉಪಸ್ಥಿತರಿದ್ದರು.
ಶ್ರದ್ಧಾ ಜಿ. ಶೆಟ್ಟಿ ಪ್ರಾರ್ಥಿಸಿದರು. ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು ವರದಿ ವಾಚಿಸಿದರು. ನಿರ್ದೇಶಕ ಯು.ದೇವಪ್ಪ ನಾಯಕ್ ಉಪ್ಪಳಿಗೆ ವಂದಿಸಿದರು. ಪುತ್ತೂರು ಶಾಖೆಯ ವ್ಯವಸ್ಥಾಪಕಿ ಪವಿತ್ರಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.