ವಿಲೇವಾರಿ ತ್ವರಿತಗೊಳಿಸಲು ಆರ್‌ಬಿಐ ಕ್ರಮ
ನವದೆಹಲಿ: ಹಣಕಾಸಿಗೆ ಸಂಬಂಧಿಸಿ ಮಹತ್ವದ ಕ್ರಮವೊಂದನ್ನು ಘೋಷಿಸಿರುವ ಆರ್‌ಬಿಐ ಇನ್ಮುಂದೆ ಕೆಲವೇ ಗಂಟೆಗಳಲ್ಲಿ ಚೆಕ್ ಕ್ಲಿಯರೆನ್ಸ್‌ಗೆ ಅವಕಾಶ ನೀಡಿದೆ.
ಮುಂದೆ ಚೆಕ್ ಕ್ಲಿಯರೆನ್ಸ್‌ಗೆ ಎರಡು –ಮೂರು ದಿನ ಕಾಯಬೇಕಿಲ್ಲ. ಕೆಲವೇ ಗಂಟೆಗಳಲ್ಲಿ ಹಾಕಿದ ಚೆಕ್ ಕ್ಲಿಯರ್ ಆಗಿ ಚೆಕ್‌ನ ಮೊತ್ತ ಬ್ಯಾಂಕ್‌ಗೆ ಜಮಾ ಆಗಲಿದೆ. ಈ ಹೊಸ ವ್ಯವಸ್ಥೆಯನ್ನು ಆರ್‌ಬಿಐ ಗುರುವಾರ ಘೋಷಣೆ ಮಾಡಿದೆ.
ಪ್ರಸ್ತುತ ಬ್ಯಾಚ್ ಪ್ರೊಸೆಸಿಂಗ್ ಮಾದರಿಯಲ್ಲಿ ಚೆಕ್ ಪ್ರಾಸೆಸಿಂಗ್ ಮಾದರಿಯಲ್ಲಿ ಚೆಕ್ ಟ್ರಂಕೇಶನ್ ಸಿಸ್ಟಮ್ ಮೂಲಕ ಚೆಕ್ ನಗದು ಆಗುವ ಪ್ರಕ್ರಿಯೆ ನಡೆಯುತ್ತಿತ್ತು. ಇದಕ್ಕೆ ಕನಿಷ್ಠ ಎರಡು ದಿನಗಳ ಪ್ರಕ್ರಿಯೆ ಬೇಕಿತ್ತು. ಇದರ ಬದಲಿಗೆ ಚೆಕ್ ಹಾಕಿದ ಕೂಡಲೇ ಮಾದನ್ನು ನಗದಾಗಿ ಪರಿವರ್ತಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು. ಈ ವ್ಯವಸ್ಥೆ ಜಾರಿಯಾದರೆ ಚೆಕ್ ಹಾಕಿದ ಕೆಲವೇ ಗಂಟೆಗಳಲ್ಲಿ ಅದರ ವಿಲೇವಾರಿ ಆಗಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ.
https://chat.whatsapp.com/Ge11n7QCiMj5QyPvCc0H19
ರೆಪೋ ದರ ಯಥಾಸ್ಥಿತಿ
ಸತತ ಒಂಬತ್ತನೇ ಬಾರಿ ರೆಪೋ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನಿಸಿದೆ. ಆಹಾರ ಹಣದುಬ್ಬರ ಇಳಿಕೆಯಾಗದೆ ಇರುವ ಕಾರಣಕ್ಕೆ ಬಡ್ಡಿ ದರವನ್ನು ಈಗಿರುವ ಶೇ. 6.5ರ ಪ್ರಮಾಣದಲ್ಲೇ ಇರಿಸಲು ನಿರ್ಧರಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಮಾಹಿತಿ ನೀಡಿದ್ದಾರೆ.
ಆರ್‌ಬಿಐನ ಈ ನೀತಿಯಿಂದಾಗಿ ಗೃಹ ಸಾಲದ ಬಡ್ಡಿ ದರ ಹಾಗೆಯೇ ಉಳಿಯಲಿದ್ದು, ಮಾಸಿಕ ಕಂತುಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಗೃಹ ಸಾಲದ ಬಡ್ಡಿ ದರ ಹಾಗೂ ಮಾಸಿಕ ಇಎಂಐ ಕಂತುಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಜೂನ್‌ನಲ್ಲಿ ನಡೆದಿದ್ದ ಹಿಂದಿನ ಸಭೆಯಲ್ಲಿಯೂ ಬಡ್ಡಿ ದರಗಳನ್ನು ಹೆಚ್ಚಿಸಿರಲಿಲ್ಲ. ಈ ಹಿಂದೆ 2023ರ ಫೆಬ್ರವರಿಯಲ್ಲಿ ಕೊನೇಯ ಬಾರಿ ಆರ್‌ಬಿಐ ಬಡ್ಡಿ ದರವನ್ನು ಶೇ.0.25ರಷ್ಟು ಹೆಚ್ಚಿಸಿ, ಶೇ.6.5ಕ್ಕೆ ತಂದಿತ್ತು.
ಒಂದು ಖಾತೆಯಿಂದ ಇಬ್ಬರಿಗೆ ಯುಪಿಐ ಪಾವತಿ
ಇನ್ನೊಂದು ಮಹತ್ವದ ಹಣಕಾಸು ವಲಯದ ಕ್ರಮದಲ್ಲಿ ಆರ್‌ಬಿಐ ಒಂದು ಖಾತೆಯಿಂದ ಇಬ್ಬರಿಗೆ ಯುಪಿಐ ಪಾವತಿಯ ಅವಕಾಶ ನೀಡಿದೆ. ಯುಪಿಐ ಬಳಕೆದಾರರು ತಮ್ಮ ಖಾತೆ ಮೂಲಕ ವಹಿವಾಟು ಮಾಡುವ ಅಧಿಕಾರವನ್ನು ಮತ್ತೊಬ್ಬರಿಗೆ ನೀಡಲು ಸಾಧ್ಯವಾಗಲಿದ್ದು, ಒಂದೇ ಬ್ಯಾಂಕ್ ಖಾತೆಯ ಮೂಲಕ ಇಬ್ಬರು ವ್ಯಕ್ತಿಗಳು ಪಾವತಿ ಮಾಡಬಹುದು. ಡಿಜಿಟಲ್ ಪಾವತಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆರ್‌ಬಿಐ ಡೆಲಿಗೇಟೆಡ್ ಪೇಮೆಂಟ್ಸ್ ಸೌಲಭ್ಯ ಪರಿಚಯಿಸಿದೆ. ಈ ಮೂಲಕ ಪ್ರಾಥಮಿಕ ಬಳಕೆದಾರರು ತಮ್ಮ ಖಾತೆಯ ಮೂಲಕವೇ ನಿಗದಿತ ಮೊತ್ತದವರೆಗೂ ದ್ವಿತೀಯ ಬಳಕೆದಾರರಿಗೆ ಯುಪಿಐ ವಹಿವಾಟು ನಡೆಸಲು ಅವಕಾಶ ಸಾಧ್ಯವಾಗಲಿದೆ. ಈ ವ್ಯವಸ್ಥೆಯಲ್ಲಿ ದ್ವಿತೀಯ ಬಳಕೆದಾರರು ಯುಪಿಐ ಸಂಪರ್ಕಿತ ಹೊಂದಿರಬೇಕಿಲ್ಲವೆಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನ ಪ್ರತ್ಯೇಕ ಖಾತೆ ಹೊಂದಿರುವುದಿಲ್ಲ. ಕುಟುಂಬದ ಒಬ್ಬರ ಹೆಸರಿನಲ್ಲಿ ಬ್ಯಾಂಕ್ ಖಾತೆ ಇರುತ್ತದೆ. ಅವರಿಗೆ ಈ ವ್ಯವಸ್ಥೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.