ವಿನಯ ಕುಮಾರ್ ಸೂರಿಂಜೆ ಸಲಹೆ
ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದ. ಕ. ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿಲ್ಲೆಯ ಮಂಗಳೂರು ಉಪವಿಭಾಗದ ವಿವಿಧ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಚುನಾವಣಾ ಪೂರ್ವ ತಯಾರಿ ತರಬೇತಿ ಶಿಬಿರ ಇತ್ತೀಚೆಗೆ ದ. ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಭಾಂಗದಲ್ಲಿ ನಡೆಯಿತು.
ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ ಕಾರ್ಯಕ್ರಮ ಉದ್ಘಾಟಿಸಿ, ಸಹಕಾರ ಸಂಘಗಳಲ್ಲಿ ಚುನಾವಣೆ ಕ್ರಮಬದ್ಧವಾಗಿ ನಡೆಸಲು ಕಾಯ್ದೆ ಮತ್ತು ನಿಯಮಗಳ ಅನುಸಾರ ಮುಖ್ಯ ಕಾರ್ಯನಿರ್ವಾಹಕರು ಕಾರ್ಯನಿರ್ವಹಿಸಲು ತರಬೇತಿ ಏರ್ಪಡಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ, ಹೊಸ ಆಡಳಿತ ಮಂಡಳಿ ರಚಿಸಬೇಕಾಗಿದ್ದು ಈ ನಿಟ್ಟಿನಲ್ಲಿ ಕಾಯ್ದೆ ಮತ್ತು ನಿಯಮಾನುಸಾರವಾಗಿ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವಲ್ಲಿ ಮುಖ್ಯ ಕಾರ್ಯನಿರ್ವಾಹಕರ ಪಾತ್ರ ಮುಖ್ಯವಾಗಿದೆ ಎಂದರು.
ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್.ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುನಾವಣೆ ಸಲುವಾಗಿ ಸಂಘದ ಮುಖ್ಯಕಾರ್ಯನಿರ್ವಾಹಕರು ಮತದಾರರ ಪಟ್ಟಿ ತಯಾರಿಸುವ ವಿಧಾನ ಮೊದಲಾದವುಗಳ ಮಾಹಿತಿ ನೀಡಿದರು. ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ. ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ಸಹಕಾರ ಇಲಾಖೆ ಅಧೀಕ್ಷಕ ಎನ್.ಜೆ.ಗೋಪಾಲ್ ಚುನಾವಣೆ ಪ್ರಕ್ರಿಯೆ ಬಗ್ಗೆ ತರಬೇತಿ ನೀಡಿದರು. ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಸಾವಿತ್ರಿ ರೈ ಸ್ವಾಗತಿಸಿದರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ವಿ.ಹಿರೇಮಠ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.