ಆರ್.ಕೆ ಷಣ್ಮುಖಂ ಚೆಟ್ಟಿಯಿಂದ ನಿರ್ಮಲಾ ಸೀತಾರಾಮನ್ ತನಕ
ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಮೂರನೇ ಅವಧಿಗೆ ಆಡಳಿತಕ್ಕೇರಿದೆ. ಮಳೆಗಾಲದ ಅಧಿವೇಶನದಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೊಮ್ಮೆ ಬಜೆಟ್ ಮಂಡನೆಗೆ ರೆಡಿಯಾಗಿದ್ದಾರೆ. ಕೇಂದ್ರದಲ್ಲಿ ಹೊಸ ಸಹಕಾರ ಸಚಿವಾಲಯ ಆರಂಭವಾದ ಬಳಿಕ ಸಹಕಾರಿ ವಲಯಕ್ಕೂ ಒಂದಷ್ಟು ಕೊಡುಗೆಗಳು ದೊರೆಯುವ ನಿರೀಕ್ಷೆಗಳು ಗರಿಗೆದರಿವೆ. ಈ ಮಧ್ಯೆ ಕೇಂದ್ರ ಬಜೆಟ್ ಆರಂಭವಾದಂದಿನಿಂದ ಈ ತನಕದ ಬಜೆಟ್‌ಗಳ ವಿಶೇಷಗಳ ಬಗ್ಗೆ ಒಂದು ಮೆಲುಕು ಇಲ್ಲಿದೆ.
ಭಾರತದಲ್ಲಿ ಬಜೆಟ್ ಅನ್ನು ರಾಷ್ಟ್ರಪತಿಗಳು ನಿಗದಿಪಡಿಸಿದ ದಿನದಂದು ಲೋಕಸಭೆಯಲ್ಲಿ ಹಣಕಾಸು ಸಚಿವರು ಮಂಡಿಸುತ್ತಾರೆ. ಸಾಮಾನ್ಯವಾಗಿ ಕೇಂದ್ರದ ಹಣಕಾಸು ಸಚಿವರು ಫೆಬ್ರವರಿಯ ಕೊನೆಯ ಕೆಲಸದ ದಿನದಂದು ಸಂಸತ್ತಿನಲ್ಲಿ ಮಂಡಿಸುವುದು ನಡೆದುಕೊಂಡು ಬಮದ ಕ್ರಮವಾಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಇದನ್ನು ಬದಲಿಸಿ ಫೆಬ್ರವರಿ ಒಂದರದೇ ಬಜೆಟ್ ಮಂಡಿಸುವ ಸಂಪ್ರದಾಯ ತಂದಿದೆ. ಹಣಕಾಸು ಸಚಿವಾಲಯ, ಯೋಜನಾ ಆಯೋಗ, ಆಡಳಿತಾತ್ಮಕ ಸಚಿವಾಲಯಗಳು ಮತ್ತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಕೇಂದ್ರ ಬಜೆಟ್ ಘೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
- ಭಾರತದ ಮೊದಲ ಬಜೆಟ್
ಈಸ್ಟ್-ಇಂಡಿಯಾ ಕಂಪನಿಯಿಂದ ಬ್ರಿಟಿಷ್ ಕ್ರೌನ್‌ಗೆ ೧೮೬೦ರ ಏಪ್ರಿಲ್‌ನಲ್ಲಿ ಭಾರತದಲ್ಲಿ ಬಜೆಟ್ ಅನ್ನು ಮೊದಲ ಸಲ ಪರಿಚಯಿಸಲಾಯಿತು. ಭಾರತದಲ್ಲಿ ಮೊದಲ ಸಲ ಬಜೆಟ್ ಮಂಡಿಸಿದ್ದು ಜೇಮ್ಸ್ ವಿಲ್ಸನ್ ಎಂಬುವವರು. - ಸ್ವತಂತ್ರ ಭಾರತದ ಮೊದಲ ಬಜೆಟ್
ಭಾರತದ ೧೯೪೭ರಲ್ಲಿ ಸ್ವಾತಂತ್ರö್ಯ ಪಡೆದ ನಂತರ ಅಸ್ತಿತ್ವಕ್ಕೆ ಬಂದ ಸರ್ಕಾರದಲ್ಲಿ ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಿದರು ಆರ್.ಕೆ.ಷಣ್ಮುಖಂ ಚೆಟ್ಟಿಯವರು. ಅವರು ೧೯೪೭ರ ನವೆಂಬರ್ ೨೬ರಂದು ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಿದ್ದರು. - ಸ್ಪಷ್ಟ ಬಜೆಟ್
ಷಣ್ಮುಖಂ ಚೆಟ್ಟಿಯವರ ಬಳಿಕ ಜಾನ್ ಮಥಾಯ್ ಎಂಬುವವರು ೧೯೪೯-೫೦ರಲ್ಲಿ ಸ್ಪಷ್ಟವಾದ ಬಜೆಟ್ ಮಂಡಿಸಿದರು. ಈ ಬಜೆಟ್‌ನಲ್ಲಿ ಎಲ್ಲ ವಿವರಗಳನ್ನು ಓದಿ ಹೇಳಿ, ಹಣದುಬ್ಬರ ಮತ್ತು ಆರ್ಥಿಕ ನೀತಿ ಕುರಿತು ಉಪನ್ಯಾಸ ನೀಡಿದರು. - ಮೊದಲ ಮಧ್ಯಂತರ ಬಜೆಟ್
ಜಾನ್ ಮಥಾಯ್ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೊದಲ ಭಾರತೀಯ ಗವರ್ನರ್ ಸಿ.ಡಿ ದೇಶಮುಖ್ ಹಣಕಾಸು ಸಚಿವರಾದರು. ಅವರು ೧೯೫೧-೫೨ರಲ್ಲಿ ಮೊದಲ ಮಧ್ಯಂತರ ಬಜೆಟ್ ಮಂಡಿಸಿದರು. - ಸಂಪತ್ತು ತೆರಿಗೆಯ ಬಜೆಟ್
ದೇಶಮುಖ್ ಅವರ ಉತ್ತರಾಧಿಕಾರಿಯಾದ ಟಿ.ಟಿ.ಕೃಷ್ಣಮಾಚಾರಿ ೧೯೫೭ರಲ್ಲಿ ಸಂಪತ್ತು ತೆರಿಗೆ ಮತ್ತು ವೆಚ್ಚದ ತೆರಿಗೆ ಎಂಬ ಎರಡು ಹೊಸ ಲೆವಿಗಳನ್ನು ರಚಿಸಿದರು. ಅವರು ಕೈಗಾರಿಕೋದ್ಯಮಿಯಾಗಿದ್ದು ತೆರಿಗೆಯ ಬಗ್ಗೆ ಹೆಚ್ಚಿನ ಉತ್ಸಾಹ ತೋರಿಸಿದ್ದರು. ೧೯೬೪-೬೫ರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಕೃಷ್ಣಮಾಚಾರಿ ಭಾರತದಲ್ಲಿ ಮೊದಲ ಬಾರಿ ಗುಪ್ತ ಆದಾಯದ ಸ್ವಯಂಪ್ರೇರಿತ ಬಹಿರಂಗಪಡಿಸುವಿಕೆಯ ಯೋಜನೆಯನ್ನು ಪರಿಚಯಿಸಿದ್ದರು. - ಮೊದಲ ಪ್ರಧಾನಿ
ಜವಾಹರಲಾಲ್ ನೆಹರು ೧೯೫೮-೫೯ರಲ್ಲಿ ಕೇಂದ್ರ ಹಣಕಾಸು ಸಚಿವ ಖಾತೆಯನ್ನು ಹೊಂದಿದ್ದರು. ಆಗ ಸ್ವತಃ ಬಜೆಟ್ ಮಂಡಿಸಿದ ನೆಹರು ಬಜೆಟ್ ಮಂಡಿಸಿದ ಮೊದಲ ಪ್ರಧಾನಿ ಎನಿಸಿದ್ದರು. - ಮೊರಾರ್ಜಿ ದೇಸಾಯಿ ಬಜೆಟ್
ಭಾರತದ ಮೊದಲ ಕಾಂಗ್ರೆಸೇತರ ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿಯವರು ೧೦ ಬಾರಿ ಬಜೆಟ್ ಮಂಡಿಸಿದ್ದಾರೆ. ಅವರು ಹಣಕಾಸು ಮಂತ್ರಿ ಮತ್ತು ಉಪ ಪ್ರಧಾನಮಂತ್ರಿಯಾಗಿದ್ದಾಗ ಬಜೆಟ್ ಮಂಡಿಸಿದ್ದರು. ೧೯೫೯-೬೦ರಿಂದ ೧೯೬೩-೬೪ರವರೆಗೆ ಪ್ರತಿ ವರ್ಷ ವಾರ್ಷಿಕ ಬಜೆಟ್ ಮತ್ತು ೧೯೬೨-೬೩ರ ಮಧ್ಯಂತರ ಬಜೆಟ್ ಮಂಡಿಸಿದರು. ೧೯೬೭-೬೮ ಮತ್ತು ೧೯೬೯-೭೦ರ ನಡುವಿನ ಮೂರು ವರ್ಷಗಳ ವಾರ್ಷಿಕ ಬಜೆಟ್ ಮತ್ತು ೧೯೬೭-೬೮ರ ಮಧ್ಯಂತರ ಬಜೆಟನ್ನೂ ಮೊರಾರ್ಜಿ ದೇಸಾಯಿಯವರು ಮಂಡಿಸಿದ್ದಾರೆ. - ಬಡವರ ಬಜೆಟ್
ವಿ.ಪಿ.ಸಿಂಗ್ ವಿತ್ತ ಸಚಿವರಾಗಿದ್ದಾಗ ಬಡವರ ಬಜೆಟ್ ಮಂಡಿಸಿ ಸುದ್ದಿಯಾಗಿದ್ದರು. ಅವರು ಮಂಡಿಸಿದ ೧೯೮೬ರ ಬಜೆಟ್‌ನಲ್ಲಿ ರೈಲ್ವೆ ಹಮಾಲಿಗಳು, ರಿಕ್ಷಾ ಚಾಲಕರು, ಚಮ್ಮಾರರಿಗೆ ಹಲವಾರು ಸಬ್ಸಿಡಿ, ಬ್ಯಾಂಕ್ ಸಾಲ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆ, ಪುರಸಭೆಯ ಸ್ವೀಪರ್‌ಗಳಿಗೆ ಅಪಘಾತ ವಿಮಾ ಯೋಜನೆಗಳನ್ನು ಪ್ರಸ್ತಾಪಿಸಿದ್ದರು. - ಕಾರ್ಪೊರೇಟ್ ತೆರಿಗೆ
ಬಜೆಟ್‌ನಲ್ಲಿ ಕಾರ್ಪೊರೇಟ್ ತೆರಿಗೆ (ಕನಿಷ್ಠ ಪರ್ಯಾಯ ತೆರಿಗೆ)ಯನ್ನು ಮೊದಲ ಬಾರಿ ಪರಚಯಿಸಿದ್ದು ರಾಜೀವ್ ಗಾಂಧಿಯವರು. ೧೯೮೭ರ ಬಜೆಟ್‌ನಲ್ಲಿ ಇದನ್ನವರು ಪರಿಚಯಿಸಿದರು. - ಗರಿಷ್ಠ ಬಜೆಟ್
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವರು ಗರಿಷ್ಠ ಹತ್ತು ಬಜೆಟ್‌ಗಳನ್ನು ಮಂಡಿಸಿದ್ದು, ಒಂಬತ್ತು ಬಜೆಟ್ ಮಂಡಿಸಿರುವ ಪಿ.ಚಿದಂಬರಂ ಎರಡನೇ ಸ್ಥಾನದಲ್ಲಿದ್ದಾರೆ. - ಮುದ್ರಣ ಬಜೆಟ್
೧೯೫೫ರವರೆಗೆ, ಭಾರತದ ಬಜೆಟ್ ಅನ್ನು ಇಂಗ್ಲಿಷ್‌ನಲ್ಲಿ ಮಾತ್ರ ಮಂಡಿಸಲಾಗುತ್ತಿತ್ತು. ಆದರೆ ಬಜೆಟ್ ದಾಖಲೆಗಳನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮುದ್ರಿಸಲಾಗುತ್ತಿತ್ತು. - ಬ್ಲ್ಯಾಕ್ ಬಜೆಟ್
೫೫೦ ಕೋಟಿ ರೂ.ಗಳ ಹೆಚ್ಚಿನ ಬಜೆಟ್ ಕೊರತೆಯಿಂದಾಗಿ ೧೯೭೩-೭೪ರಲ್ಲಿ ಯಶವಂತ್‌ರಾವ್ ಬಿ.ಚವಾಣ್ ಮಂಡಿಸಿದ ಬಜೆಟ್ ಅನ್ನು “ಕಪ್ಪು ಬಜೆಟ್’ ಎಂದು ಪರಿಗಣಿಸಲಾಗಿದೆ. ಆಗ ದೇಶದ ಪ್ರಧಾನಿಯಾಗಿದ್ದದು ಇಂದಿರಾ ಗಾಂಧಿ. - ನವಯುಗದ ಬಜೆಟ್
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ೧೯೯೧ರಲ್ಲಿ ಡಾ.ಮನಮೋಹನ್ ಸಿಂಗ್ ವಿತ್ತ ಸಚಿವರಾಗಿದ್ದಾಗ ಮಂಡಿಸಿದ ಬಜೆಟ್ ಅನ್ನು “ನವಯುಗದ ಬಜೆಟ್’ ಎಂದು ಹೇಳಲಾಗಿದೆ. ಇದರಲ್ಲಿ ಆಮದು-ರಫ್ತು ನೀತಿಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಭಾರತೀಯ ಆರ್ಥಿಕತೆಯನ್ನು ಹೆಚ್ಚು ಜಾಗತಿಕ ವ್ಯಾಪಾರ ಸ್ನೇಹಿಯಾಗಿ ಮಾಡಲು ಕ್ರಮ ಕೈಗೊಳ್ಳಲಾಯಿತು. - ಫೆಬ್ರವರಿ ೧ರಂದು ಮಂಡನೆ
೨೦೧೬ರವರೆಗೆ ಕೇಂದ್ರ ಬಜೆಟ್ ಅನ್ನು ಫೆಬ್ರವರಿ ತಿಂಗಳ ಕೊನೆಯ ಕೆಲಸದ ದಿನದಂದು ಮಂಡಿಸಲಾಗುತ್ತಿತ್ತು. ಆದರೆ ೨೦೧೭ರಿಂದ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ತಂದ ಬದಲಾವಣೆಗಳ ಕಾರಣದಿಂದ ಫೆಬ್ರವರಿ ೧ರಂದು ಬಜೆಟ್ ಮಂಡಿಸಲು ಆರಂಭಿಸಲಾಯಿತು. - ರೈಲ್ವೆ ಬಜೆಟ್ ವಿಲೀನ
ನಿರಂತರ ೯೨ ವರ್ಷ ಪ್ರತ್ಯೇಕವಾಗಿ ಮಂಡಿಸಲ್ಪಟ್ಟಿದ್ದ ರೈಲ್ವೆ ಬಜೆಟ್ ೨೦೧೭ರಲ್ಲಿ ಕೇಂದ್ರ ಬಜೆಟ್‌ನಲ್ಲಿ ವಿಲೀನಗೊಂಡಿತು. - ಮೊದಲ ಮಹಿಳಾ ವಿತ್ತ ಸಚಿವೆ
ಪೂರ್ಣ ಪ್ರಮಾಣದಲ್ಲಿ ಕೇಂದ್ರ ಬಜೆಟ್ ಮಂಡಿಸಿದ ಮೊದಲ ಮಹಿಳಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಇಂದಿರಾ ಗಾಂಧಿಯವರು ೧೯೭೦-೭೧ರಲ್ಲಿ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡಾಗ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎನಿಸಿದ್ದರು. ಆಗ ಅವರು ಪ್ರಧಾನಿ ಕೂಡ ಆಗಿದ್ದರು. - ಸುದೀರ್ಘ ಅವಧಿಯ ಭಾಷಣ
೨೦೨೦ರ ಫೆಬ್ರವರಿ ೧ರಂದು ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ೨ ಗಂಟೆ ೪೨ ನಿಮಿಷ ಬಜೆಟ್ ಭಾಷಣ ಮಾಡಿದ್ದರು. ಇದು ಭಾರತದ ಬಜೆಟ್ ಇತಿಹಾಸದ ಅತಿ ಸುದೀರ್ಘ ಬಜೆಟ್ ಭಾಷಣ ಎನಿಸಿದೆ. ಇನ್ನೂ ಎರಡು ಪುಟಗಳು ಉಳಿದಿರುವಾಗಲೇ ನಿರ್ಮಲಾ ಅವರು ಅಸ್ವಸ್ಥರಾಗಿದ್ದರಿಂದ ಮಾತು ಮೊಟಕುಗೊಳಿಸಿದ್ದರು. ಈ ಭಾಷಣದ ಅವಧಿಯಲ್ಲಿ ಅವರು ತಮ್ಮದೇ ೨ ಗಂಟೆ ೧೭ ನಿಮಿಷಗಳ ೨೦೧೯ರ ತಮ್ಮ ಸ್ವಂತ ದಾಖಲೆ ಮುರಿದಿದ್ದರು. - ಕಾಗದರಹಿತ ಬಜೆಟ್
೨೦೨೧ರಲ್ಲಿ ನಿರ್ಮಲಾ ಸೀತಾರಾಮನ್ ಮೊದಲ ಬಾರಿ ಬಜೆಟ್ ಅನ್ನು ಕಾಗದರಹಿತವಾಗಿ ಮಾಡಿದರು. ಟ್ಯಾಬ್ಲೆಟ್‌ನಿಂದ ಓದುತ್ತ ಕಡಿಮೆ ಅವಧಿಯ ಬಜೆಟ್ ಭಾಷಣವನ್ನೂ ಮಾಡಿದರು. ೧ ಗಂಟೆ ೪೦ ನಿಮಿಷಗಳ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ೧೦,೫೦೦ ಪದಗಳನ್ನು ಓದಿದ್ದರು. ೨೦೨೨ರಲ್ಲಿ ಅವರು ೧ ಗಂಟೆ ೨೦ ನಿಮಿಷಗಳ ಭಾಷಣ ಮಾಡಿದ್ದರು. ೧೯೭೭ರಲ್ಲಿ ಆಗಿನ ಹಣಕಾಸು ಸಚಿವ ಹೀರೂಭಾಯಿ ಮುಲ್ಜಿಭಾಯಿ ಪಟೇಲ್ ಮಾಡಿದ ಅತ್ಯಂತ ಕಡಿಮೆ ಬಜೆಟ್ ಭಾಷಣ ೮೦೦ ಪದಗಳಿಗೆ ಸೀಮಿತವಾಗಿತ್ತು. - ಸಮಯದ ಬದಲಾವಣೆ
೧೯೯೯ರವರೆಗೆ ಬ್ರಿಟಿಷರ ಕಾಲದ ಪದ್ಧತಿಯಂತೆ ಫೆಬ್ರವರಿಯ ಕೊನೆಯ ಕೆಲಸದ ದಿನ ಸಂಜೆ ೫ ಗಂಟೆಗೆ ಕೇಂದ್ರ ಬಜೆಟ್ ಮಂಡನೆಯಾಗುತ್ತಿತ್ತು. ಎನ್‌ಡಿಎ ಸರ್ಕಾರದಲ್ಲಿ ಯಶವಂತ್ ಸಿನ್ಹಾ ಅವರು ೧೯೯೯ರಲ್ಲಿ ಬಜೆಟ್ ಮಂಡನೆಯ ಸಮಯವನ್ನು ಬೆಳಗ್ಗೆ ೧೧ ಗಂಟೆಗೆ ಬದಲಾಯಿಸಿದರು. ಅರುಣ್ ಜೇಟ್ಲಿ ೨೦೧೭ರ ಫೆಬ್ರವರಿ ೧ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಲು ಪ್ರಾರಂಭಿಸಿದರು. - ಡ್ರೀಮ್ ಬಜೆಟ್
೧೯೯೭-೯೮ರ ಬಜೆಟ್‌ನಲ್ಲಿ ಪಿ.ಚಿದಂಬರಂ ಅವರು ಲಾಫರ್ ಕರ್ವ್ ತತ್ವ ಬಳಸಿಕೊಂಡು ತೆರಿಗೆ ದರ ಕಡಿಮೆ ಮಾಡಿ ಸಂಗ್ರಹ ಹೆಚ್ಚಿಸಿದರು. ಅವರು ವ್ಯಕ್ತಿಗಳಿಗೆ ಗರಿಷ್ಠ ಕನಿಷ್ಠ ಆದಾಯ ತೆರಿಗೆ ದರವನ್ನು ೪೦ ಪ್ರತಿಶತದಿಂದ ೩೦ ಪ್ರತಿಶತಕ್ಕೆ ಮತ್ತು ದೇಶೀಯ ಕಂಪನಿಗಳಿಗೆ ೩೫ ಪ್ರತಿಶತಕ್ಕೆ ಕಡಿತಗೊಳಿಸಿದರು. ಕಪ್ಪು ಹಣ ಮರಳಿ ಪಡೆಯಲು ಆದಾಯದ ಯೋಜನೆಯನ್ನು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸುವುದು ಸೇರಿದಂತೆ ಹಲವಾರು ಪ್ರಮುಖ ತೆರಿಗೆ ಸುಧಾರಣೆಗಳನ್ನು ಬಿಡುಗಡೆ ಮಾಡಿದರು. ಹೀಗಾಗಿ ಇದಕ್ಕೆ “ಡ್ರೀಮ್ ಬಜೆಟ್’ ಎಂದು ಉಲ್ಲೇಖಿಸಲಾಗಿದೆ. - ಮಿಲೇನಿಯಂ ಬಜೆಟ್
೨೦೦೦ರಲ್ಲಿ ಯಶವಂತ್ ಸಿನ್ಹಾ ಮಿಲೇನಿಯಮ್ ಬಜೆಟ್ ಮಂಡಿಸಿದ್ದು ಭಾರತದ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮದ ಬೆಳವಣಿಗೆಗೆ ಮಾರ್ಗಸೂಚಿ ಹಾಕಿಕೊಟ್ಟಿತು. ಅದು ಸಾಫ್ಟ್ ವೇರ್ ರಫ್ತುದಾರರ ಮೇಲಿನ ಪ್ರೋತ್ಸಾಹವನ್ನು ಹಂತಹಂತವಾಗಿ ತೆಗೆದುಹಾಕಿದ್ದಲ್ಲದೆ, ಕಂಪ್ಯೂಟರ್‌ಗಳು ಮತ್ತು ಕಂಪ್ಯೂಟರ್ ಪರಿಕರಗಳಂತಹ ೨೧ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಿತು. - ರೋಲ್‌ಬ್ಯಾಕ್ ಬಜೆಟ್
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಯಶವಂತ್ ಸಿನ್ಹಾ ೨೦೦೨-೦೩ರಲ್ಲಿ ಮಂಡಿಸಿದ ಬಜೆಟ್ ರೋಲ್‌ಬ್ಯಾಕ್ ಬಜೆಟ್ ಎಂದು ಜನಪ್ರಿಯವಾಗಿದೆ. ಏಕೆಂದರೆ ಅದರಲ್ಲಿ ಹಲವಾರು ಪ್ರಸ್ತಾಪಗಳನ್ನು ಹಿಂತೆಗೆದುಕೊಳ್ಳಲಾಯಿತು. - ಶತಮಾನದ ಬಜೆಟ್
ನಿರ್ಮಲಾ ಸೀತಾರಾಮನ್ ಮಂಡಿಸಿದ ೨೦೨೧ರ ಬಜೆಟ್ “ಶತಮಾನದ ಬಜೆಟ್’ ಎಂದು ಪರಿಗಣಿತವಾಗಿದೆ. ಏಕೆಂದರೆ ಇದು ಆಕ್ರಮಣಕಾರಿ ಖಾಸಗೀಕರಣ ತಂತ್ರ ಮತ್ತು ದೃಢವಾದ ತೆರಿಗೆ ಸಂಗ್ರಹಗಳನ್ನು ಅವಲಂಬಿಸಿ ಮೂಲಸೌಕರ್ಯ ಮತ್ತು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡುವ ಮೂಲಕ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಆಶಯವನ್ನು ಹೊಂದಿತ್ತು.