ಬ್ಯಾಂಕ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಮಾಹಿತಿ ಉಡುಪಿ: ಕರಾವಳಿ ಭಾಗದ ಪ್ರತಿಷ್ಠಿತ ಪಟ್ಟಣ ಸಹಕಾರಿ ಸಂಸ್ಥೆ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ 2023-24ನೇ ಸಾಲಿನಲ್ಲಿ 921 ಕೋಟಿ ರೂ. ವ್ಯವಹಾರ ನಡೆಸಿದ್ದು, 17.50 ಕೋಟಿ ರೂ. ಲಾಭ ಗಳಿಸಿದೆ. ಕಳೆದ 14 ವರ್ಷಗಳಿಂದ ನಿರಂತರ ಸದಸ್ಯ, ಗ್ರಾಹಕರಿಗೆ ಅತಿ ಹೆಚ್ಚು ಡಿವಿಡೆಂಡ್ ನೀಡುತ್ತಿರುವ ಕರಾವಳಿ ಭಾಗದ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ಪಾತ್ರವಾಗಿದೆ. ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ. ಮಹಾಲಕ್ಷ್ಮಿ ಕೋ- ಆಪರೇಟಿವ್ ಬ್ಯಾಂಕ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ಶಾಖೆಗಳನ್ನು ಹೊಂದಿದ್ದು 40 ಸಾವಿರ ಗ್ರಾಹಕರ ಮೂಲಕ ವ್ಯವಹಾರ ನಡೆಸುತ್ತಿದೆ.
2023-24ನೇ ಸಾಲಿನಲ್ಲಿ 532 ಕೋಟಿ ರೂ. ಠೇವಣಿ, 389 ಕೋಟಿ ರೂ. ಸಾಲ ಮತ್ತು ಮುಂಗಡ, 34 ಕೋಟಿ ರೂ. ಪಾಲು ಬಂಡವಾಳ ಹಾಗೂ ಶೂನ್ಯ ನಿವ್ವಳ ಅನುತ್ಪಾದಕ ಸಾಲದ ಪ್ರವಾಣದೊಂದಿಗೆ ಉತ್ತಮ ಪ್ರಗತಿ ಸಾಧಿಸಿದೆ ಎಂದು ಮಾಹಿತಿ ನೀಡಿದರು. ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್‌ನ ವತಿಯಿಂದ 1,500 ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ವೆಚ್ಚದಲ್ಲಿ ಪ್ರತಿಭಾ ಪುರಸ್ಕಾರ ವಿತರಿಸಲಾಗಿದೆ. ಉಚ್ಚಿಲ ದಸರಾ ಮಹೋತ್ಸವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಪ್ರಥಮ ಬಾರಿ ಉಡುಪಿ ಜಿಲ್ಲೆಯಲ್ಲಿ ಪೊಣ್ಣು ಪಿಲಿ ನಲಿಕೆ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿದೆ. ಮಹಿಳಾ ದಿನಾಚರಣೆ ನಿಮಿತ್ತ ಬ್ಯಾಂಕ್ ವತಿಯಿಂದ ಮಹಿಳಾ ಸಾಧಕಿಯರನ್ನು ಅಭಿನಂದಿಸಿ, ಉಡುಪಿ ಜಿಲ್ಲೆಯ ಶಾಲಾ -ಕಾಲೇಜುಗಳಿಗೆ 15 ಸ್ಯಾನಿಟರಿ ನ್ಯಾಪ್ಕಿನ್ ಡಿಸ್ಟ್ರಾಯರ್ ಯಂತ್ರ ವಿತರಿಸಿದ್ದು, ಸಾವಾಜಿಕ ಬದ್ಧತೆ ಮೆರೆದಿದೆ ಎಂದು ಯಶ್‌ಪಾಲ್ ಸುವರ್ಣ ಮಾಹಿತಿ ನೀಡಿದರು.
ಹಲವು ಪ್ರಶಸ್ತಿಗಳ ಸರಮಾಲೆ ಮಹಾಲಕ್ಷ್ಮಿ ಕೋ- ಆಪರೇಟಿವ್ ಬ್ಯಾಂಕ್‌ನ ಸರ್ವಾಂಗೀಣ ಪ್ರಗತಿಯನ್ನು ಗುರುತಿಸಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ವತಿಯಿಂದ ‘ಉಡುಪಿ ಜಿಲ್ಲೆಯ ಉತ್ತಮ ಪಟ್ಟಣ ಸಹಕಾರಿ ಬ್ಯಾಂಕ್’ ಪ್ರಶಸ್ತಿ, ನ್ಯಾಶನಲ್ ಫೆಡರೇಶನ್ ಆಫ್ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ಸ್ ಆ್ಯಂಡ್ ಕ್ರೆಡಿಟ್ ಸೊಸೈಟಿ ಲಿ. ವತಿಯಿಂದ ರಾಷ್ಟ್ರಮಟ್ಟದ ‘ಬೆಸ್ಟ್ ಇನ್‌ವೆಸ್ಟ್‌ಮೆಂಟ್ ಇನೀಶಿಯೇಟಿವ್ ಅವಾರ್ಡ್’ ಹಾಗೂ ಮಹಾರಾಷ್ಟ್ರದ ಆವಿಸ್ ಪಬ್ಲಿಕೇಶನ್ ನೀಡುವ ಪ್ರತಿಷ್ಠಿತ ‘ಬ್ಯಾಂಕೋ ಬ್ಲೂ ರಿಬ್ಬನ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ರಾಜ್ಯಾದ್ಯಂತ ವಿಸ್ತರಣೆ ಪ್ರಸ್ತುತ ಬ್ಯಾಂಕ್‌ನ ವ್ಯವಹಾರ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬೆಂಗಳೂರು, ಬೆಂಗಳೂರು ಗ್ರಾವಾಂತರ, ಹಾಸನ, ಮೈಸೂರು, ಮಂಡ್ಯ ಜಿಲ್ಲೆಗೆ ಸೀಮಿತವಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಬ್ಯಾಂಕ್‌ನ ಕಾರ್ಯಕ್ಷೇತ್ರ ವಿಸ್ತರಿಸಲಾಗುವುದು. ಮೊಬೈಲ್ ಬ್ಯಾಂಕಿಂಗ್, ಐಎಂಪಿಎಸ್ ಸೇವೆ ಸಹಿತ ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ. ಗ್ರಾಹಕರಿಗೆ ಹೆಚ್ಚಿನ ಸೇವೆ ನೀಡುವ ದಷ್ಟಿಯಲ್ಲಿ ಯುಪಿಐ ಸೇವೆ ಕೂಡ ಲಭ್ಯವಾಗಲಿದೆ ಎಂದು ಯಶ್‌ಪಾಲ್ ಸುವರ್ಣ ಹೇಳಿದರು.