ನಾಡಿನ ಸಮಸ್ತ ಜನತೆಗೆ ನವರಾತ್ರಿಯ ಮೊದಲ ದಿನದ ಶುಭಾಶಯಗಳು
ದುರ್ಗೆಯ ನವ ಅವತಾರಗಳಲ್ಲಿ ಒಬ್ಬಳು ಶೈಲಪುತ್ರಿ. ಪರ್ವತರಾಜ ಹಿಮವಂತನ ಮಗಳು ಈಕೆ. ಶೈಲ ಎಂದರೆ ಬೆಟ್ಟ (ಪರ್ವತ) ಎಂದರ್ಥ. ಪ್ರಜಾಪ್ರತಿ ಬ್ರಹ್ಮನ ಮಗ ದಕ್ಷ ತನ್ನ 27 ಹೆಣ್ಣು ಮಕ್ಕಳನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಿಸಿದ್ದ ಹಾಗೂ ಮತ್ತೊಬ್ಬ ಮಗಳು ದಾಕ್ಷಾಯಿಣಿಯನ್ನು ಸ್ಮಶಾನವಾಸಿ ಶಿವನನ್ನು ವರಿಸುತ್ತಾಳೆ. ಶಿವನನ್ನು ಕಂಡರೆ ದಕ್ಷನಿಗೆ ಬಹಳಾ ಸಿಟ್ಟು. ತನ್ನ ಸೌಂದರ್ಯವತಿ ಮಗಳು ಸ್ಮಶಾನವಾಸಿಯಾದ ಶಿವನು ಮದುವೆಯಾಗಿದ್ದನ್ನು ಸಹಿಸಲಲಾಗಲಿಲ್ಲಾ.
ಒಂದು ಬಾರಿ ದಕ್ಷ ಮಹಾ ಯಜ್ಞವೊಂದನ್ನು ಆಯೋಜಿಸಿ ಸಕಲರನ್ನೂ ಆಹ್ವಾನಿಸಿದ್ದನು. ಬ್ರಹ್ಮ, ಶಿವಾದಿಯಾಗಿ ಎಲ್ಲರೂ ಬಂದಿದ್ದರು. ಯಜ್ಞಕ್ಕೆ ದಕ್ಷ ಆಗಮಿಸಿದಾಗ ಗೌರವಾರ್ಥವಾಗಿ ಬ್ರಹ್ಮ ಮತ್ತು ಶಿವನನ್ನು ಬಿಟ್ಟು ಉಳಿದೆಲ್ಲರೂ ಎದ್ದು ನಿಂತರು. ಶಿವ ಏಳದೇ ಇದ್ದದ್ದು ಹಮನಿಸಿದ ದಕ್ಷನಿಗೆ ಕೋಪ ನೆತ್ತಿಗೇರಿತು. ಇದರ ಪ್ರತೀಕಾರಕ್ಕಾಗಿ ದಕ್ಷ ಮತ್ತೊಂದು ಯಜ್ಞವನ್ನು ಆಯೋಜಿಸಿ ಅದಕ್ಕೆ ಶಿವ ಮತ್ತು ತನ್ನ ಮಗಳು ದಾಕ್ಷಾಯಿಣಿಯನ್ನು ಹೊರತುಪಡಿಸಿ ಉಳಿದೆಲ್ಲರನ್ನು ಆಹ್ವಾನಿಸುವನು. ತನ್ನ ತಂದೆಯವರು ಯಜ್ಞ ಮಾಡುತ್ತಿರುವುದನ್ನು ಅರಿತ ದಾಕ್ಷಾಯಿಣಿ ಅಲ್ಲಿಗೆ ಹೋಗಲು ಪತಿ ಶಿವನಲ್ಲಿ ಅನುಮತಿಯನ್ನು ಕೇಳುತ್ತಾಳೆ. ತವರು ಮನೆಯಾದರೂ ಸರಿ ಆಹ್ವಾನ ಇಲ್ಲದೇ ಹೋಗಬಾರದು ಎಂದು ಶಿವ ಹೇಳಿದರೂ ದಾಕ್ಷಾಯಿಣಿಯ ಒತ್ತಾಯಕ್ಕೆ ಮಣಿದು ಇಬ್ಬರೂ ಹೋಗುತ್ತಾರೆ. ಅದನ್ನೇ ಕಾಯುತ್ತಿದ್ದ ದಕ್ಷ ತನ್ನ ಮಗಳು ಮತ್ತು ಅಳಿಯ (ಶಿವ) ಇಬ್ಬರನ್ನೂ ಅವಮಾನಿಸುತ್ತಾನೆ. ತನ್ನ ಪತಿ ಶಿವ ಪರಮಾತ್ಮನನ್ನು ಅವಮಾನಿಸಿದ್ದಕ್ಕೆ ಮನನೊಂದ ದಾಕ್ಷಾಯಿಣಿಯು ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಈಕೆ ಮುಂದಿನ ಜನ್ಮದಲ್ಲಿ ಹಿಮವಂತನ ಮಗಳು ಶೈಲಪುತ್ರಿಯಾಗಿ ಜನ್ಮತಾಳುತ್ತಾಳೆ.
ದಸರಾ ಸಂದರ್ಭದಲ್ಲಿ ಮದುವೆಯಾದ ಹಣ್ಣುಮಕ್ಕಳನ್ನು ತವರಿಗೆ ಆಹ್ವಾನಿಸಿ ಗೌರವಿಸುವ ಸಂಪ್ರದಾಯ ಇದೇ ಕಾರಣಕ್ಕೆ ಬೆಳೆದುಬಂದಿದೆ ಎಂದು ಹೆಳಲಾಗುತ್ತದೆ. ಶೈಲಪುತ್ರಿಯು ದುರ್ಗೆಯ ಅವತಾರವಾದ್ದರಿಂದ ಆದಿಶಕ್ತಿ ಎಂದು ಗುರುತಿಸಲ್ಪಡುತ್ತಾಳೆ. ಶ್ವೇತ ವಸ್ತ್ರಧಾರಿಯಾಗಿರುವ ಶೈಲಪುತ್ರಿಗೆ ಮಲ್ಲಿಗೆ ಹೂವೆಂದರೆ ಅಚ್ಚುಮೆಚ್ಚು. ಗೂಳಿ ಈಕೆಯ ವಾಹನವಾದ್ದರಿಂದ ವೃಷರುಧ ಎಂಬ ಹೆಸರೂ ಇದೆ.