21 ಸದಸ್ಯರ ಆಡಳಿತ ಮಂಡಳಿ ರಚನೆಗೆ ಚುನಾವಣೆ; ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 16ರಂದು
ನವದೆಹಲಿ: ನ್ಯಾಷನಲ್ ಫೆಡರೇಶನ್ ಆಫ್ ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್ಸ್ ಲಿಮಿಟೆಡ್ (NAFSCOB)ನ 21 ಸದಸ್ಯರ ಆಡಳಿತ ಮಂಡಳಿ ರಚನೆಗೆ ಚುನಾವಣಾ ಪ್ರಕ್ರಿಯೆ ಚುರುಕುಗೊಂಡಿದ್ದು, ನವೆಂಬರ್ 5ರಂದು ಚುನಾವಣೆ ನಡೆಯಲಿದೆ.
https://chat.whatsapp.com/FCEnlTkAKCC0MGPhXtX4i4
NAFSCOBನಲ್ಲಿ ಒಟ್ಟು 33 ರಾಜ್ಯ ಸಹಕಾರಿ ಬ್ಯಾಂಕ್‌ಗಳು ಸದಸ್ಯರಾಗಿದ್ದು, ಈ ಪೈಕಿ 25 ರಾಜ್ಯ ಸಹಕಾರಿ ಬ್ಯಾಂಕ್‌ಗಳು ಮತ್ತು ಅವುಗಳ ಪ್ರತಿನಿಧಿಗಳನ್ನು ಒಳಗೊಂಡ ತಾತ್ಕಾಲಿಕ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಎಂಟು ರಾಜ್ಯಗಳ ಬ್ಯಾಂಕ್‌ಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಅರುಣಾಚಲ ಪ್ರದೇಶ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ನಾಗಾಲ್ಯಾಂಡ್, ಪುದುಚೇರಿ, ಸಿಕ್ಕಿಂ ಮತ್ತು ತ್ರಿಪುರ ರಾಜ್ಯಗಳ ಸಹಕಾರಿ ಬ್ಯಾಂಕ್‌ಗಳು ತಾತ್ಕಾಲಿಕ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಇವುಗಳಲ್ಲಿ ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರ ಸೇರಿದಂತೆ ಈಶಾನ್ಯ ಭಾಗದ ಐದು ರಾಜ್ಯಗಳ ಬ್ಯಾಂಕ್‌ಗಳು ಸೇರಿವೆ. ಸದಸ್ಯತ್ವಕ್ಕೆ ಸಂಬಂಧಿಸಿದ ಕೆಲವು ಪ್ರಕ್ರಿಯಾತ್ಮಕ ಹಾಗೂ ಅರ್ಹತಾ ಷರತ್ತುಗಳು ಪೂರ್ಣಗೊಂಡಿಲ್ಲದಿರುವುದು ಕೆಲವು ಬ್ಯಾಂಕ್‌ಗಳು ಪಟ್ಟಿಯಿಂದ ಹೊರಗುಳಿಯಲು ಕಾರಣವಾಗಿರಬಹುದು ಎಂದು ತಿಳಿದುಬಂದಿದೆ. ತ್ರಿಪುರ ರಾಜ್ಯ ಸಹಕಾರಿ ಬ್ಯಾಂಕ್ ತನ್ನ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡುವ ಮಂಡಳಿ ನಿರ್ಣಯವನ್ನು ಸಲ್ಲಿಸದಿರುವ ಹಿನ್ನೆಲೆಯಲ್ಲಿ ಆ ರಾಜ್ಯದ ಪ್ರತಿನಿಧಿಯ ಹೆಸರು ತಾತ್ಕಾಲಿಕ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಮಣಿಪುರ ರಾಜ್ಯ ಸಹಕಾರಿ ಬ್ಯಾಂಕ್‌ಗೆ ಸಂಬಂಧಿಸಿದಂತೆ ಸದಸ್ಯತ್ವದ ಕೆಲವು ಬಾಕಿ ಪ್ರಕ್ರಿಯೆಗಳು ಹಾಗೂ ಇತ್ತೀಚಿನ ಸಾಮಾನ್ಯ ಸಭೆಗಳಲ್ಲಿ ಭಾಗವಹಿಸದಿರುವುದು ಅರ್ಹತೆಯ ಮೇಲೆ ಪರಿಣಾಮ ಬೀರಿರಬಹುದು ಎಂದು ಮೂಲಗಳು ತಿಳಿಸಿವೆ.
ಕೆ.ಎನ್ ರಾಜಣ್ಣ ಕರ್ನಾಟಕದ ಪ್ರತಿನಿಧಿ
ತಾತ್ಕಾಲಿಕ ಮತದಾರರ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಸ್ಥಾನ ಪಡೆದಿದೆ. ಕರ್ನಾಟಕದ ಪರವಾಗಿ ಕೆ.ಎನ್.ರಾಜಣ್ಣ ಅವರ ಹೆಸರು ಪ್ರತಿನಿಧಿಯಾಗಿ ಪಟ್ಟಿಯಲ್ಲಿದೆ. ಇದೇ ರೀತಿ ದೆಹಲಿ ರಾಜ್ಯ ಸಹಕಾರಿ ಬ್ಯಾಂಕ್‌ನಿಂದ ವಿಜೇಂದರ್ ಸಿಂಗ್, ಗುಜರಾತ್ ರಾಜ್ಯ ಸಹಕಾರಿ ಬ್ಯಾಂಕ್‌ನಿಂದ ಅಜಯ್ ಪಟೇಲ್, ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ನಿಂದ ವಿದ್ಯಾಧರ್ ವಾಮನರಾವ್ ಅನಾಸ್ಕರ್ ಹಾಗೂ ಅಸ್ಸಾಂ ಕೋ-ಆಪರೇಟಿವ್ ಅಪೆಕ್ಸ್ ಬ್ಯಾಂಕ್‌ನಿಂದ ವಿಶ್ವಜಿತ್ ಫುಕನ್ ಅವರ ಹೆಸರುಗಳು ತಾತ್ಕಾಲಿಕ ಪಟ್ಟಿಯಲ್ಲಿ ಸೇರಿವೆ.

ಅಕ್ಟೋಬರ್ 16ರಂದು ಅಂತಿಮ ಮತದಾರರ ಪಟ್ಟಿ
ತಾತ್ಕಾಲಿಕ ಮತದಾರರ ಪಟ್ಟಿಗೆ ಅಕ್ಟೋಬರ್ 5ರಿಂದ 9ರವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಬಂದ ಆಕ್ಷೇಪಣೆಗಳ ಪರಿಶೀಲನೆ ಅಕ್ಟೋಬರ್ 12ರಿಂದ 16ರವರೆಗೆ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 16ರಂದು ಪ್ರಕಟವಾಗಲಿದೆ. 21 ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್ 21ರಿಂದ 28ರವರೆಗೆ ನಡೆಯಲಿದೆ. ಅಕ್ಟೋಬರ್ 29ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಕ್ಟೋಬರ್ 30ರಂದು ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಅದೇ ದಿನ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅಗತ್ಯವಿದ್ದಲ್ಲಿ ನವೆಂಬರ್ 5ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಮತದಾನ ಮುಗಿದ ಕೂಡಲೇ ಮತ ಎಣಿಕೆ ನಡೆಯಲಿದ್ದು, ಚುನಾವಣಾ ಫಲಿತಾಂಶವನ್ನು ನವೆಂಬರ್ 13ರೊಳಗೆ ಪ್ರಕಟಿಸುವ ಉದ್ದೇಶ ಹೊಂದಲಾಗಿದೆ. ನೂತನ ಆಡಳಿತ ಮಂಡಳಿ ರಚನೆಯಾದ ಬಳಿಕ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ನವೆಂಬರ್ 16ರಂದು ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದ್ದು, ನವೆಂಬರ್ 17ರಂದು ಆಡಳಿತ ಮಂಡಳಿ ಸಭೆ ಹಾಗೂ ರಹಸ್ಯ ಮತದಾನದ ಮೂಲಕ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಇದರ ಫಲಿತಾಂಶವನ್ನು ನವೆಂಬರ್ 21ರೊಳಗೆ ಪ್ರಕಟಿಸಲಾಗುತ್ತದೆ.
ಬಹುಮುಖ್ಯ ಚುನಾವಣೆ
ಥಾಣೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದ್ದು, ಥಾಣೆಯ ಸಹಕಾರ ಸಂಘಗಳ ಉಪನಿಬಂಧಕರು ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಬಹುರಾಜ್ಯ ಸಹಕಾರಿ ಸಂಘಗಳ ಕಾಯ್ದೆ, 2002 ಹಾಗೂ NAFSCOBನ ಬೈಲಾ ನಿಯಮಗಳ ಅನ್ವಯ ಚುನಾವಣೆ ನಡೆಯಲಿದೆ. NAFSCOBನ ಹಿಂದಿನ ಆಡಳಿತ ಮಂಡಳಿಯ ಅವಧಿ 2025ರ ಡಿಸೆಂಬರ್ 28ರಂದು ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸುಮಾರು ಹೊಸ ಆಡಳಿತ ಮಂಡಳಿಯ ರಚನೆಗೆ ನಡೆಯಲಿರುವ ಈ ಚುನಾವಣೆ ದೇಶದ ರಾಜ್ಯ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದ ದೃಷ್ಟಿಯಿಂದ ಮಹತ್ವ ಪಡೆದಿದೆ.











