ಕಾರ್ಕಳ: 114 ವರ್ಷಗಳ ಸಮರ್ಪಿತ ಸೇವೆ ಪೂರೈಸಿರುವ ಎಂಸಿಸಿ ಬ್ಯಾಂಕ್‌ನ ಕಾರ್ಕಳ ಶಾಖೆ ಬುಧವಾರ ಸಾಲ್ಮರ ರಸ್ತೆಯ ಫಾರ್ಚೂನ್ ಆರ್ಕಿಡ್‌ನ ನೆಲ ಮಹಡಿಯಲ್ಲಿರುವ ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.
https://chat.whatsapp.com/FCEnlTkAKCC0MGPhXtX4i4
ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಅವರು ನೂತನ ಶಾಖಾ ಕಚೇರಿ ಉದ್ಘಾಟಿಸಿದರು. ಮುನಿಯಾಲು ಉದಯ ಕುಮಾರ್ ಶೆಟ್ಟಿ ಸೇಫ್ ರೂಮ್ ಉದ್ಘಾಟಿಸಿದರು. ಅತ್ತೂರು ಸಂತ ಲಾರೆನ್ಸ್ ಮೈನರ್ ಬಸಿಲಿಕಾದ ಸಹಾಯಕ ಧರ್ಮಗುರು ವಂ. ಫಾ| ರಾಬಿನ್ ಸಾಂಥುಮಾಯರ್ ಅವರು ನೂತನ ಶಾಖಾ ಕಟ್ಟಡ ಆಶೀರ್ವದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಮಾತನಾಡಿ, 24 ವರ್ಷಗಳ ಹಿಂದೆ ಸ್ಥಾಪನೆಯಾದ ಕಾರ್ಕಳ ಶಾಖೆಯ ಸಾಧನೆಯನ್ನು ಸ್ಮರಿಸಿ, ನೂತನ ಸ್ವಂತ ಕಟ್ಟಡವು ಬ್ಯಾಂಕಿನ ಬೆಳವಣಿಗೆಯ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. 2018ರಲ್ಲಿ ಸುಮಾರು ₹20 ಕೋಟಿ ಇದ್ದ ಶಾಖೆಯ ವ್ಯವಹಾರವು ಕೇವಲ ಏಳು ವರ್ಷಗಳಲ್ಲಿ ₹56 ಕೋಟಿಗೆ ಏರಿಕೆಯಾಗಿದೆ. ಈ ಸಾಧನೆಗೆ ಆಡಳಿತ ಮಂಡಳಿ, ಸಿಬ್ಬಂದಿ, ಗ್ರಾಹಕರು ಹಾಗೂ ಸ್ಥಳೀಯ ಸಮುದಾಯದ ಸಾಮೂಹಿಕ ಪ್ರಯತ್ನವೇ ಕಾರಣ. ಎಂಸಿಸಿ ಬ್ಯಾಂಕ್ ಗ್ರಾಹಕ ಸ್ನೇಹಿ ಸೇವೆಗೆ ಬದ್ಧವಾಗಿದ್ದು, ಪ್ರತಿಯೊಬ್ಬ ಗ್ರಾಹಕರಿಗೂ ವೈಯಕ್ತಿಕ ಗಮನ, ಆತ್ಮೀಯ ಸ್ವಾಗತ ಹಾಗೂ ನಗುಮುಖದ ಸೇವೆ ನೀಡಲು ಶ್ರಮಿಸುತ್ತಿದೆ. ಬ್ಯಾಂಕಿನ ಕಾರ್ಯವೈಖರಿಯ ಮೂಲ ತತ್ವ ಮಾನವೀಯತೆ ಮತ್ತು ಪರರ ಸೇವೆಯಾಗಿದೆ ಎಂದು ಹೇಳಿದರು.
ಸಾಂಪ್ರದಾಯಿಕ ಬ್ಯಾಂಕಿಂಗ್ ಸೇವೆಗಳಾಚೆಯೂ ಎಂಸಿಸಿ ಬ್ಯಾಂಕ್ ಸಮಾಜದ ಪ್ರತಿಭೆಗಳನ್ನು ಗುರುತಿಸುವುದು ಹಾಗೂ ಅಗತ್ಯವಿರುವವರಿಗೆ ದತ್ತಿ ಚಟುವಟಿಕೆಗಳ ಮೂಲಕ ಆರ್ಥಿಕ ನೆರವು ನೀಡುವುದನ್ನು ಮುಂದುವರಿಸಿದೆ. ಸಂಸ್ಥೆಯ ಬೆಳವಣಿಗೆಯ ಪ್ರಯೋಜನಗಳು ಸಮಾಜದ ವಿಶಾಲ ವರ್ಗಕ್ಕೂ ತಲುಪಬೇಕು. ಶಾಖಾ ಜಾಲವನ್ನು ಮತ್ತಷ್ಟು ವಿಸ್ತರಿಸುವುದು, ವ್ಯವಹಾರ ಬಲಪಡಿಸುವುದು ಹಾಗೂ ಗ್ರಾಹಕರಿಗೆ ಉತ್ತಮ ಸೌಲಭ್ಯ ಒದಗಿಸಲು ಸೂಕ್ತ ಸ್ವಂತ ಕಟ್ಟಡಗಳನ್ನು ಹೊಂದುವುದು ಆಡಳಿತ ಮಂಡಳಿಯ ಉದ್ದೇಶವಾಗಿದೆ. ಕಾರ್ಕಳದ ಜನರು ಹೊಸ ಶಾಖೆಗೆ ಹೆಚ್ಚಿನ ಗ್ರಾಹಕರನ್ನು ಪರಿಚಯಿಸುವ ಮೂಲಕ ಅದರ ವ್ಯವಹಾರ ಮತ್ತು ಲಾಭದಾಯಕತೆ ಹೆಚ್ಚಿಸಲು ಸಹಕರಿಸಬೇಕು ಎಂದು ಅನಿಲ್ ಲೋಬೊ ಹೇಳಿದರು.

ವಂ ಫಾ| ರಾಬಿನ್ ಸಾಂಥುಮಾಯರ್ ಮಾತನಾಡಿ ಎಂಸಿಸಿ ಬ್ಯಾಂಕಿನ ಕಾರ್ಕಳ ಶಾಖೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿ, ಹೊಸ ಸ್ಥಳವು ಕಾರ್ಕಳದ ಜನರನ್ನು ಇನ್ನಷ್ಟು ಉತ್ತಮವಾಗಿ ತಲುಪಲು ಹೊಸ ಅವಕಾಶವಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು, ಕೃಷಿಕರು, ಉದ್ಯಮಿಗಳು ಹಾಗೂ ಕುಟುಂಬಗಳ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮರ್ಪಣೆ, ಮಾನವೀಯತೆ ಹಾಗೂ ನಗುಮುಖದಿಂದ ಗ್ರಾಹಕರಿಗೆ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು. ಮಂಗಳೂರಿನ ಬ್ಯಾಂಕಿನ ಮುಖ್ಯ ಶಾಖೆಯ ಪಯಣ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಅವರು ಸ್ಮರಿಸಿದರು. ಆರ್ಥಿಕ ಸಂಸ್ಥೆಗಳು ವ್ಯಕ್ತಿಗಳು, ಉದ್ಯಮಗಳು ಮತ್ತು ಸಮುದಾಯಗಳಿಗೆ ಬೆಂಬಲ ನೀಡುವ ಮೂಲಕ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.


ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿ, ಎಂಸಿಸಿ ಬ್ಯಾಂಕಿನ ಕಾರ್ಕಳ ಶಾಖೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಗೌರವ ಅತಿಥಿಗಳಾಗಿ ಮಾಡೆಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಸಂಸ್ಥಾಪಕ ಅಧ್ಯಕ್ಷರಾದ ಜಾನ್ ಡಿಸಿಲ್ವ, ನಿವೃತ್ತ ಡ್ಯಾನ್‌ವೇ ಮೆಕ್ಯಾನಿಕಲ್ ಆ್ಯಂಡ್ ಎಂಜಿನಿಯರಿಂಗ್, ಯುಎಇಯ ಲ್ಯಾನ್ಸ್ ಲಾರ್ಡ್ ಜೋಸಿ ಲೋಬೋ ಹಾಗೂ ವಕೀಲರಾದ ಶೇಖ್ ಅಬ್ದುಲ್ ಶರೀಫ್ ಉಪಸ್ಥಿತರಿದ್ದರು. ಬ್ಯಾಂಕಿನ ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವ, ಪ್ರಧಾನ ವ್ಯವಸ್ಥಾಪಕರಾದ ಸುನಿಲ್ ಮಿನೆಜಸ್ ಹಾಗೂ ಶಾಖಾ ವ್ಯವಸ್ಥಾಪಕರಾದ ರೋಹನ್ ಜಾಯ್ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಂಸಿಸಿ ಬ್ಯಾಂಕ್ ಕಾರ್ಕಳ ಶಾಖೆಯ ಗ್ರಾಹಕರಾದ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಉನ್ನತ ಶಿಕ್ಷಣದ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ಇತರ ಪ್ರತಿಭಾವಂತರನ್ನು ಸನ್ಮಾನಿಸಿತು. ಪ್ರಥಮ ಮಹಿಳಾ ವಾಣಿಜ್ಯ ಪೈಲಟ್ ಆಗಿ ಸಾಧನೆ ಮಾಡಿದ ಶೈನಿ ಅಶ್ಮಾ ಸಾಲ್ದಾನ್ಹಾ ಅವರನ್ನೂ ಗೌರವಿಸಲಾಯಿತು. 2022ರಲ್ಲಿ ಕಾರ್ಕಳ ಶಾಖೆಯ ಸ್ಥಾಪನೆಗೆ ಪ್ರಮುಖ ಪಾತ್ರ ವಹಿಸಿದವರನ್ನೂ ಸನ್ಮಾನಿಸಲಾಯಿತು. ನೂತನ ಕಟ್ಟಡದ ಮಾಲೀಕರ ಪರವಾಗಿ ಫಾರ್ಚೂನ್ ಪ್ರಮೋಟರ್ಸ್‌ನ ಪಾಲುದಾರರಾದ ಶ್ರೀ ಡೆನಿಸ್ ಪೆರೇರ ಅವರನ್ನು ಸನ್ಮಾನಿಸಲಾಯಿತು.ʼ
ಬ್ಯಾಂಕಿನ ನಿರ್ದೇಶಕರಾದ ಆಂಡ್ರ್ಯೂ ಡಿಸೋಜ, ಡೇವಿಡ್ ಡಿಸೋಜ, ಅನಿಲ್ ಪತ್ರಾವೊ, ರೋಶನ್ ಡಿಸೋಜ, ಫೆಲಿಕ್ಸ್ ಡಿಕ್ರೂಜ್, ಆಲ್ವಿನ್ ಪಿ.ಮೊಂತೇರೊ, ಸಿ.ಜಿ. ಪಿಂಟೋ ಹಾಗೂ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವ ಸ್ವಾಗತಿಸಿದರು. ಕಾರ್ಕಳ ಶಾಖೆಯ ವ್ಯವಸ್ಥಾಪಕ ರೋಹನ್ ಜೆ. ಪಿಂಟೋ ವಂದಿಸಿದರು. ಎಲ್ಸನ್ ಹಿರ್ಗಾನ್ ಕಾರ್ಯಕ್ರಮ ನಿರೂಪಿಸಿದರು.

