“25 ವರ್ಷಗಳ ವಿಶ್ವಾಸ… ಸಹಕಾರದ ಬೆಸುಗೆ… ಅಭಿವೃದ್ಧಿಯ ಸಂಕಲ್ಪ…” ಎಂಬ ಧ್ಯೇಯದೊಂದಿಗೆ ಆಗಸ್ಟ್ 23ರಂದು ವಿಶೇಷ ಕಾರ್ಯಕ್ರಮ
ಗೋಕಾಕ: ಗೋಕಾಕ ನಗರದ ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತವು ತನ್ನ ರಜತ ಮಹೋತ್ಸವವನ್ನು ಆಗಸ್ಟ್ 23ರಂದು ಸಂಭ್ರಮದಿಂದ ಆಚರಿಸಲಿದೆ.
https://chat.whatsapp.com/FCEnlTkAKCC0MGPhXtX4i4
ರಜತ ಮಹೋತ್ಸವದ ಅಂಗವಾಗಿ ಆಗಸ್ಟ್ 23, 2026ರಂದು ಬೆಳಗ್ಗೆ 10 ಗಂಟೆಗೆ ಗೋಕಾಕದ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ “25 ವರ್ಷಗಳ ವಿಶ್ವಾಸ… ಸಹಕಾರದ ಬೆಸುಗೆ… ಅಭಿವೃದ್ಧಿಯ ಸಂಕಲ್ಪ…” ಎಂಬ ಧ್ಯೇಯದೊಂದಿಗೆ ವಿಶೇಷ ಕಾರ್ಯಕ್ರಮ ನಡೆಯಲಿದೆ. ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿಗಳ ಮಠ, ನವಲಗುಂದ ಇಲ್ಲಿನ ಪೂಜ್ಯ ಶ್ರೀ ವೀರೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶ್ರೀ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನ ಮಠ ನಿಡಸೋಸಿ ಇಲ್ಲಿನ ಪೂಜ್ಯ ಶ್ರೀ ನಿಜಲಿಂಗೇಶ್ವರ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ವಿನಾಯಕ ನಾ. ಚಿಪ್ಪಲಕಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಬೆಳಗಾವಿ ಜಿಲ್ಲಾ ಉಪನಿಬಂಧಕರಾದ ರವೀಂದ್ರ ಪ. ಪಾಟೀಲ್ ಕೆ.ಸಿ.ಎಸ್., ಬೆಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಸತೀಶ ಸು.ಚಿಪ್ಪಲಕಟ್ಟಿ, ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ಬೆಳಗಾವಿ ಪ್ರಾಂತೀಯ ಕಚೇರಿಯ ವ್ಯವಸ್ಥಾಪಕರಾದ ಬಸವರಾಜ ಹೊಂಗಲ್ ಭಾಗವಹಿಸಲಿದ್ದಾರೆ. ಸಂಘದ ಉಪಾಧ್ಯಕ್ಷರಾದ ವಿನೋದ ಎಸ್. ಡೊಂಗರೆ, ನಿರ್ದೇಶಕರಾದ ಅರುಣ ಎಂ. ಸಾಲಳ್ಳಿ, ಶ್ರೀಕಾಂತ ಎಂ. ಪತ್ತಾರ, ಮಹಾದೇವ ಎ. ಪತ್ತಾರ, ಪ್ರದೀಪ ಜೆ. ಮೆಳವಂಕಿ, ಸುರೇಶ ವಿ. ಪತ್ತಾರ, ಲತಾ ಎಸ್. ಪವಾರ, ಬಿ.ಎಂ ಪುಷ್ಪಾ, ಸುನೀಲ ಎ. ಹಿರಗಣ್ಣವರ, ವೃತ್ತಿಪರ ನಿರ್ದೇಶಕರಾದ ಡಾ.ಗುರುರಾಜ ಆರ್. ನಿಡೋಣಿ, ಶ್ರೀಕಾಂತ ಎ. ಮೋಹರೆ, ಸಲಹಾ ಮಂಡಳಿ ಸದಸ್ಯರಾದ ಸಂತೋಷ ಪಿ. ಮುಗಳಿಹಾಳ, ಶಿವಾನಂದ ಎಸ್. ಪತ್ತಾರ ಭಾಗವಹಿಸಲಿದ್ದಾರೆ.

“25 ವರ್ಷಗಳ ವಿಶ್ವಾಸ… ಸಹಕಾರದ ಬೆಸುಗೆ… ಅಭಿವೃದ್ಧಿಯ ಸಂಕಲ್ಪ…” ಎಂಬ ಆಶಯದೊಂದಿಗೆ ರಜತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಹಿಂದಿನ ಆಡಳಿತ ಮಂಡಳಿಗಳು, ಸಿಬ್ಬಂದಿ, ಸದಸ್ಯರು ಹಾಗೂ ಸಹಕಾರ ನೀಡಿದ ಎಲ್ಲರ ಕೊಡುಗೆಯನ್ನು ಸ್ಮರಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಬಲಿಷ್ಠವಾಗಿ ಬೆಳೆಸುವ ಸಂಕಲ್ಪವನ್ನು ರಜತ ಮಹೋತ್ಸವದ ಸಂದರ್ಭದಲ್ಲಿ ಕೈಗೊಳ್ಳಲಾಗುತ್ತಿದೆ.
2001ರ ಮಾರ್ಚ್ 3ರಂದು ಗೋಕಾಕ ನಗರದ ಆರ್ಥಿಕವಾಗಿ ಹಿಂದುಳಿದವರು, ಕುಶಲಕರ್ಮಿಗಳು ಹಾಗೂ ವಿವಿಧ ವರ್ಗದ ಶ್ರಮಿಕರಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ಉದ್ದೇಶದಿಂದ ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವನ್ನು ಆರಂಭಿಸಲಾಯಿತು. ಆರಂಭದಲ್ಲಿ ಸುಮಾರು 300 ಸದಸ್ಯರೊಂದಿಗೆ ಕಾರ್ಯಾರಂಭ ಮಾಡಿದ ಸಂಘವು ಇದೀಗ 2,000ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಅರುಣ ಮೋ. ಸಾಲಳ್ಳಿ, ಮೊದಲ ಉಪಾಧ್ಯಕ್ಷರಾಗಿ ವಿನಾಯಕ ನಾ. ಚಪ್ಪಲಕಟ್ಟಿ, ಕಾರ್ಯದರ್ಶಿಯಾಗಿ ಆನಂದ ಶಂ. ಬಡಿಗೇರ ಸೇರಿದಂತೆ ಸಂಸ್ಥೆಯ ಆರಂಭಿಕ ಪದಾಧಿಕಾರಿಗಳು ಸಂಘದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದರು. 2008ರಲ್ಲಿ ಸೌಹಾರ್ದ ಕಾಯ್ದೆಯಡಿ ನೋಂದಣಿಯಾಗಿ ಶ್ರೀ ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಎಂಬ ಹೆಸರಿನಲ್ಲಿ ಸಂಘ ಮುಂದುವರಿಯಿತು.
ಆರಂಭದಲ್ಲಿ ರೂ.3.11 ಲಕ್ಷದಷ್ಟಿದ್ದ ಷೇರು ಬಂಡವಾಳ ಇಂದು 22 ಲಕ್ಷಕ್ಕೆ ಏರಿಕೆಯಾಗಿದೆ. ಆಗ ಸಂಘದ ಒಟ್ಟು ಠೇವಣಿ 25 ಲಕ್ಷವಾಗಿದ್ದು, ಈಗ ರೂ.36 ಕೋಟಿಗೂ ಅಧಿಕ ಮಟ್ಟಕ್ಕೆ ಏರಿಕೆಯಾಗಿದೆ. ಸದಸ್ಯರಿಗೆ ನೀಡಲಾದ ಸಾಲದ ಮೊತ್ತವೂ ಗಣನೀಯವಾಗಿ ಹೆಚ್ಚಿದ್ದು, ರೂ.36 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಪ್ರಸ್ತುತ ಸಂಘವು 1.10 ಕೋಟಿ ರೂ. ಲಾಭ ಗಳಿಸಿದೆ.
ಸಂಘವು 2015ರಲ್ಲಿ ಘಟಪ್ರಭಾದಲ್ಲಿ ಶಾಖೆ ಆರಂಭಿಸುವ ಮೂಲಕ ತನ್ನ ಸೇವಾವ್ಯಾಪ್ತಿಯನ್ನು ವಿಸ್ತರಿಸಿದೆ. ಸದಸ್ಯರಿಗೆ ಲಾಭಾಂಶ ವಿತರಿಸುವುದರ ಜೊತೆಗೆ, ಪ್ರತಿಭಾವಂತ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ಹಾಗೂ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತಿದೆ.









