ಚುನಾವಣಾ ತರಬೇತಿ ಕಾರ್ಯಾಗಾರದಲ್ಲಿ ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸಲಹೆ
ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿ., ಮಂಗಳೂರು, ಸಹಕಾರ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಉಪವಿಭಾಗದಲ್ಲಿ ಚುನಾವಣೆ ಇರುವ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ಚುನಾವಣಾ ತರಬೇತಿ ಕಾರ್ಯಾಗಾರ ಸೋಮವಾರ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪುತ್ತೂರು ಶಾಖೆಯ ಸಭಾಭವನದಲ್ಲಿ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘಗಳ ಸುಲಭವಾದ ಕಾರ್ಯನಿರ್ವಹಣೆಗೆ ಸಂಬಂಧಿಸಿ ಸಹಕಾರ ಯೂನಿಯನ್ ಕಾಲಕಾಲಕ್ಕೆ ನಡೆಸುವ ತರಬೇತಿ ಶಿಬಿರಗಳಲ್ಲಿ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದರೆ ಹೆಚ್ಚಿನ ಉಪಯೋಗವಾಗುತ್ತದೆ. ಕಾಲಕಾಲಕ್ಕೆ ಸಹಕಾರಿ ನಿಯಮಗಳು, ಆರ್‌ಬಿಐನ ಸುತ್ತೋಲೆಗಳು, ಸರ್ಕಾರದ ನೀತಿ ನಿರೂಪಣೆಗಳು ಬದಲಾಗುತ್ತಲೇ ಇದ್ದು, ಈ ಬಗ್ಗೆ ಸಹಕಾರ ಸಂಘಗಳ ಸಿಇಒಗಳಿಗೆ ಅರಿವು ಅಗತ್ಯವಾಗಿ ಬೇಕು. ಅದಕ್ಕಾಗಿ ಯೂನಿಯನ್‌ಗಳು ಹಮ್ಮಿಕೊಳ್ಳುವ ತರಬೇತಿ ಕಾರ್ಯಾಗಾರದಲ್ಲಿ ಸಿಇಒಗಳು ಅಗತ್ಯವಾಗಿ ಭಾಗವಹಿಸಬೇಕು. ಅವ್ಯವಹಾರಗಳಿಗೆ ಕಡಿವಾಣ ಹಾಕುವುದಕ್ಕೂ ಇದು ಅಗತ್ಯವಾಗಿ ಬೇಕು ಎಂದು ಹೇಳಿದರು. ದ.ಕ. ಜಿಲ್ಲಾ ಸಹಕಾರ ಯೂನಿಯನ್ ಪ್ರಸಕ್ತ ಸಾಲಿನಲ್ಲಿ ಲಾಭದಾಯಕವಾಗಿ ಮುನ್ನಡೆಯುತ್ತಿದ್ದು, ರಾಜ್ಯದಲ್ಲಿಯೇ ಮಾದರಿಯಾಗಿ ಜಿಲ್ಲಾ ಸಹಕಾರ ಯೂನಿಯನ್ ಆಗಿ ರೂಪುಗೊಂಡಿದೆ ಎಂದು ಮಾಹಿತಿ ನೀಡಿದರು.



ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ, ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವಿಷ್ಣು ಭಟ್ ಅವರು ಮಾತನಾಡಿ, ಸಹಕಾರ ಸಂಘಗಳಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪಗಳಿಲ್ಲದೆ ಚುನಾವಣೆ ನಡೆಯಬೇಕು. ಆಡಳಿತ ಮಂಡಳಿ ಪಾರದರ್ಶಕವಾಗಿ ಕೆಲಸ ಮಾಡಬೇಕು, ಇದಕ್ಕಾಗಿ ಚುನಾವಣೆಗಳೂ ಪಾರದರ್ಶಕವಾಗಿ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು. ದ.ಕ. ಜಿಲ್ಲಾ ಸಹಕಾರ ಯೂನಿಯನ್ ಪ್ರಸಕ್ತ ಶಶಿಕುಮಾರ್ ರೈ ಬಾಲ್ಯೊಟ್ಟು ಅವರ ಸಮರ್ಥ ನಾಯಕತ್ವದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಯೂನಿಯನ್ ಹಮ್ಮಿಕೊಳ್ಳುವ ಇಂಥ ತರಬೇತಿ ಕಾರ್ಯಾಗಾರದಲ್ಲಿ ಸಿಇಒಗಳು ಭಾಗವಹಿಸಿ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.
ಸಹಕಾರ ಸಂಘಗಳ ಪುತ್ತೂರು ಉಪವಿಭಾಗದ ಸಹಾಯಕ ನಿಬಂಧಕರಾದ ರಘು ಎಸ್.ಎನ್ ಮಾತನಾಡಿ, ಚುನಾವಣಾ ಪಟ್ಟಿ ತಯಾರಿಸುವುದು ಹೇಗೆ?, ಚುನಾವಣಾ ಪೂರ್ವ ತಯಾರಿ ಹೇಗೆ? ಎಂಬಿತ್ಯಾದಿ ವಿವರಗಳ ಬಗ್ಗೆ ಮಾಹಿತಿ ನೀಡಿ ಸಿಇಒಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಚುನಾವಣಾ ಪ್ರಕ್ರಿಯೆಗಳನ್ನು ನಡೆಸುವಂತೆ ಸಲಹೆ ನೀಡಿದರು.
ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಗೌರಿ ಎಚ್, ಎಸ್‌ಡಿಸಿಸಿ ಬ್ಯಾಂಕ್ ಪುತ್ತೂರು ಶಾಖೆಯ ಮ್ಯಾನೇಜರ್ ಹರೀಶ್ ರೈ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ ಹಿರೇಮಠ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.








