ಪುತ್ತೂರು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಸಿಇಒಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಎಸ್ ಬಿ ಜಯರಾಮ ರೈ ಹೇಳಿಕೆ
ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದ.ಕ.ಜಿಲ್ಲಾ ಸಹಕಾರ ಯೂನಿಯನ್ ಮಂಗಳೂರು, ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ಸಹಕಾರ ಇಲಾಖೆ ದ.ಕ. ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವಿಶೇಷ ತರಬೇತಿ ಕಾರ್ಯಾಗಾರ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್.ಬಿ.ಜಯರಾಮ್ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ತರಬೇತಿ ಆಯೋಜನೆ ಮಾಡಿರುವುದು ಹೈನುಗಾರರಿಗೆ ಸಹಕಾರಿಯಾಗಲಿದೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಇಂತಹ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಹೈನುಗಾರರಿಗೆ ಅನುಕೂಲವಾಗುವಂತೆ ಹಾಲಿನ ದರವೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಿ ಎಲ್ಲರೂ ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರೂ ಆಗಿರುವ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಹೈನುಗಾರ ರೈತರ ಕಷ್ಟ ಸುಖಗಳು ಸಂಘದ ಕಾರ್ಯದರ್ಶಿಯವರಿಗೆ ತಿಳಿದಿರುತ್ತದೆ. ಹೈನುಗಾರರು ನಿಮ್ಮೊಂದಿಗೆ ವಿಚಾರ ವಿನಿಮಯ ಮಾಡುತ್ತಿರುತ್ತಾರೆ. ಈ ತರಬೇತಿಯಿಂದ ನಿಮ್ಮ ಕಾರ್ಯನಿರ್ವಹಣೆ ಉನ್ನತ ಮಟ್ಟಕ್ಕೆ ಏರಿಸಲು ಸಹಕಾರಿಯಾಗುತ್ತದೆ. ಪ್ರಸ್ತುತ ಸಹಕಾರ ಸಂಘದಲ್ಲೂ ಉತ್ತಮ ಉದ್ಯೋಗಾವಕಾಶಗಳಿವೆ. ಅತೀಹೆಚ್ಚು ವಿದ್ಯಾಭ್ಯಾಸ ಪಡೆದವರೂ ಸಹಕಾರ ರಂಗಕ್ಕೆ ಬರುತ್ತಿದ್ದಾರೆ. ನಿಮ್ಮ ಉದ್ಯೋಗ ಸಣ್ಣದೆಂದು ಭಾವಿಸಬೇಡಿ. ಅದು ದೊಡ್ಡ ಹುದ್ದೆಯಾಗಿದೆ ಎಂದರು.

ದ.ಕ.ಸಹಕಾರಿ ಹಾಲು ಉತ್ಪಾದಕರ ಉಕ್ಕೂಟದ ನಿರ್ದೇಶಕರಾದ ಚಂದ್ರಶೇಖರ ರಾವ್, ಜಗನ್ನಾಥ ಶೆಟ್ಟಿ, ವ್ಯವಸ್ಥಾಪಕ ಡಾ|ರವಿರಾಜ್ ಉಡುಪ, ಪುತ್ತೂರು ಟೌನ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ್ ಪಿ. ಶೆಟ್ಟಿ ಶುಭ ಹಾರೈಸಿದರು. ದ.ಕ.ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ.ಹಿರೇಮಠ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಮಂಜುನಾಥ ಎನ್.ಎಸ್. ವಂದಿಸಿದರು.

ಸನ್ಮಾನ: ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆಯಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಸನ್ಮಾನಿಸಲಾಯಿತು.
ತರಬೇತಿ ಕಾರ್ಯಾಗಾರದಲ್ಲಿ ದ.ಕ.ಹಾಲು ಸಹಕಾರಿ ಉತ್ಪಾದಕರ ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ಹಾಲಿನ ಗುಣಮಟ್ಟ, ರಾಸುಗಳ ನಿರ್ವಹಣೆ ಮತ್ತು ಒಕ್ಕೂಟದ ಯೋಜನೆಗಳು ಸೌಲಭ್ಯಗಳ ಬಗ್ಗೆ ತರಬೇತಿ ನೀಡಿದರು. ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಕೆ.ಎಸ್.ಬಾಲಸುಬ್ರಹ್ಮಣ್ಯ ಲೆಕ್ಕಪತ್ರಗಳ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ, ಮುಖ್ಯ ಕಾರ್ಯನಿರ್ವಾಹಕರ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ತರಬೇತಿ ನೀಡಿದರು.



