ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ. ಸಲಹೆ
ನವದೆಹಲಿ: ಗ್ರಾಮೀಣ ಭಾಗದಲ್ಲಿ ರೈತರ ವಿಶ್ವಾಸಾರ್ಹ ಸಂಸ್ಥೆಗಳಾಗಿ ಗುರುತಿಸಿಕೊಂಡಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು (ಪ್ಯಾಕ್ಸ್) ಕೇವಲ ಕೃಷಿ ಸಾಲ ವಿತರಣೆಗೆ ಸೀಮಿತಗೊಳಿಸದೆ, ಗ್ರಾಮೀಣ ಸಮುದಾಯದ ವಿವಿಧ ಅಗತ್ಯಗಳನ್ನು ಒಂದೇ ಸೂರಿನಡಿ ಪೂರೈಸುವ ಬಹುಉದ್ದೇಶೀಯ ಸಮುದಾಯ ಸಹಕಾರ ಸಂಸ್ಥೆಗಳಾಗಿ (Primary Multipurpose Community Cooperatives) ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ. ಅಭಿಪ್ರಾಯಪಟ್ಟರು.
https://chat.whatsapp.com/FCEnlTkAKCC0MGPhXtX4i4
ನವದೆಹಲಿದಲ್ಲಿರುವ ಕೇಂದ್ರ ಸಹಕಾರ ಸಚಿವಾಲಯದಲ್ಲಿ ಕೆ.ಕೆ. ತ್ರಿಪಾಠಿ ಹಾಗೂ ಇತರರು ರಚಿಸಿರುವ Cooperative Management – The Indian Perspective ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಪ್ಯಾಕ್ಸ್ಗಳ ತ್ವರಿತ ಗಣಕೀಕರಣ ಹಾಗೂ ಅವುಗಳನ್ನು ಇ-ಪ್ಯಾಕ್ಸ್ಗಳಾಗಿ ಪರಿವರ್ತಿಸಿರುವ ಕ್ರಮವನ್ನು ಶ್ಲಾಘಿಸಿದರು. ಪ್ಯಾಕ್ಸ್ಗಳು ಗ್ರಾಮೀಣ ಪ್ರದೇಶಗಳಲ್ಲಿ ಗಳಿಸಿರುವ ವಿಶ್ವಾಸ ಮತ್ತು ಜನರ ನಂಬಿಕೆಯನ್ನು ಬಳಸಿಕೊಂಡು, ಅವುಗಳನ್ನು ಗ್ರಾಮಸ್ಥರಿಗೆ ಅಗತ್ಯವಿರುವ ವಿವಿಧ ಸೇವೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ಕೇಂದ್ರಗಳಾಗಿ ರೂಪಿಸುವ ಸಮಯ ಬಂದಿದೆ ಎಂದು ಅವರು ಹೇಳಿದರು.
“ಸಹಕಾರ ಸಂಸ್ಥೆಗಳು ವಿಶ್ವಾಸದ ಅಡಿಪಾಯದ ಮೇಲೆ ಕಾರ್ಯನಿರ್ವಹಿಸುತ್ತವೆ. ನಮ್ಮ ಪ್ಯಾಕ್ಸ್ಗಳು ಗ್ರಾಮೀಣ ಜನರಲ್ಲಿ ಅಪಾರ ವಿಶ್ವಾಸ ಗಳಿಸಿವೆ. ಈ ಸಂಸ್ಥೆಗಳನ್ನು ಬಹುಉದ್ದೇಶೀಯ ಸಮುದಾಯ ಸಹಕಾರ ಸಂಸ್ಥೆಗಳಾಗಿ ಅಭಿವೃದ್ಧಿಪಡಿಸಿದರೆ, ಗ್ರಾಮಸ್ಥರು ತಮ್ಮ ದೈನಂದಿನ ಅಗತ್ಯಗಳಿಗೆ ಬೇಕಾದ ವಿವಿಧ ಸೇವೆಗಳನ್ನು ಒಂದೇ ಸ್ಥಳದಲ್ಲಿ ಪಡೆಯಲು ಸಾಧ್ಯವಾಗುತ್ತದೆ ಎಂದು ಶಾಜಿ ಕೆ.ವಿ. ಹೇಳಿದರು. ವಿಶೇಷವಾಗಿ ಅರೆಶಿಕ್ಷಿತರು ಹಾಗೂ ನಿರಕ್ಷರ ಗ್ರಾಮೀಣ ಜನರಿಗೆ ಇಂತಹ ವ್ಯವಸ್ಥೆ ಅತ್ಯಂತ ಉಪಯುಕ್ತವಾಗಲಿದೆ ಎಂದು ಅಭಿಪ್ರಾಯಪಟ್ಟರು. ಡಿಜಿಟಲ್ ವೇದಿಕೆಗಳು ಹಾಗೂ ಸರ್ಕಾರಿ ಸೇವೆಗಳನ್ನು ಬಳಸಲು ಕಷ್ಟಪಡುವ ಗ್ರಾಮೀಣ ಜನರಿಗೆ ಸಹಕಾರ ಸಂಸ್ಥೆಗಳು ಮಾರ್ಗದರ್ಶನ ನೀಡಿ, ಹಣಕಾಸು, ಕೃಷಿ ಹಾಗೂ ಸಾಮಾಜಿಕ ಸೇವೆಗಳನ್ನು ಸುಲಭವಾಗಿ ಪಡೆಯಲು ನೆರವಾಗಬಹುದು ಎಂದು ತಿಳಿಸಿದರು.
ತಮ್ಮ ಬಾಲ್ಯದ ಅನುಭವವನ್ನು ಹಂಚಿಕೊಂಡ ಶಾಜಿ ಕೆ.ವಿ., ತಮ್ಮ ತಂದೆ ನೂಲುವ ಸಹಕಾರ ಸಂಘದೊಂದಿಗೆ ಸಂಬಂಧ ಹೊಂದಿದ್ದರಿಂದ ಗ್ರಾಮೀಣ ಜೀವನದಲ್ಲಿ ಸಹಕಾರ ಸಂಸ್ಥೆಗಳು ಜನರ ಬದುಕಿನಲ್ಲಿ ತಂದ ಪರಿವರ್ತನೆಯನ್ನು ಬಾಲ್ಯದಿಂದಲೇ ಕಂಡಿದ್ದೇನೆ ಎಂದರು. ಪ್ಯಾಕ್ಸ್ಗಳು ಸಾಂಪ್ರದಾಯಿಕ ಕೃಷಿ ಸಾಲ ವಿತರಣೆಯ ಪಾತ್ರಕ್ಕೆ ಮಾತ್ರ ಸೀಮಿತವಾಗದೆ, ವಿವಿಧ ಆರ್ಥಿಕ ಹಾಗೂ ಸಮುದಾಯ ಸೇವೆಗಳತ್ತ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಬೇಕು ಎಂದು ಅವರು ಕರೆ ನೀಡಿದರು. ಗ್ರಾಮೀಣ-ನಗರ ಆದಾಯ ಅಂತರವನ್ನು ಕಡಿಮೆ ಮಾಡಿ, ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಪ್ಯಾಕ್ಸ್ಗಳನ್ನು ಶಕ್ತಿಶಾಲಿ ಕೇಂದ್ರಗಳನ್ನಾಗಿ ರೂಪಿಸುವುದು ಕಾಲದ ಅಗತ್ಯವಾಗಿದೆ ಎಂದು ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ. ಹೇಳಿದರು.






