ಸತತ 26ನೇ ವರ್ಷವೂ ಶೇ.25 ಡಿವಿಡೆಂಡ್: ದಾಖಲೆಯ 10,502 ಸದಸ್ಯರು ವಾರ್ಷಿಕ ಮಹಾಸಭೆಯಲ್ಲಿ ಭಾಗಿ
ಮೂಡುಬಿದಿರೆ: 110 ವರ್ಷಗಳ ಇತಿಹಾಸ ಹೊಂದಿರುವ ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಸೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಿತು. ಮಾರ್ಪಾಡಿ ಮತ್ತು ಪ್ರಾಂತ್ಯ ಗ್ರಾಮಗಳ ವ್ಯಾಪ್ತಿ ಹೊಂದಿರುವ ಈ ಸೊಸೈಟಿಯ ಕಾರ್ಯವ್ಯಾಪ್ತಿಯ ಅಧಿಕೃತ ಸದಸ್ಯರ ಪೈಕಿ ವಾರ್ಷಿಕ ಮಹಾಸಭೆಯಲ್ಲಿ 10502 ಸದಸ್ಯರು ಭಾಗವಹಿಸಿದ್ದು ಹೊಸ ದಾಖಲೆಯಾಗಿದೆ.
https://chat.whatsapp.com/FCEnlTkAKCC0MGPhXtX4i4
ಸಂಘದ ಅಧ್ಯಕ್ಷ ಸಹಕಾರ ರತ್ನ ಎಂ.ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, 2025-26ನೇ ಸಾಲಿನಲ್ಲಿ ₹12.50 ಕೋಟಿ ನಿವ್ವಳ ಲಾಭ ಗಳಿಸಿರುವುದಾಗಿ ತಿಳಿಸಿ, ಸದಸ್ಯರಿಗೆ ಸತತ 26ನೇ ವರ್ಷವೂ ಶೇ.25 ಡಿವಿಡೆಂಡ್ ವಿತರಿಸಲಾಗುವುದು ಎಂದು ತಿಳಿಸಿದರು. ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದ ಕ್ಯಾನ್ಸರ್, ಕಿಡ್ನಿ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಸದಸ್ಯರಿಗೆ ನೀಡಲಾಗುತ್ತಿದ್ದ ₹15,000 ಸಹಾಯಧನವನ್ನು 25,000ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು. ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿರುವ ಸದಸ್ಯರಿಗೆ ಸಹಾಯಧನ ನೀಡುವ ಕುರಿತು ಪ್ರಸ್ತಾವನೆ ಮಂಡಿಸಲಾಗಿದ್ದು, ಸಾಲ ಪಡೆದ ಸದಸ್ಯರು ನಿಧನರಾದರೆ ಅವರ ವಾರಸುದಾರರು ಪಾವತಿಸಬೇಕಾದ ಸಾಲದ ಬಾಕಿ ಮೊತ್ತದಲ್ಲಿ ₹1 ಲಕ್ಷ ವಿನಾಯಿತಿ ನೀಡಲಾಗುವುದು ಎಂದು ಎಂ. ಬಾಹುಬಲಿ ಪ್ರಸಾದ್ ತಿಳಿಸಿದರು. ಸಂಘದಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳನ್ನು ಸದಸ್ಯರು ಸದುಪಯೋಗಪಡಿಸಿಕೊಳ್ಳಬೇಕು. ವಿಶೇಷವಾಗಿ ಸೌರಶಕ್ತಿ ಯೋಜನೆಗಳಿಗೆ ₹5 ಲಕ್ಷದವರೆಗೆ ಶೇ.5 ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗಿದ್ದು, ಸದಸ್ಯರು ಇದರ ಪ್ರಯೋಜನ ಪಡೆಯುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಸಹಕಾರಿ ಶಿಕ್ಷಣ ನಿಧಿಗೆ ₹12,99,397 ಮೊತ್ತವನ್ನು ಸಲ್ಲಿಸಲಾಯಿತು.
ಸಂಸ್ಥೆಯ ವೆಬ್‌ಸೈಟ್ ಅನ್ನು ಅನಾವರಣಗೊಳಿಸಲಾಯಿತು. ಸಂಘದ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಭಟ್, ಉಪಾಧ್ಯಕ್ಷ ಎಂ.ಗಣೇಶ ನಾಯಕ್, ನಿರ್ದೇಶಕರಾದ ಕೆ.ಅಭಯಚಂದ್ರ ಜೈನ್, ಮನೋಜ್ ಶೆಟ್ಟಿ, ಸಿ.ಎಚ್.ಗಫೂರ್, ಎಂ.ಪಿ.ಅಶೋಕ್ ಕಾಮತ್, ಎಂ.ಜ್ಞಾನೇಶ್ವರ ಕಾಳಿಂಗ ಪೈ, ಜಯರಾಮ ಕೋಟ್ಯಾನ್, ಎಂ. ಪದ್ಮನಾಭ, ಪ್ರೇಮ ಎಸ್.ಸಾಲ್ಯಾನ್, ಅನಿತಾ ಪಿ. ಶೆಟ್ಟಿ ಉಪಸ್ಥಿತರಿದ್ದರು. ಸಹಾಯಕ ಕಾರ್ಯದರ್ಶಿ ಸುಜಾತಾ ಮಹಾಸಭೆಯ ಸೂಚನಾ ಪತ್ರ ವಾಚಿಸಿದರು. ಗುಮಾಸ್ತ ಸಂತೋಷ ನಾಯ್ಕ್ ಲೆಕ್ಕಪತ್ರ ಮಂಡಿಸಿದರು. ಹೆರಾಲ್ಡ್ ತಾವ್ರೋ ಅಂದಾಜು ಬಜೆಟ್ ಮಂಡಿಸಿದರು. ನಿರ್ದೇಶಕ ಜಯರಾಮ ಕೋಟ್ಯಾನ್ ಸ್ವಾಗತಿಸಿದರು. ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಎಂ.ಗಣೇಶ ನಾಯಕ್ ವಂದಿಸಿದರು.


