ಭಾರತದ ಸಹಕಾರಿ ಕ್ಷೇತ್ರದ ಭವಿಷ್ಯದ ನಾಯಕತ್ವ ನಿರ್ಧರಿಸಲು ಮಹತ್ವದ ಮತದಾನ
ನವದೆಹಲಿ: ದೇಶದ ಸಹಕಾರಿ ವ್ಯವಸ್ಥೆಯಲ್ಲಿ ಅತ್ಯುನ್ನತ ಪ್ರತಿನಿಧಿ ಸಂಸ್ಥೆಗಳಲ್ಲೊಂದಾಗಿರುವ ನ್ಯಾಷನಲ್ ಕೋ-ಆಪರೇಟಿವ್ ಯೂನಿಯನ್ ಆಫ್ ಇಂಡಿಯಾ (ಎನ್‌ಸಿಯುಐ) ಆಡಳಿತ ಮಂಡಳಿಯ ಚುನಾವಣೆ ಇಂದು ನಡೆಯುತ್ತಿದೆ. ಈ ಚುನಾವಣೆಯ ಫಲಿತಾಂಶವು ಮುಂದಿನ ಕೆಲವು ವರ್ಷಗಳ ಕಾಲ ಭಾರತದ ಸಹಕಾರಿ ಕ್ಷೇತ್ರದ ನಾಯಕತ್ವ ಮತ್ತು ನೀತಿ ರೂಪಿಸುವ ದಿಕ್ಕನ್ನು ನಿರ್ಧರಿಸುವ ಮಹತ್ವದ ಘಟ್ಟವೆಂದು ಪರಿಗಣಿಸಲಾಗಿದೆ.
https://chat.whatsapp.com/FCEnlTkAKCC0MGPhXtX4i4
ಈ ಬಾರಿಯ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧೆಯಲ್ಲಿರುವ 10 ಸ್ಥಾನಗಳ ಪೈಕಿ ಹೆಚ್ಚಿನ ಕಡೆ ಬಲಿಷ್ಠವಾಗಿದ್ದು ಇದು ಚುನಾವಣೆ ಮೇಲೆ ಕುತೂಹಲ ಮೂಡಿಸುವಂತೆ ಮಾಡಿದೆ. ಮತದಾನಕ್ಕೂ ಮುನ್ನ ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ಉದಯ್ ಜೋಶಿ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ದೀಪಕ್ ಚೌರಾಸಿಯಾ ನೇತೃತ್ವದಲ್ಲಿ ಸಂಘಟನೆಯ ಹಿರಿಯ ನಾಯಕರು ಒಂದು ವಾರದಿಂದ ನವದೆಹಲಿಯಲ್ಲಿ ಬೀಡು ಬಿಟ್ಟಿದ್ದು ಮತದಾರರೊಂದಿಗೆ ಸಮನ್ವಯ ಸಾಧಿಸಿ ತಮ್ಮ ಅಭ್ಯರ್ಥಿಗಳ ಪರ ಬೆಂಬಲ ಕ್ರೋಡೀಕರಣಕ್ಕೆ ಮುಂದಾಗಿದ್ದಾರೆ.
ರಾಜ್ಯ ಸಹಕಾರಿ ಸಂಘಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ಏಳು ಸ್ಥಾನಗಳ ಪೈಕಿ ಎರಡು ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದೆ. ಮಣಿಪುರ ರಾಜ್ಯ ಸಹಕಾರಿ ಸಂಘದ ಜೀನಾ ಪೊಟ್ಸಾಂಗ್ಬಂ ವಿರುದ್ಧ ಸ್ಪರ್ಧಿಸಿದ್ದ ಮಂಗಲ್‌ಜಿತ್ ರೈ ನಾಮಪತ್ರ ಹಿಂತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಜೀನಾ ಅವರ ಗೆಲುವು ಖಚಿತ ಎನ್ನಲಾಗುತ್ತಿದೆ. ಈ ಬೆಳವಣಿಗೆ ಸಹಕಾರ ಭಾರತಿ ಬೆಂಬಲಿತ ಬಣಕ್ಕೆ ಅನುಕೂಲಕರ ಎನ್ನಲಾಗಿದೆ. ಬಿಹಾರ ರಾಜ್ಯ ಸಹಕಾರಿ ಸಂಘದ ಅಧ್ಯಕ್ಷ ವಿನಯ್ ಕುಮಾರ್ ಶಾಹಿ ಅವರೂ ಸುಲಭವಾಗಿ ಗೆಲುವು ಸಾಧಿಸುವ ಸಾಧ್ಯತೆಯಿದೆ.
ಈ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಗಮನ ಸೆಳೆದಿರುವುದು ರಾಷ್ಟ್ರೀಯ ಸಹಕಾರಿ ಫೆಡರೇಶನ್‌ಗಳ ಕ್ಷೇತ್ರ. ಇಲ್ಲಿನ ಐದು ಸ್ಥಾನಗಳಿಗೆ ಆರಂಭದಲ್ಲಿ ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ, ಇಫ್ಕೋ ಅಧ್ಯಕ್ಷ ದಿಲೀಪ್ ಸಂಘಾನಿ, ಕ್ರಿಭ್ಕೋದ ಬಿಪಿನ್ ಪಟೇಲ್, ಎನ್‌ಸಿಸಿಎಫ್ ಅಧ್ಯಕ್ಷ ವಿಶಾಲ್ ಸಿಂಗ್, ಎನ್‌ಡಿಡಿಬಿ ಅಧ್ಯಕ್ಷ ಮೀನೇಶ್ ಶಾ ಹಾಗೂ ನಾಫೆಡ್‌ನ ಅಭ್ಯರ್ಥಿ ಮೋಹನ್‌ಭಾಯಿ ಕುಂದಾರಿಯಾ ಗೆಲುವು ಸಾಧಿಸಹುದು ಎಂಬ ಮಾಹಿತಿ ಲಭ್ಯವಾಗಿದೆ.
ಪಶ್ಚಿಮ ಹಾಗೂ ದಕ್ಷಿಣ ಭಾರತದ ರಾಜ್ಯಮಟ್ಟದ ಸಹಕಾರಿ ಫೆಡರೇಶನ್‌ಗಳು ಮತ್ತು ಸಂಘಗಳನ್ನು ಪ್ರತಿನಿಧಿಸುವ ಕ್ಷೇತ್ರದಲ್ಲೂ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಕ್ಷೇತ್ರದಲ್ಲಿ ಕರ್ನಾಟಕದ ಹಿರಿಯ ಸಹಕಾರಿ ನಾಯಕ, ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರು ಮಹಾರಾಷ್ಟ್ರ ರಾಜ್ಯ ಸಹಕಾರಿ ಕಾರ್ಮಿಕ ಫೆಡರೇಶನ್ ಅಧ್ಯಕ್ಷ ಸಂಜೀವ್ ಕುಶಾಲ್ಕರ್ ವಿರುದ್ಧ ಸೆಣಸಾಡುತ್ತಿದ್ದಾರೆ. ಬಹು-ರಾಜ್ಯ ಸಹಕಾರಿ ಸಂಸ್ಥೆಗಳ ಕ್ಷೇತ್ರದಲ್ಲಿ ಆರು ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಇದ್ದು, ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಂಜಯ್ ಭೆಂಡೆ ಪ್ರಮುಖ ಸ್ಪರ್ಧಾಳುಗಳಲ್ಲಿ ಒಬ್ಬರು. ಈ ಕ್ಷೇತ್ರದ ಚುನಾವಣಾ ಮಂಡಳಿಯಲ್ಲಿ 44 ಮತದಾರರಿದ್ದು, ಹೆಚ್ಚಿನವರು ಮಹಾರಾಷ್ಟ್ರಕ್ಕೆ ಸೇರಿದವರು.
ಇಂದಿನ ಮತದಾನದಿಂದ ಹೊಸ ಆಡಳಿತ ಮಂಡಳಿಯ ರಚನೆ ಸ್ಪಷ್ಟವಾಗಲಿದ್ದರೂ, ಎನ್‌ಸಿಯುಐ ಅಧ್ಯಕ್ಷ ಸ್ಥಾನದ ಬಗಗೆ ಮತ್ತಷ್ಟು ಕುತೂಹಲ ಏರ್ಪಡಲಿದೆ. ಅಧ್ಯಕ್ಷ ಹುದ್ದೆಗೆ ನಿರ್ಗಮಿತ ಅಧ್ಯಕ್ಷ ದಿಲೀಪ್ ಸಂಘಾನಿ ಹಾಗೂ ಹಿರಿಯ ಸಹಕಾರಿ ಮುಖಂಡ ಡಿ.ಎನ್. ಠಾಕೂರ್ ಪ್ರಮುಖ ಆಕಾಂಕ್ಷಿಗಳಾಗಿದ್ದರೂ, ಒಮ್ಮತದ ಅಭ್ಯರ್ಥಿ ಅಥವಾ ಅಚ್ಚರಿಯ ಆಯ್ಕೆಯ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ಚುನಾವಣಾ ವಿಶ್ಲೇಷಕರು.







