ಮಂಗಳೂರು: ನಗರದ ಪ್ರತಿಷ್ಠಿತ ಸೌಹಾರ್ದ ಸಹಕಾರಿ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಮಂಗಳೂರಿನ ಬಲ್ಮಠದಲ್ಲಿನ ಸರಕಾರಿ ಪದವಿಪೂರ್ವ ಬಾಲಕಿಯರ ಕಾಲೇಜು [ಪ್ರೌಢಶಾಲಾ ವಿಭಾಗ] ಇಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಉದಯವಾಣಿ ದಿನಪತ್ರಿಕೆಯು ಪಠ್ಯದ ವಿಷಯಗಳ ಸಂಪೂರ್ಣ ಸರಳೀಕೃತ ಮಾಹಿತಿಯುಳ್ಳ ಶಿಕ್ಷಣ ಮಾರ್ಗದರ್ಶಿಯನ್ನು ಒಂದು ವರ್ಷದ ಅವಧಿಗೆ ಉಚಿತವಾಗಿ ನೀಡಲು ಪ್ರಾಯೋಜಕತ್ವ ವಹಿಸಿಕೊಂಡಿದೆ. ಶಾಲಾ ಆವರಣದಲ್ಲಿ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಶ್ರೀಶಾ ಸೌಹಾರ್ದ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ವಿದ್ಯಾರ್ಥಿನಿಯರಿಗೆ ಪತ್ರಿಕೆಯ ಪ್ರತಿಗಳನ್ನು ನೀಡುವ ಮೂಲಕ ಚಾಲನೆ ನೀಡಿದರು.
https://chat.whatsapp.com/FCEnlTkAKCC0MGPhXtX4i4
ಕಾರ್ಯಕ್ರಮದಲ್ಲಿ ಮಾತನಾಡಿದ ಎಂ.ಎಸ್ ಗುರುರಾಜ್ ಅವರು, ವ್ಯಕ್ತಿಯ ಮುಂದಿನ ಜೀವನದ ಪಥವನ್ನು ನಿರ್ಧರಿಸುವ ವಿಧ್ಯಾರ್ಥಿ ಜೀವನವು ಅತ್ಯಂತ ಅಮೂಲ್ಯವಾದದ್ದು. ಅದನ್ನು ಕೇವಲ ವಿದ್ಯಾರ್ಜನೆಗಾಗಿ ಮಾತ್ರ ಬಳಸಬೇಕು. ನಿಮ್ಮ ಜ್ಞಾನಾರ್ಜನೆಗೆ ಸಹಾಯವಾಗಲೆಂದು ಪ್ರತಿಷ್ಠಿತ ಉದಯವಾಣಿ ದಿನಪತ್ರಿಕೆಯು ವಾರದಲ್ಲಿ ಮೂರು ದಿನ ಹೊರತರುತ್ತಿರುವ ಪಠ್ಯದ ಮಾಹಿತಿಯುಳ್ಳ ಶಿಕ್ಷಣ ಮಾರ್ಗದರ್ಶಿಯನ್ನು ಪೂರ್ಣ ಒಂದು ವರ್ಷ ಶ್ರೀಶಾ ಸೌಹಾರ್ದ ಸೊಸೈಟಿಯು ಉಚಿತವಾಗಿ ನೀಡುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು. ಇದರ ಜೊತೆಗೆ ಎಲ್ಲರಿಗೂ ಉದಯವಾಣಿ ದಿನಪತ್ರಿಕೆಯನ್ನೂ ನೀಡಲಾಗುತ್ತದೆ. ಅದನ್ನೂ ತಪ್ಪದೆ ಓದಿ ಎಂದು ಸಲಹೆ ನೀಡಿದರು.
ಶ್ರೀಶಾ ಸೌಹಾರ್ದ ಸೊಸೈಟಿಯು ತಾನು ಗಳಿಸಿದ ಲಾಭದ ದೊಡ್ಡ ಪಾಲನ್ನು ಇಂತಹ ಸಮಾಜಮುಖಿ ಕಾರ್ಯಗಳಿಗಾಗಿಯೇ ವಿನಿಯೋಗಿಸುತ್ತಿದೆ. ಮುಖ್ಯವಾಗಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ನಮ್ಮ ನಿಮ್ಮೆಲ್ಲರ ಮೇಲೆ ಸಮಾಜದ ಋಣವಿದೆ. ಅದನ್ನು ತೀರಿಸುವ ಗುರುತರ ಜವಾಬ್ದಾರಿಯೂ ನಮ್ಮ ಮೇಲಿದೆ. ನೀವುಗಳು ಮುಂದೆ ದೊಡ್ಡ ಸ್ಥಾನಮಾನ ಪಡೆಯುವವರಿದ್ದೀರಿ. ಆಗ ನೀವು ಸಹ ಹೀಗೇ ನೀವು ಓದಿದ ಅಥವಾ ಅವಶ್ಯಕತೆಯುಳ್ಳ ಶಾಲೆಗಳಿಗೆ, ವಿಧ್ಯಾರ್ಥಿಗಳಿಗೆ ಸಹಾಯಹಸ್ತ ನೀಡಬೇಕು. ನಾವು ನಡೆದು ಬಂದ ಹಾದಿಯನ್ನು ಎಂದಿಗೂ ಮರೆಯಬಾರದು. ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಉದಯವಾಣಿಯ ಶಿವಕುಮಾರ್ ಶಿಕ್ಷಣ ಮಾರ್ಗದರ್ಶಿಯ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಮುಖ್ಯ ಶಿಕ್ಷಕಿ ಶರ್ಮಿಳಾ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಸುಮಾ ಭಟ್ ಮತ್ತು ಚೆಲುವಮ್ಮ ಉಪಸ್ಥಿತರಿದ್ದರು.


