ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಬಣ್ಣನೆ
ಮಂಗಳೂರು: ಕರಾವಳಿ ಭಾಗದ ಶೈಕ್ಷಣಿಕ ಹಾಗೂ ವೈಜ್ಞಾನಿಕ ಮುಕುಟಕ್ಕೆ ಹೊಸ ಗರಿಯಾಗಿ ಉಡುಪಿಯಲ್ಲಿ ಮುಂದಿನ ಆರು ತಿಂಗಳೊಳಗೆ ತಲೆ ಎತ್ತಲಿರುವ ‘ಪ್ರೊ. ಯು.ಆರ್. ರಾವ್ ಅತ್ಯಾಧುನಿಕ ವಿಜ್ಞಾನ ಕೇಂದ್ರ’ದ ನಿರ್ಮಾಣವನ್ನು ಕ್ಯಾಂಪ್ಕೊ ಅಧ್ಯಕ್ಷರಾದ ಎಸ್.ಆರ್. ಸತೀಶ್ಚಂದ್ರ ಅವರು ಸ್ವಾಗತಿಸಿದ್ದು, ಇದು ಇಡೀ ಕರಾವಳಿ ಪ್ರದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಬಣ್ಣಿಸಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಭಾರತದ ಹೆಮ್ಮೆಯ ಚಂದ್ರಯಾನ ಯೋಜನೆಯ ವಿಜ್ಞಾನಿಗಳನ್ನು ಗೌರವಿಸುವ ಹಾಗೂ ಬಾಹ್ಯಾಕಾಶ ವಿಜ್ಞಾನ ಸಂಶೋಧನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಉಡುಪಿ ಜಿಲ್ಲೆಯಲ್ಲಿ ‘ಇಸ್ರೋ’ ಪ್ರಯೋಗಾಲಯ ಘಟಕ ಸ್ಥಾಪಿಸಬೇಕೆಂದು ಕೋರಿ ಕ್ಯಾಂಪ್ಕೊ ಮಾಜಿ ಅಧ್ಯಕ್ಷರಾದ ಎ.ಕಿಶೋರ್ ಕುಮಾರ್ ಕೊಡ್ಗಿಯವರು 2023ರಲ್ಲಿಯೇ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ಎಸ್.ಆರ್ ಸತೀಶ್ಚಂದ್ರ ಸ್ಮರಿಸಿದ್ದಾರೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿಜ್ಞಾನಿಗಳ ಗಣನೀಯ ಕೊಡುಗೆಯನ್ನು ಆ ಪ್ರಸ್ತಾವನೆಯಲ್ಲಿ ಎತ್ತಿ ತೋರಿಸಲಾಗಿತ್ತು. ಅಲ್ಲದೆ, ಉಡುಪಿ ಮೂಲದವರೇ ಆದ ದೇಶದ ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ದಿ.ಪ್ರೊ. ಯು.ಆರ್. ರಾವ್ ಅವರ ಸ್ಮರಣಾರ್ಥ ಇಸ್ರೋ ಘಟಕವೊಂದರ ಅಗತ್ಯವನ್ನು ಅದರಲ್ಲಿ ಬಲವಾಗಿ ಪ್ರತಿಪಾದಿಸಲಾಗಿತ್ತು.
ಸುಮಾರು 6.2 ಕೋಟಿ ರೂ. ವೆಚ್ಚದಲ್ಲಿ ಐದು ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ‘ಏರೋ-ಸ್ಪೇಸ್ ಗ್ಯಾಲರಿ’ಯಂತಹ ಅದ್ಭುತ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ನೂತನ ವಿಜ್ಞಾನ ಕೇಂದ್ರವು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಯುವ ಸಂಶೋಧಕರಿಗೆ ವಿಜ್ಞಾನ, ನಾವೀನ್ಯತೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದತ್ತ ಒಲವು ಮೂಡಿಸಲು ದಾರಿದೀಪವಾಗಲಿದೆ. ಭವಿಷ್ಯದಲ್ಲಿ ಕರಾವಳಿ ಭಾಗದಲ್ಲಿ ಇಂತಹ ಮತ್ತಷ್ಟು ಉನ್ನತ ಮಟ್ಟದ ವೈಜ್ಞಾನಿಕ ಸಂಸ್ಥೆಗಳು ಸ್ಥಾಪನೆಯಾಗಲಿ ಎಂದು ಎಸ್.ಆರ್. ಸತೀಶ್ಚಂದ್ರ ಆಶಯ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com




