ಮೃತ ಸದಸ್ಯನ ಕುಟುಂಬಕ್ಕೆ 11 ಲಕ್ಷ ರೂ. ವಿಮೆ, 8,000 ರೂ. ಮರಣೋತ್ತರ ನಿಧಿ ಹಸ್ತಾಂತರ
ಪುತ್ತೂರು: ಕೇವಲ ವ್ಯವಹಾರವಷ್ಟೇ ಅಲ್ಲದೆ, ಸಾಮಾಜಿಕ ಕಳಕಳಿ ಹಾಗೂ ಸದಸ್ಯ ಗ್ರಾಹಕರ ಭದ್ರತೆಗೂ ಆದ್ಯತೆ ನೀಡುವ ಮೂಲಕ ‘ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್’ ಸಹಕಾರ ಕ್ಷೇತ್ರದಲ್ಲಿ ಅನನ್ಯ ಸಾಮಾಜಿಕ ಬದ್ಧತೆಯನ್ನು ಸಾಬೀತುಪಡಿಸಿದೆ. ಕಷ್ಟದ ಕಾಲದಲ್ಲಿ ಸದಸ್ಯರ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ ಮೂಲಕ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಾರ್ವಜನಿಕ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ. ಸಹಕಾರ ಕ್ಷೇತ್ರದಲ್ಲಿ ಮಾದರಿ ಕಾರ್ಯದ ಮೂಲಕ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಗಮನ ಸೆಳೆದಿದೆ. ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕಿನ ಈ ಸಮಯೋಚಿತ ನಡೆ ಹಾಗೂ ಸಾರ್ವಜನಿಕ ಕಳಕಳಿ ಸಾರ್ವಜನಿಕ ವಲಯ ಮತ್ತು ಸಹಕಾರಿ ಬಂಧುಗಳಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
https://chat.whatsapp.com/FCEnlTkAKCC0MGPhXtX4i4
ಬ್ಯಾಂಕಿನ ಸದಸ್ಯರಾಗಿದ್ದ ಬನ್ನೂರು ಗಣೇಶ್ ಗೌಡ ಎಂಬುವವರ ಅಕಾಲಿಕ ನಿಧನದಿಂದ ಸಂಕಷ್ಟಕ್ಕೀಡಾಗಿದ್ದ ಅವರ ಕುಟುಂಬಕ್ಕೆ ಇಫ್ಕೋ ಟೋಕಿಯೋ ((IFFCO-Tokio) ಸಂಸ್ಥೆಯ ಸಹಯೋಗದೊಂದಿಗೆ ಭಾರಿ ಮೊತ್ತದ ವಿಮಾ ಪರಿಹಾರ ಹಾಗೂ ಬ್ಯಾಂಕಿನ ವತಿಯಿಂದ ಮರಣೋತ್ತರ ನಿಧಿಯನ್ನು ಬುಧವಾರ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಹಸ್ತಾಂತರಿಸಲಾಯಿತು. ಬ್ಯಾಂಕಿನ ಸದಸ್ಯರಾಗಿದ್ದ ಬನ್ನೂರು ಗಣೇಶ್ ಗೌಡ ಅವರು ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕಿನಿಂದ ಅಡಮಾನ ಸಾಲ ಪಡೆದುಕೊಂಡಿದ್ದರು. ಸಾಲ ನೀಡುವ ಸಂದರ್ಭದಲ್ಲಿ ಗ್ರಾಹಕರ ಹಿತದೃಷ್ಟಿಯಿಂದ ಬ್ಯಾಂಕು, ಪ್ರಸಿದ್ಧ ವಿಮಾ ಸಂಸ್ಥೆಯಾದ ಇಫ್ಕೋ ಟೋಕಿಯೋ ನೆರವಿನೊಂದಿಗೆ ಆ ಮನೆಗೆ ಇನ್ಶೂರೆನ್ಸ್ ಮಾಡಿಸಿತ್ತು. ಇತ್ತೀಚೆಗೆ ದುರ್ದೈವವಶಾತ್ ಗಣೇಶ್ ಗೌಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇವರ ನಿಧನದಿಂದ ಬ್ಯಾಂಕಿನಲ್ಲಿ ಅವರು ಪಡೆದಿದ್ದ ಸಾಲ ಬಾಕಿಯಾಗಿದ್ದಲ್ಲದೆ, ಅವರ ಕುಟುಂಬ ಕೂಡ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಇಂಥ ಕ್ಲಿಷ್ಟಕರ ಸಂದರ್ಭದಲ್ಲಿ ಮಾನವೀಯತೆಯ ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು, ಇಫ್ಕೋ ಟೋಕಿಯೋ ಸಂಸ್ಥೆಯೊಂದಿಗೆ ತಾವು ಮಾಡಿಕೊಂಡಿದ್ದ ಒಪ್ಪಂದದಂತೆ ಅಪಘಾತ ವಿಮಾ ಕ್ಲೈಮ್ (Insurance Claim) ಪ್ರಕ್ರಿಯೆ ಆರಂಭಿಸಿತು. ಬ್ಯಾಂಕಿನ ಅಧಿಕಾರಿಗಳ ನಿರಂತರ ಮತ್ತು ಸತತ ಪರಿಶ್ರಮದಿಂದ ವಿಮಾ ಸಂಸ್ಥೆಯ ಸಹಕಾರದೊಂದಿಗೆ 11 ಲಕ್ಷ ರೂ. ವಿಮಾ ಪರಿಹಾರ ಹಣ ಮಂಜೂರಾಗಿ ಬ್ಯಾಂಕಿಗೆ ಬಂದಿತು.
ಕಣ್ಣೀರು ಒರೆಸಿದ ಆಸರೆಯ ಹಸ್ತ
ಚೆಕ್ ಹಸ್ತಾಂತರ ಬ್ಯಾಂಕಿನ ಆಡಳಿತ ಮಂಡಳಿಯ ಕಚೇರಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ, ಮೃತ ಗಣೇಶ್ ಗೌಡ ಅವರ ಪತ್ನಿ ಪುಷ್ಪಾವತಿ ಅವರಿಗೆ ಹನ್ನೊಂದು ಲಕ್ಷ ರೂ. ಮೊತ್ತದ ವಿಮಾ ಪರಿಹಾರದ ಮೊತ್ತ ಹಾಗೂ ಬ್ಯಾಂಕು ತನ್ನ ಸದಸ್ಯರಿಗೆ ನೀಡುವ ಮರಣೋತ್ತರ ನಿಧಿಯಿಂದ ರೂಪಾಯಿ ಎಂಟು ಸಾವಿರಗಳ ಧನಸಹಾಯವನ್ನು ಒಟ್ಟಿಗೆ ಹಸ್ತಾಂತರಿಸಲಾಯಿತು. ಬ್ಯಾಂಕಿನ ಅಧ್ಯಕ್ಷರಾದ ಎನ್.ಕಿಶೋರ್ ಕೊಳತ್ತಾಯ ಅವರು ಅಧಿಕೃತವಾಗಿ ಚೆಕ್ ಹಸ್ತಾಂತರಿಸಿ, ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದರು.

ಬ್ಯಾಂಕ್ ಕೇವಲ ಸಾಲ ಕೊಡುವ ಸಂಸ್ಥೆಯಲ್ಲ, ಸಾಮಾಜಿಕ ಭದ್ರತೆಯ ಕೋಟೆ: ಎನ್.ಕಿಶೋರ್ ಕೊಳತ್ತಾಯ
ಚೆಕ್ ಹಸ್ತಾಂತರಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷರಾದ ಎನ್.ಕಿಶೋರ್ ಕೊಳತ್ತಾಯ ಅವರು, ಪುತ್ತೂರು ಟೌನ್ ಬ್ಯಾಂಕ್ ಕೇವಲ ಜನರಿಗೆ ಸಾಲ ಕೊಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಲಗಾರರ ಮತ್ತು ಅವರ ಕುಟುಂಬದ ಸಾಮಾಜಿಕ ಭದ್ರತೆಯ ನಿಟ್ಟಿನಲ್ಲೂ ನಾವು ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇವೆ. ಸಾಲ ತೆಗೆದುಕೊಳ್ಳುವವರ ಆಸ್ತಿಯ ಭದ್ರತೆಗಾಗಿ ಇನ್ಶೂರೆನ್ಸ್ ಕಡ್ಡಾಯಗೊಳಿಸಿದ್ದೇವೆ. ವಿಶೇಷವಾಗಿ ಮನೆ ಅಥವಾ ಇತರ ಕಟ್ಟಡಗಳ ಭದ್ರತೆಯ ಮೇಲೆ ಪಡೆಯುವ ಎಲ್ಲಾ ಸಾಲಗಳ ಮೇಲೆ ಇನ್ಶೂರೆನ್ಸ್ ಮಾಡಿಸಲಾಗುತ್ತದೆ. ಸದಸ್ಯರು ಅಪಘಾತದಿಂದ ಮೃತಪಟ್ಟಲ್ಲಿ ಸಾಲದ ಹೊರೆ ಅವರ ಮೇಲೆ ಬೀಳಬಾರದು ಎಂಬ ದೂರದೃಷ್ಟಿ ನಮ್ಮದು. ಇಂದಿನ ಈ ಪರಿಹಾರ ವಿತರಣೆಯು ಗ್ರಾಹಕರ ಮೇಲಿರುವ ಬ್ಯಾಂಕಿನ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ” ಎಂದರು.
ನಮ್ಮ ಸದಸ್ಯರೇ ಬ್ಯಾಂಕಿನ ಆಸ್ತಿ: ಶೇಖರ್ ಶೆಟ್ಟಿ
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಶೇಖರ್ ಶೆಟ್ಟಿ ಮಾತನಾಡಿ, ನಮ್ಮ ಬ್ಯಾಂಕಿನ ಪ್ರತಿಯೊಬ್ಬ ಸದಸ್ಯರೂ ನಮಗೆ ಕೇವಲ ಗ್ರಾಹಕರಲ್ಲ, ಅವರು ನಮ್ಮ ಬ್ಯಾಂಕಿನ ಆಸ್ತಿ. ಸದಸ್ಯರ ಶ್ರೇಯೋಭಿವೃದ್ಧಿಗೆ ಬೇಕಾಗುವ ಎಲ್ಲಾ ಹಿತರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಬ್ಯಾಂಕ್ ಸದಾ ಸಿದ್ಧವಿದೆ. ಮುಂದಿನ ದಿನಗಳಲ್ಲಿ ಸದಸ್ಯರ ಸಾಮಾಜಿಕ ಭದ್ರತೆಗಾಗಿ ಇನ್ನಷ್ಟು ನೂತನ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಚನೆ ಇದೆ ಎಂದರು. ಈಗ ಜಗತ್ತಿನಲ್ಲಿ ಕೃತಕ ಬುದ್ದಿಮತ್ತೆ (Artificial Intelligence) ಜಾರಿಗೆ ಬಂದಿದ್ದು, ಅದರ ಬಗ್ಗೆ ಅನುಭವವಿಲ್ಲದ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಸದಸ್ಯರ ಮಕ್ಕಳಿಗೆ ಹಾಗೂ ಸ್ಥಳೀಯ ಯುವಕರಿಗೆ ಈ ನಿಟ್ಟಿನಲ್ಲಿ ಪರಿಣಿತ ಸಂಸ್ಥೆಯ ನೆರವಿನಿಂದ ಕೃತಕ ಬುದ್ದಿಮತ್ತೆಯಲ್ಲಿ ಕೋರ್ಸ್‌ಗಳನ್ನು ಮಾಡಲು ಅನುಕೂಲವಾಗುವಂತೆ ಬ್ಯಾಂಕ್ ಯೋಜನೆ ರೂಪಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಬ್ಯಾಂಕು ಸಂಪೂರ್ಣ ಡಿಜಿಟಲೀಕರಣಗೊಂಡು ಗ್ರಾಹಕರಿಗೆ ಮತ್ತಷ್ಟು ಅತ್ಯುತ್ತಮ ಸೇವೆ ನೀಡಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಧರ ಗೌಡ, ಪ್ರಮುಖ ನಿರ್ದೇಶಕರುಗಳಾದ ಚಂದ್ರಶೇಖರ ರಾವ್ ಬಪ್ಪಳಿಗೆ, ಕಿರಣಕುಮಾರ ರೈ, ಮಲ್ಲೇಶ ಕುಮಾರ್, ಸುಜೀಂದ್ರ ಪ್ರಭು, ಶ್ರೀಧರ ಪಟ್ಲ, ಗಣೇಶ ಕೌಕ್ರಾಡಿ, ವೀಣಾ ಹಾಗೂ ಬ್ಯಾಂಕಿನ ಪುತ್ತೂರು ಶಾಖಾಧಿಕಾರಿ ಚಿದಂಬರ ಉಪಸ್ಥಿತರಿದ್ದರು. ಇಫ್ಕೋ ಟೋಕಿಯೋ ಸಂಸ್ಥೆಯ ಸ್ಥಳೀಯ ಶಾಖಾಧಿಕಾರಿ ಎಸ್.ಆರ್. ಮಿಥುನ್ ವಿಮೆ ಮಂಜೂರಾತಿಯಲ್ಲಿ ಸಹಕರಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com




