2,935 ಕೋಟಿ ರೂ. ವಾರ್ಷಿಕ ವಹಿವಾಟು: ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾಹಿತಿ
ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 2024-25ನೇ ಸಾಲಿನಲ್ಲಿ 2,935 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿದ್ದು, 19.37 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ 107 ವರ್ಷಗಳಿಂದ ಸೇವೆ ನೀಡುತ್ತಿರುವ ಸಂಘವು 2024-25ರ ಆರ್ಥಿಕ ವರ್ಷಾಂತ್ಯಕ್ಕೆ 21,519 ಸದಸ್ಯರಿಂದ 4.83 ಕೋಟಿ ರೂ. ಬಂಡವಾಳ ಹೊಂದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಸಂಘವು ಒಟ್ಟು 573 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ಕಳೆದ ಸಾಲಿಗಿಂತ ಶೇ.12.45 ಏರಿಕೆ ಕಂಡಿದೆ. ಸದಸ್ಯರಿಗೆ ಗೃಹನಿರ್ಮಾಣ, ವಾಹನ ಖರೀದಿ, ಜಮೀನು ಖರೀದಿ ಮತ್ತು ಅಭಿವೃದ್ಧಿ ವಾಣಿಜ್ಯ ಸಂಕೀರ್ಣ, ವಸತಿ ಸಮುಚ್ಚಯ ನಿರ್ಮಾಣ, ಸ್ವ ಉದ್ಯೋಗಕ್ಕಾಗಿ ವಿದ್ಯಾಭ್ಯಾಸ, ಮದುವೆ, ಚಿನ್ನಾಭರಣಗಳ ಈಡಿನ ಮೇಲೆ ಹಾಗೂ ಮನೆವಾರ್ತೆಗಳಿಗೆ ಸಾಲ ವಿತರಿಸುತ್ತಿದ್ದು, 477 ಕೋಟಿ ರೂ. ಸಾಲ (ಹೊರಬಾಕಿ) ನೀಡಲಾಗಿದೆ. ಕಳೆದ ಸಾಲಿಗಿಂತ ಶೇ.18.62 ಏರಿಕೆ ಕಂಡಿದೆ. 95.18 ಕೋಟಿ ರೂ.ನಿಧಿಗಳು, 229.73 ಕೋಟಿ ರೂ. ಹೂಡಿಕೆಗಳಿದ್ದು, 673.20 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 11 ಶಾಖೆಗಳನ್ನು ಹೊಂದಿದ್ದು, ಈ ಪೈಕಿ ಎಂಟು ಶಾಖೆಗಳು ಸಂಘದ ಸ್ವಂತ ನಿವೇಶನದಲ್ಲಿ ಕಾರ್ಯನಿರ್ವಹಿಸುತ್ತಿವೆ. 12ನೇ ಶಾಖೆಯಾಗಿ ಕುಂದಾಪುರದಲ್ಲೂ ಸ್ವಂತ ಕಚೇರಿ ಖರೀದಿಸಿದ್ದು ಶೀಘ್ರ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ. ವಾರ್ಷಿಕ ಸುಮಾರು 20 ಲಕ್ಷ ರೂ.ಗಳಷ್ಟು ಹಣವನ್ನು ಶಿಕ್ಷಣ, ಆರೋಗ್ಯ, ಸಾಮಾಜಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಡಿಜಿಟಲೀಕರಣದ ಹಿನ್ನೆಲೆಯಲ್ಲಿ ‘ಚೇತನಾ ಮೊಬೈಲ್ ಆ್ಯಪ್’ ಮೂಲಕ ಗ್ರಾಹಕರು ತಾವಿರುವಲ್ಲಿಯೇ ತಮ್ಮ ಖಾತೆಯಿಂದ ಐಎಂಪಿಎಸ್ /ನೆಫ್ಟ್/ ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ, ಆರ್‌ಡಿ ಹಾಗೂ ಸಾಲ ಖಾತೆಗಳಿಗೆ ಮೊಬಲಗು ವರ್ಗಾವಣೆ, ಸಂಘದ ನೂತನ ಯೋಜನೆ ಕುರಿತ ಮಾಹಿತಿ ಪಡೆಯಬಹುದು. ಆಧುನಿಕತೆಗೆ ಸಾಕ್ಷಿಯಾಗಿ ದೈನಿಕ ಠೇವಣಿ ಸಂಗ್ರಹವನ್ನು ಮೊಬೈಲ್ ಆ್ಯಪ್(ಪಿಗ್ಮಿ ಮೊಬೈಲ್ ಆ್ಯಪ್) ಮೂಲಕ ನಡೆಸಲಾಗುತ್ತಿದೆ ಎಂದರು.
ಮುಂದಿನ ವರದಿ ವರ್ಷದಲ್ಲಿ800 ಕೋಟಿ ರೂ. ಠೇವಣಿ, 700 ಕೋಟಿ ರೂ. ಸಾಲ ಅಂದರೆ ಒಟ್ಟು 1,500 ಕೋಟಿ ರೂ. ವ್ಯವಹಾರ ನಡೆಸುವ ಗುರಿ ಹೊಂದಿದ್ದು ಉಡುಪಿಯ ಪ್ರಮುಖ ಪ್ರದೇಶದಲ್ಲಿ ಖರೀದಿಸಿರುವ ಒಂದು ಎಕರೆ ಜಾಗದಲ್ಲಿ ಅಂದಾಜು 10 ಕೋಟಿ ರೂ.ವೆಚ್ಚದಲ್ಲಿ ಸಹಕಾರ ಸೌಧ ನಿರ್ಮಿಸುವ ಯೋಜನೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಸಂಘದ ಉಪಾಧ್ಯಕ್ಷ ಜಾರ್ಜ್ ಸಾಮ್ಯುಯೆಲ್, ಆಡಳಿತ ಮಂಡಳಿ ಸದಸ್ಯರಾದ ಉಮಾನಾಥ ಎಲ್., ವಿನಯ ಕುಮಾರ್ ಟಿ.ಎ., ಪದ್ಮನಾಭ ನಾಯಕ್, ಸದಾಶಿವ ನಾಯ್ಕ್, ಜಯಾ ಶೆಟ್ಟಿ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.