ಸಹಕಾರ ವಲಯದ ಅಭಿವೃದ್ಧಿಗೆ ಇದೊಂದು ಐತಿಹಾಸಿಕ ಹೆಜ್ಜೆ: ಸಹಕಾರ ಸಚಿವ ಅಮಿತ್ ಷಾ
ನವದೆಹಲಿ: ಲೋಕಸಭೆಯಲ್ಲಿ ಮಾರ್ಚ್ 26ರಂದು ಅನುಮೋದನೆಗೊಂಡಿದ್ದ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ -2025ನ್ನು ರಾಜ್ಯಸಭೆಯಲ್ಲೂ ಅಂಗೀಕರಿಸಲಾಗಿದೆ. ಬುಧವಾರ ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡಿದ್ದು ಇದು ಸಹಕಾರಿ ವಲಯದ ಅಭಿವೃದ್ಧಿಗೆ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಬಣ್ಣಿಸಿದ್ದಾರೆ.
https://chat.whatsapp.com/EbVKVnWB6rlHT1mWtsgbch
ರಾಜ್ಯಸಭೆಯಲ್ಲಿ ಈ ಮಸೂದೆಯ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ರಾಜ್ಯ ಸಚಿವ ಮುರಳೀಧರ್ ಮೊಹೋಲ್, 2027ರ ವೇಳೆಗೆ ಭಾರತವನ್ನು ಪ್ರಪಂಚದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಬಿಚ್ಚಿಟ್ಟರು. ಸಹಕಾರ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶದಲ್ಲಿ ಬಲವಾದ ಗ್ರಾಮೀಣ ಆರ್ಥಿಕತೆಯು ಪ್ರಮುಖ ಪಾತ್ರ ವಹಿಸುತ್ತದೆ. ಜನಸಂಖ್ಯೆಯ 50%ಕ್ಕಿಂತ ಹೆಚ್ಚು ಜನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ದೇಶವು 30 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವ ಸುಮಾರು ಎಂಟು ಲಕ್ಷ ಸಹಕಾರಿ ಸಂಘಗಳನ್ನು ಹೊಂದಿವೆ. ಪ್ರತಿಯೊಂದು ಕೃಷಿ ಕುಟುಂಬವು ಸಹಕಾರಿ ವಲಯದಲ್ಲಿ ಕನಿಷ್ಠ ಒಬ್ಬ ಸದಸ್ಯರನ್ನು ಹೊಂದಿದೆ ಎಂದು ಅವರು ಅಂಕಿ ಅಂಶಗಳ ಸಹಿತ ಮಾಹಿತಿ ನೀಡಿದರು.
ಸಹಕಾರ ಇಲಾಖೆಗೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಿದ್ದು, ಬಜೆಟ್ ಹಂಚಿಕೆಯಲ್ಲಿ ಹತ್ತು ಪಟ್ಟು ಹೆಚ್ಚಳವಾಗಿದೆ. 2013-14 ರಲ್ಲಿ 122 ಕೋಟಿ ರೂ. ನಿಗದಿಪಡಿಸಿದ್ದ ಬಜೆಟ್ ಇಂದು 1190 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಹಿಂದೆ, ಸಹಕಾರಿ ವಿಷಯಗಳನ್ನು ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ನಿರ್ವಹಿಸುತ್ತಿದ್ದರು, ಆದರೆ ನರೇಂದ್ರ ಮೋದಿ ಸರ್ಕಾರದಲ್ಲಿ ಪಿಎಸಿಎಸ್, ಡೈರಿ ಸಹಕಾರ ಸಂಘಗಳು, ಸಕ್ಕರೆ ಕಾರ್ಖಾನೆಗಳು, ಸಹಕಾರಿ ಬ್ಯಾಂಕುಗಳು ಮತ್ತು ಜವಳಿ ಗಿರಣಿಗಳಂತಹ ಸಹಕಾರಿ ಸಂಘಗಳನ್ನು ಬೆಂಬಲಿಸಲು ಸ್ವತಂತ್ರ ಸಹಕಾರ ಸಚಿವಾಲಯವನ್ನು ಸ್ಥಾಪಿಸಲಾಗಿದೆ ಎಂದು ಪ್ರತಿಪಾದಿಸಿದರು.
ಪ್ಯಾಕ್ಸ್, ಮಾರುಕಟ್ಟೆ ಸಮಿತಿಗಳು, ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಮತ್ತು ರಾಜ್ಯ ಸಹಕಾರಿ ಬ್ಯಾಂಕ್‌ಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ನಾಯಕತ್ವದಲ್ಲಿ ಸಹಕಾರ ಸಚಿವಾಲಯವು ಪ್ಯಾಕ್ಸ್ ಅನ್ನು ಬಲಪಡಿಸುವುದರೊಂದಿಗೆ ಪ್ರಾರಂಭಿಸಿ ವಲಯವನ್ನು ಪುನರುಜ್ಜೀವನಗೊಳಿಸಲು 60 ಹೊಸ ಉಪಕ್ರಮಗಳನ್ನು ಪರಿಚಯಿಸಿದೆ. ಪಿಎಸಿಎಸ್ ಉಪ-ಕಾನೂನುಗಳಿಗೆ ತಂದಿರುವ ತಿದ್ದುಪಡಿಗಳು ಅವುಗಳನ್ನು ಬಹೂಪಯೋಗಿಯನ್ನಾಗಿ ಮಾಡಿವೆ, 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಬದಲಾವಣೆಗಳನ್ನು ಅಳವಡಿಸಿಕೊಂಡಿವೆ ಎಂದು ಮುರಳೀಧರ್ ಮೊಹೋಲ್ ವಿವರಿಸಿದರು.
ಸಹಕಾರ ಸಚಿವಾಲಯ ಆರಂಭವಾದ ಬಳಿಕ ದೇಶಾದ್ಯಂತ 43,000 ಪ್ಯಾಕ್ಸ್‌ಗಳು ಸಾಮಾನ್ಯ ಸೇವಾಕೇಂದ್ರಗಳನ್ನು ನಡೆಸುತ್ತಿವೆ. 36,000 ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ನಿರ್ವಹಿಸುತ್ತಿವೆ. 4,000 ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳನ್ನು ನಿರ್ವಹಿಸುತ್ತಿವೆ. ಕೆಲವು ಪ್ಯಾಕ್ಸ್‌ಗಳು ಪೆಟ್ರೋಲ್ ಪಂಪ್‌ಗಳನ್ನು ಸಹ ನಡೆಸುತ್ತಿವೆ. ರೈತರ ಸಬಲೀಕರಣ ಮತ್ತು ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಪ್ಯಾಕ್ಸ್‌ಗಳನ್ನು ಬಲಪಡಿಸುವುದು ನಿರ್ಣಾಯಕವಾಗಿದೆ ಎಂದು ಮೊಹೋಲ್ ಹೇಳಿದರು.
ರಾಷ್ಟ್ರೀಯ ಸಹಕಾರಿ ನೀತಿಯು ಅಂತಿಮ ಹಂತದಲ್ಲಿದ್ದು, ಮೋದಿಯವರ ನಾಯಕತ್ವದಲ್ಲಿ ಅದು ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಎಂದು ಮುರಳೀಧರ್ ಮೊಹೋಲ್ ಘೋಷಿಸಿದರು. 34,000 ಸಹಕಾರಿ ಸಂಸ್ಥೆಗಳಿಗೆ ಪ್ರಯೋಜನ ನೀಡುವ ಮತ್ತು ರೈತರ ಆದಾಯ ಹೆಚ್ಚಿಸುವ ಮೂರು ರಾಷ್ಟ್ರೀಯ ಮಟ್ಟದ ಸಹಕಾರಿ ಸಂಘಗಳಾದ ಭಾರತೀಯ ಬೀಜ್ ಸಹಕಾರಿ ಸಮಿತಿ ಲಿಮಿಟೆಡ್, ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ ಮತ್ತು ರಾಷ್ಟ್ರೀಯ ಸಹಕಾರಿ ಸಾವಯವ ಲಿಮಿಟೆಡ್ ಸ್ಥಾಪನೆ ಈ ಸರ್ಕಾರದ ಉತ್ತಮ ಸಾಧನೆಗಳು ಎಂದು ಬೊಟ್ಟು ಮಾಡಿದರು. ಸಹಕಾರಿ ಸಂಸ್ಥೆಗಳಲ್ಲಿ ದಕ್ಷತೆ ಮತ್ತು ನಾವೀನ್ಯತೆ ಹೆಚ್ಚಿಸಲು ಸಾಂಸ್ಥಿಕ ಬೆಂಬಲದ ಅಗತ್ಯವಿದೆ. ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯದ ಸ್ಥಾಪನೆಯು ಸಹಕಾರಿ ಸಂಸ್ಥೆಗಳ ದುರುಪಯೋಗ ಮತ್ತು ಹಳತಾದ ತಂತ್ರಜ್ಞಾನದಂತಹ ಸವಾಲುಗಳನ್ನು ಪರಿಹರಿಸಲಿವೆ. ಮುಂದಿನ ಐದು ವರ್ಷಗಳಲ್ಲಿ ಸಹಕಾರಿ ವಲಯದಲ್ಲಿ 17 ಲಕ್ಷ ನುರಿತ ವೃತ್ತಿಪರರಿಗೆ ರಚನಾತ್ಮಕ ತರಬೇತಿ ನೀಡಲಿದೆ. ಈ ವಿಶ್ವವಿದ್ಯಾಲಯವು ಯುವಕರಲ್ಲಿ ಸಹಕಾರಿ ಮೌಲ್ಯಗಳನ್ನು ಪೋಷಿಸಿ, ಈ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ ಎಂದು ಮುರಳೀಧರ್ ಮೊಹೋಲ್ ತಿಳಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com