Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಸಾರ್ವಕಾಲಿಕ ದಾಖಲೆಯ 110.40 ಕೋಟಿ ರೂ. ಲಾಭ
    News

    ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಸಾರ್ವಕಾಲಿಕ ದಾಖಲೆಯ 110.40 ಕೋಟಿ ರೂ. ಲಾಭ

    adminBy adminApril 2, 2025

    ವರದಿ ವರ್ಷ ರೂ.17366.68 ಕೋಟಿ ರೂ. ಒಟ್ಟು ವ್ಯವಹಾರ
    ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಮಾಹಿತಿ

    ಮಂಗಳೂರು: ಬ್ಯಾಂಕಿಂಗ್ ಸೇವೆಯಲ್ಲಿ ದೇಶಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಅಭಿವೃದ್ಧಿಯ ವಿಷಯದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆರ್ಥಿಕ ವರ್ಷದಲ್ಲಿ 110.40 ಕೋಟಿ ರೂ. ಲಾಭ ಗಳಿಸಿದೆ. ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ 111 ವರ್ಷಗಳ ಸಾರ್ಥಕ ಸೇವೆ ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವರದಿ ವರ್ಷದಲ್ಲಿ ಅಮೋಘ ಸಾಧನೆ ಮಾಡಿದ್ದು, 31-03-2025ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ರೂ. 110.40 ಕೋಟಿ ಲಾಭ ಗಳಿಸುವ ಮೂಲಕ ಕಳೆದ ವರ್ಷದ ಲಾಭ (ರೂ.79.09 ಕೋಟಿ) ಕ್ಕಿಂತ ಶೇಕಡಾ 39.59 ಏರಿಕೆ ಕಂಡಿದೆ. ಇದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಹೇಳಿದರು.

    https://chat.whatsapp.com/EbVKVnWB6rlHT1mWtsgbch

    ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ಯಾಂಕಿನ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಬ್ಯಾಂಕಿನ ಅನುತ್ಪಾದಕ ಆಸ್ತಿಯ ಪ್ರಮಾಣವು 3.52 ಶೇಕಡಾದಿಂದ 2.71 ಶೇಕಡಾಕ್ಕೆ ಇಳಿಕೆಯಾಗಿರುವುದು ಗಮನಾರ್ಹ ಸಾಧನೆಯಾಗಿದ್ದು, ಇದು ಬ್ಯಾಂಕಿನ ಪ್ರಗತಿಯನ್ನು ಸೂಚಿಸುತ್ತದೆ. ಸಹಕಾರಿ ರಂಗದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ವಿಶಿಷ್ಟ ಹಾಗೂ ವಿನೂತನ ಬ್ಯಾಂಕಿಂಗ್ ಸೇವೆಯನ್ನು 113 ಶಾಖೆಗಳ ಮೂಲಕ ನೀಡುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಜನಸಾಮಾನ್ಯರ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.

    ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿದೆ. ವರದಿ ವರ್ಷ ರೂ.17366.68 ಕೋಟಿ ರೂಪಾಯಿ ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರ (ರೂ.15544.34)ಕ್ಕಿಂತ ಈ ಬಾರಿ ಶೇ.11.72 ಏರಿಕೆ ಕಂಡಿದೆ. 2025-26ನೇ ಸಾಲಿಗೆ ರೂ.19,250.00 ಕೋಟಿ ವ್ಯವಹಾರದ ಗುರಿ ಹೊಂದಿದೆ ಎಂದು ತಿಳಿಸಿದರು.


    ರೂ. 7882.76 ಕೋಟಿ ಠೇವಣಿ

    ಠೇವಣಿಗಳ ಸಂಗ್ರಹದಲ್ಲಿ ಎಲ್ಲಾ ಬ್ಯಾಂಕ್‌ಗಳಲ್ಲೂ ಸ್ಪರ್ಧೆ ಇದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ಠೇವಣಾತಿ ಇಲ್ಲದೆಯೂ ಎಸ್‌ಸಿಡಿಸಿಸಿ ಬ್ಯಾಂಕ್ ತನ್ನ 113 ಶಾಖೆಗಳ ಮುಖಾಂತರ ಒಟ್ಟು ರೂ. 7882.76 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ ಸಾಧನೆ ಮಾಡಿದೆ ಎಂದು ಡಾ.ರಾಜೇಂದ್ರ ಕುಮಾರ್‌ ಹೇಳಿದರು. ಈ ಮೂಲಕ ಠೇವಣಿ ಸಂಗ್ರಹದಲ್ಲಿ ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಿಗಿಂತ ಮುಂಚೂಣಿಯಲ್ಲಿದೆ. ಕಳೆದ ಸಾಲಿನ ಠೇವಣಿ ಸಂಗ್ರಹಕ್ಕಿಂತ ಈ ಬಾರಿ ಶೇ.9.11 ಏರಿಕೆಯಾಗಿದೆ. ಸರಕಾರದ ಅಧಿಸೂಚನೆಯಂತೆ ಕೃಷಿಯೇತರ ಸಹಕಾರ ಸಂಘಗಳ ಕ್ಷೇಮನಿಧಿಯನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಹೂಡಿಕೆ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗಿದೆ. ಮಾತ್ರವಲ್ಲ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಠೇವಣಿಗಳನ್ನು ಕೂಡಾ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಹೂಡಿಕೆ ಮಾಡುವಂತೆ ವಿಜ್ಞಾಪಿಸಲಾಗಿದೆ ಎಂದರು.

    ರೂ.7775.44 ಕೋಟಿ ಮುಂಗಡ

    ಸ್ಪರ್ಧಾತ್ಮಕ ವ್ಯವಹಾರದಲ್ಲಿ ಬ್ಯಾಂಕ್‌ ರೂ. 7775.44 ಕೋಟಿ ಮಂಗಡ ನೀಡಿದೆ. ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ ರೂ.2130.95 ಕೋಟಿ ರೂಪಾಯಿ, ಮಧ್ಯಮಾವಧಿ ಸಾಲ ರೂ.169.79 ಕೋಟಿ ರೂಪಾಯಿ, ಹೀಗೆ ಕೃಷಿ ಕ್ಷೇತ್ರಕ್ಕೆ ಒಟ್ಟು ರೂ.2300.74 ಕೋಟಿ ರೂಪಾಯಿ ಸಾಲ ನೀಡಲಾಗಿದ್ದು, ಕೃಷಿಯೇತರ ಕ್ಷೇತ್ರಕ್ಕೆ ರೂ.5474.70 ಕೋಟಿ ಸಾಲ ನೀಡಲಾಗಿದೆ. ಕೃಷಿ ಹಾಗೂ ಕೃಷಿಯೇತರ ಸಾಲಗಳ ಹೊರಬಾಕಿ ರೂ.9483.92 ಕೋಟಿಯಾಗಿರುತ್ತದೆ ಎಂದು ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ತಿಳಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ವರದಿ ವರ್ಷದಲ್ಲಿ ನೀಡಿದ ಎಲ್ಲಾ ಕೃಷಿ ಸಾಲಗಳು ಶೇಕಡಾ 100ರ ಮರುಪಾವತಿ ಕಂಡು ದಾಖಲೆ ನಿರ್ಮಿಸಿದೆ. ಇಂತಹ ಸಾಧನೆಯನ್ನು ಕಳೆದ 30 ವರ್ಷಗಳಿಂದ ಬ್ಯಾಂಕ್ ಸತತವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ ಎಂದು ಡಾ.ರಾಜೇಂದ್ರ ಕುಮಾರ್‌ ಬಣ್ಣಿಸಿದರು.

    ಬ್ಯಾಂಕಿನ ಆರ್ಥಿಕ ತಖ್ತೆ

    ಬ್ಯಾಂಕ್‌ಗೆ ಒಟ್ಟು 1086 ಸಂಘಗಳು ಸದಸ್ಯರಾಗಿವೆ. ಇವುಗಳ ಪಾಲು ಬಂಡವಾಳ ರೂ.476.00 ಕೋಟಿ ಇದೆ. ದುಡಿಯುವ ಬಂಡವಾಳ ರೂ. 12873.14 ಕೋಟಿ ಇದ್ದು, ಇದು ಕಳೆದ ವರ್ಷಕ್ಕಿಂತ (ರೂ.11,418.68 ಕೋಟಿ) ಶೇಕಡಾ 12.74ರಷ್ಟು ಏರಿಕೆ ಕಂಡಿದೆ. ಬ್ಯಾಂಕ್‌ ರೂ. 270.15 ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ. ಶೇಕಡಾ 8.02ರಷ್ಟು ಏರಿಕೆ ಕಂಡಿದೆ.

    “ರುಪೇ” (RuPay) ಕಿಸಾನ್ ಕ್ರೆಡಿಟ್ ಕಾರ್ಡ್

    ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆ ಹೊಂದಿರುವ ರೈತರಿಗೆ ಬ್ಯಾಂಕ್ ರುಪೇ (RuPay) ಕಿಸಾನ್ ಕಾರ್ಡ್ ನೀಡಲಾಗಿದೆ. ಈಗಾಗಲೇ 1,41,266 ರುಪೇ ಕಿಸಾನ್ ಕಾರ್ಡ್‌ಗಳನ್ನು ರೈತರಿಗೆ ವಿತರಿಸಲಾಗಿದೆ. 86,887 ರುಪೇ ಡೆಬಿಟ್ ಕಾರ್ಡ್‌ಗಳನ್ನು ಬ್ಯಾಂಕ್‌ನ ಇತರ ಗ್ರಾಹಕರಿಗೆ ನೀಡಲಾಗಿದೆ ಎಂದು ಡಾ.ರಾಜೇಂದ್ರ ಕುಮಾರ್‌ ಪ್ರಕಟಿಸಿದರು.

    ಮುಂದಿನ ಯೋಜನೆಗಳು

    ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆ: IMPS (Inter Bank Mobile Payment System) ಯೋಜನೆಯನ್ನು ಕಾರ್ಯಗತಗೊಳಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಈ ಯೋಜನೆಯಿಂದ ಗ್ರಾಹಕರು ಮೊಬೈಲ್ ಮುಖಾಂತರ ತಮ್ಮ ಖಾತೆಯಿಂದ ಇತರ ಬ್ಯಾಂಕಿನ ಖಾತೆಗೆ ಹಣ ವರ್ಗಾಯಿಸಬಹುದು.

    ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (Unified Payments Interface – UPI): ಜನಸಾಮಾನ್ಯರು ಉಪಯೋಗಿಸುವ ಯುಪಿಐ ಪಾವತಿ ವಿಧಾನವಾಗಿದೆ. ಈ ವಿಧಾನದಲ್ಲಿ ಸ್ಮಾರ್ಟ್‌ ಫೋನ್‌ ಅನ್ನು ವರ್ಚುವಲ್ ಡೆಬಿಟ್ ಕಾರ್ಡ್‌ನಂತೆ ಬಳಸಬಹುದು. ಇದರಿಂದ ತ್ವರಿತವಾಗಿ ಹಣ ಪಾವತಿಸಬಹುದು ಹಾಗೂ ಸ್ವೀಕರಿಸಬಹುದು. ಮಾತ್ರವಲ್ಲದೆ, ಯುಪಿಐ ಸೇವೆಗಳಾದ ಗೂಗಲ್ ಪೇ, ಫೋನ್ ಪೇ ಹಾಗೂ ಇತರ ಪಾವತಿ ವಿಧಾನವನ್ನು ಬಳಸಬಹುದು. ಅಲ್ಲದೆ, ವಿದ್ಯುತ್ ಬಿಲ್, ನೀರಿನ ಬಿಲ್ ಹಾಗೂ ಟೆಲಿಫೋನ್ ಬಿಲ್ ಪಾವತಿಸಲು ಅವಕಾಶವಿದೆ. ಯುಪಿಐ ಚಾಲಿತ ಆ್ಯಪ್‌ಗಳೊಂದಿಗೆ QR Code ಸ್ಕ್ಯಾನ್ ಮಾಡುವ ಮೂಲಕ ವ್ಯಾಪಾರ ಕೇಂದ್ರಗಳಲ್ಲೂ ಇದನ್ನು ಉಪಯೋಗಿಸಬಹುದು.

    10 ಹೊಸ ಶಾಖೆಗಳು: ಬ್ಯಾಂಕ್ ಮುಂದಿನ ಅವಧಿಯಲ್ಲಿ 30 ಹೊಸ ಶಾಖೆಗಳನ್ನು ತೆರೆಯುವ ಯೋಜನೆಯನ್ನು ಹಮ್ಮಿಕೊಂಡಿದೆ. ಎಲ್ಲಿ ಬ್ಯಾಂಕ್‌ ಸೇವೆ ಅವಶ್ಯವಿದೆಯೋ ಅಲ್ಲಿ ಹೊಸ ಬ್ರಾಂಚ್‌ ತೆರೆಯಲಾಗುವುದು ಎಂದು ಡಾ.ರಾಜೇಂದ್ರ ಕುಮಾರ್‌ ತಿಳಿಸಿದರು.

    ಎಸ್‌ಸಿಡಿಸಿಸಿ ಬ್ಯಾಂಕಿನ ಸಾಧನೆ

    ಬ್ಯಾಂಕಿಗೆ 22 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, 19 ಬಾರಿ ನಬಾರ್ಡ್ ಪ್ರಶಸ್ತಿ ದೊರೆತಿದೆ.

    ಎರಡು ಬಾರಿ “ಎಫ್‌ಸಿಬಿಎ” ರಾಷ್ಟ್ರೀಯ ಪ್ರಶಸ್ತಿಯಿಂದ ಬ್ಯಾಂಕ್ ಪುರಸ್ಕೃತಗೊಂಡಿದೆ.

    ಬ್ಯಾಂಕಿನ ಸರ್ವಾಂಗೀಣ ಸಾಧನೆಗಾಗಿ ಎರಡು ಬಾರಿ ಪ್ರತಿಷ್ಠಿತ “ಬ್ಯಾಂಕ್ ಬ್ಲೂ ರಿಬ್ಬನ್ ಪ್ರಶಸ್ತಿ” ಲಭಿಸಿದೆ.

    ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಆಟಲ್ ಪಿಂಚಣಿ ಯೋಜನೆಯನ್ನು ಬ್ಯಾಂಕ್ ಸಮರ್ಪಕವಾಗಿ ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಚಂದಾದಾರರನ್ನು ನೋಂದಾಯಿಸಿ, ಭಾರತ ಸರ್ಕಾರದ ಹಣಕಾಸು ಸಚಿವಾಲಯದಿಂದ 4 ಬಾರಿ ಪ್ರಶಸ್ತಿಗೆ ಪಾತ್ರವಾಗಿದೆ.

    ಬ್ಯಾಂಕ್‌ ಸಿಬ್ಬಂದಿಗಳಿಗೆ ಪಿಂಚಣಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ರಾಜ್ಯದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಎಂದರೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌. 2010ರಿಂದ ಈ ಯೋಜನೆ ಜಾರಿಯಲ್ಲಿದೆ.
    ಸ್ವಸಹಾಯ ಗುಂಪುಗಳ ಸಮರ್ಪಕ ಅನುಷ್ಠಾನದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ರಾಜ್ಯದಲ್ಲೇ ಪ್ರಥಮ ಸ್ಥಾನ.
    ಬ್ಯಾಂಕ್ ಒಟ್ಟು 34,621 ಗುಂಪುಗಳನ್ನು ಹೊಂದಿದೆ. ಉಭಯ ಜಿಲ್ಲೆಗಳ ಎಲ್ಲಾ ನವೋದಯ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯೆಯರಿಗೆ ಸಮವಸ್ತ್ರ ವಿತರಣೆ ಮಾಡಲಾಗಿದೆ.
    ಜಿಲ್ಲೆಯಲ್ಲಿ ಒಟ್ಟು 1,62,839 ರೈತರಿಗೆ ಮಂಗಳಾ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸಾಲ ವಿತರಿಸಲಾಗಿದೆ. 91,548 ಕಿಸಾನ್ ಕ್ರೆಡಿಟ್ ಕಾರ್ಡುದಾರರಿಗೆ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯ ಒದಗಿಸಲಾಗಿದೆ.
    ಬ್ಯಾಂಕಿನ ಎಲ್ಲಾ ಶಾಖೆಗಳು ಸಂಪೂರ್ಣ ಗಣಕೀಕೃತಗೊಂಡು ಏಕಗವಾಕ್ಷಿ. ಆರ್.ಟಿ.ಜಿ.ಎಸ್/ನೆಫ್ಟ್ ಹಾಗೂ ಕೋರ್ ಬ್ಯಾಂಕಿಂಗ್‌ನಂತಹ ಉತ್ಕೃಷ್ಟ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ. ಬ್ಯಾಂಕಿನ 20 ಶಾಖೆಗಳು ಸಂಪೂರ್ಣ ಹವಾನಿಯಂತ್ರಿತವಾಗಿ ಕಾರ್ಯನಿರ್ವಹಿಸುತ್ತಿವೆ.
    ಬ್ಯಾಂಕ್ ಮಂಗಳೂರಿನ ಕೇಂದ್ರ ಕಛೇರಿಯಲ್ಲಿರುವ ಕೊಡಿಯಾಲ್‌ಬೈಲ್ ಶಾಖೆ ಸೇರಿದಂತೆ ಪುತ್ತೂರು, ಉಪ್ಪಿನಂಗಡಿ, ಸವಣೂರು, ಬೆಳ್ತಂಗಡಿ ಹಾಗೂ ಸಿದ್ದಾಪುರಗಳಲ್ಲಿರುವ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.
    ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಎನ್ನುವ ಆಶಯದೊಂದಿಗೆ ಸುಸಜ್ಜಿತ ವಾಹನದಲ್ಲಿ (Bank on Wheel) ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಯನ್ನು ಹಾಗೂ ಎ.ಟಿ.ಎಂ. ಸೌಲಭ್ಯವನ್ನು ಕಾರ್ಯರೂಪಕ್ಕೆ ತಂದ ದೇಶದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಹೆಗ್ಗಳಿಕೆ. ಈಗಾಗಲೇ ಮಂಗಳೂರು ಹಾಗೂ ಉಡುಪಿಯಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯು ಕಾರ್ಯರೂಪದಲ್ಲಿದೆ.
    ಬ್ಯಾಂಕಿನ ಎಲ್ಲಾ ಶಾಖೆಗಳ ಭದ್ರತೆಯ ಹಿತದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.
    ತರಬೇತಿ ಕೇಂದ್ರ: ಸಹಕಾರಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಹಾಗೂ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಧ್ಯಕ್ಷರು ಹಾಗೂ ನಿರ್ದೇಶಕರು ಮತ್ತು ಸದಸ್ಯರಿಗೆ ಸಹಕಾರಿ ಕ್ಷೇತ್ರದ ಬಗ್ಗೆ ವಿಶೇಷ ಅನುಭವ ನೀಡಲು ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಸುಸಜ್ಜಿತ ತರಬೇತಿ ಕೇಂದ್ರವನ್ನು ಬ್ಯಾಂಕ್ ಹೊಂದಿದೆ.
    ಟ್ಯಾಬ್‌ ಬ್ಯಾಂಕಿಂಗ್: ಬ್ಯಾಂಕ್ ವ್ಯವಹಾರವನ್ನು ಸರಳೀಕರಿಸುವ ನಿಟ್ಟಿನಲ್ಲಿ ಟ್ಯಾಬ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗ್ರಾಹಕರಿಗೆ ಬ್ಯಾಂಕ್ ಪರಿಚಯಿಸಿದೆ. ಮನೆ ಅಥವಾ ಕಛೇರಿಗಳಲ್ಲಿ ಕುಳಿತು ಮೊಬೈಲ್ ಸಂಪರ್ಕವಿರುವ ಬ್ಯಾಂಕಿನ ಟ್ಯಾಬ್ಲೆಟ್ ಬಳಸಿ ತಮ್ಮ ಬ್ಯಾಂಕ್ ಖಾತೆಯನ್ನು ತೆರೆಯುವ ಹಾಗೂ ನಿರ್ವಹಿಸುವ ನೂತನ ವ್ಯವಸ್ಥೆ ಇದಾಗಿದೆ. ಇದರಿಂದ ಗ್ರಾಹಕರು ಪ್ರತಿ ಬಾರಿ ಶಾಖೆಗಳಿಗೆ ಅಲೆದಾಡುವುದು ತಪ್ಪುತ್ತದೆ.
    ಮೊಬೈಲ್ ಆ್ಯಪ್: ಈ ಯೋಜನೆಯ ಮುಖಾಂತರ ಗ್ರಾಹಕರ ಮೊಬೈಲ್ ಮೂಲಕ ಬ್ಯಾಂಕಿನ ಶಾಖೆಗಳ ನಡುವೆ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾಯಿಸಬಹುದು. ಅಲ್ಲದೆ ಮೊಬೈಲ್ ಮುಖಾಂತರವೇ ಗ್ರಾಹಕರ ಖಾತೆಯ ವ್ಯವಹಾರದ ವಿಚಾರಣೆ. ಮಿನಿ ಸ್ಟೇಟ್‌ಮೆಂಟ್ ಹಾಗೂ ಪಾಸ್‌ಬುಕ್ ನಿರ್ವಹಣೆಯ ಸೌಲಭ್ಯ ಪಡೆಯಬಹುದು.
    ಎ.ಟಿ.ಎಂ. ಅಳವಡಿಕೆ: ಬ್ಯಾಂಕಿನ ಮುಖ್ಯ ಶಾಖೆಗಳಲ್ಲಿ ಎಟಿಎಂ ಆಳವಡಿಸಲಾಗಿದ್ದು, ಈಗಾಗಲೇ ಉಭಯ ಜಿಲ್ಲೆಗಳ 15 ಶಾಖೆಗಳಲ್ಲಿ ಎ.ಟಿ.ಎಂ. ಅಳವಡಿಸಲಾಗಿದೆ.

    ಮೇ 10ಕ್ಕೆ ನವೋದಯ ಸಮಾವೇಶ
    ನವೋದಯ ಸ್ವಸಹಾಯ ಸಂಘದ ಮಹಿಳೆಯರ ಸಮಾವೇಶ ಮೇ 10ರಂದು ಮಂಗಳೂರಿನಲ್ಲಿ ನಡೆಯಲಿದ್ದು, ಅಂದು ಒಂದೂವರೆ ಲಕ್ಷ ಮಹಿಳೆಯರು ಒಂದೇ ರೀತಿಯ ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೀಗೆ ಒಂದೇ ರೀತಿಯ ಸಮವಸ್ತ್ರ ಧರಿಸಿ ಸಮಾವೇಶದಲ್ಲಿ ಭಾಗವಹಿಸುತ್ತಿರುವುದು ದೇಶದಲ್ಲೇ ಇದೇ ಮೊದಲು ಎಂದು ಡಾ.ರಾಜೇಂದ್ರ ಕುಮಾರ್‌ ತಿಳಿಸಿದರು.

    ಎಸ್‌ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಡಾ.ಬೆಳಪು ದೇವಿಪ್ರಸಾದ್‌ ಶೆಟ್ಟಿ, ಶಶಿಕುಮಾರ್‌ ರೈ ಬಾಲ್ಯೊಟ್ಟು, ಭಾಸ್ಕರ ಕೋಟ್ಯಾನ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್‌ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Banking Co Operative ministry Cooperative Cooperative Department Cooperative Registrar Dr.M.N.Rajendra Kumar Sahakara Spandana SCDCC Bank Spandana
    Previous Articleಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ 5.50 ಕೋಟಿ ರೂ. ಲಾಭ
    Next Article ರಾಜ್ಯಸಭೆಯಲ್ಲೂ ತ್ರಿಭುವನ್‌ ಸಹಕಾರಿ ಮಸೂದೆ ಅಂಗೀಕಾರ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.