ಉಚಿತ ನೇತ್ರ ತಪಾಸಣೆ, ದಂತ ತಪಾಸಣೆ ಚಿಕಿತ್ಸಾ ಶಿಬಿರದಲ್ಲಿ ವೀಣಾ ಮಂಗಳ ಶ್ಲಾಘನೆ
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಕೆ.ವಿ.ಕೆ. ಸೇವಾ ಸಮಿತಿ ಕಸಿಹಿತ್ಲು ಜಪ್ಪಿನಮೊಗರು, ಲಯನ್ಸ್ ಕ್ಲಬ್ ಕುಡ್ಲ, ಲಯನ್ಸ್ ಕ್ಲಬ್ ಮಂಗಳೂರು, ಪಂಪ್‌ವೆಲ್, ಕಲ್ಪವೃಕ್ಷ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಜಂಟಿ ಆಶ್ರಯದಲ್ಲಿ ಸಮುದಾಯ ದಂತ ಆರೋಗ್ಯ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು ಇವರ ನುರಿತ ತಜ್ಞ ವೈದ್ಯರ ತಂಡದ ನೆರವಿನಿಂದ ಉಚಿತ ದಂತ ತಪಾಸಣೆ ಮತ್ತು ನೇತ್ರ ತಪಾಸಣಾ ಶಿಬಿರ ಕಸಿಹಿತ್ಲು ಕೆ.ವಿ.ಕೆ ಮೈದಾನದಲ್ಲಿ ಜರುಗಿತು.
https://chat.whatsapp.com/EbVKVnWB6rlHT1mWtsgbch
ನಿಕಟಪೂರ್ವ ಕಾರ್ಪೋರೇಟರ್, ಕೆ.ವಿ.ಕೆ. ಸೇವಾ ಸಮಿತಿ ಅಧ್ಯಕ್ಷೆ ವೀಣಾ ಮಂಗಳ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜನರ ಆರೋಗ್ಯದ ಕಾಳಜಿಗಾಗಿ ನಿರಂತರ ಆರೋಗ್ಯ ಶಿಬಿರ ಆಯೋಜಿಸುತ್ತಾ ಬರುತ್ತಿರುವುದು ಶ್ಲಾಘನೀಯ. ಆತ್ಮಶಕ್ತಿ ಸಹಕಾರಿ ಸಂಘದ ಸಹಯೋಗದಲ್ಲಿ ಆರೋಗ್ಯ ಶಿಬಿರ ಆಯೋಜಿಸುವುದಕ್ಕೆ ಸಂತೋಷವಾಗುತ್ತಿದೆ. ಸರಕಾರದ ವಿವಿಧ ಯೋಜನೆಗಳಾದ ಆಯುಷ್ಮಾನ್ ಕಾರ್ಡ್, ಇ-ಶ್ರಮ್ ಕಾರ್ಡ್, ಕಾರ್ಮಿಕರ ಕಾರ್ಡ್, ಇವುಗಳ ನೋಂದಣಿ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಆಯುಷ್ಮಾನ್ ಕಾರ್ಡ್‌ನಿಂದ ತುಂಬ ಪ್ರಯೋಜನವಿದೆ. ಚಿಕಿತ್ಸೆಗೆ ಬಿಪಿಎಲ್ ಕಾರ್ಡ್‌ದಾರರಿಗೆ ಮತ್ತು ಎಪಿಎಲ್ ಕಾರ್ಡ್‌ದಾರರಿಗೆ ಹೆಚ್ಚಿನ ಚಿಕಿತ್ಸೆಗಳು ರಿಯಾಯತಿ ದರದಲ್ಲಿ ದೊರೆಯುತ್ತವೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ಲಯನ್ ಜಯರಾಜ್ ಪ್ರಕಾಶ್ ಶಿಬಿರ ಉದ್ಘಾಟಿಸಿ ಮಾತನಾಡಿ ನಮ್ಮ ಇಂದಿನ ಜೀವನ ಶೈಲಿಯಲ್ಲಿ ಅತೀ ಹೆಚ್ಚು ವಿಷಕಾರಿ ವಸ್ತುಗಳನ್ನು ಸೇವಿಸುತ್ತಿದ್ದೇವೆ. ಇದರಿಂದ ಆರೋಗ್ಯ ಹದಗೆಡುತ್ತಿದೆ, ಯಾವಾಗ ಯಾವ ಆರೋಗ್ಯ ಸಮಸ್ಯೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಶೇಕಡ ೮೦ರಷ್ಟು ಜನ ಔಷಧಕ್ಕೆ ಅವಲಂಬಿತರಾಗಿ ಬದುಕುತ್ತಿದ್ದಾರೆ. ಆದುದರಿಂದ ನಾವು ಆರೋಗ್ಯಕರ ಆಹಾರ ಸೇವಿಸುವುದರ ಜೊತೆಗೆ ವ್ಯಾಯಾಮ ಕೂಡ ಮಾಡಬೇಕು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಜನರ ಆರೋಗ್ಯದ ಕಾಳಜಿಯಿಂದ ನಿರಂತರವಾಗಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.
ಯೆನೆಪೋಯ ದಂತ ಆರೋಗ್ಯ ವಿಭಾಗದ ಮುಖ್ಯಸ್ಥೆ ರೇಖಾ ಪಿ.ಶೆಣೈ ಮಾತನಾಡಿ ಇತ್ತೀಚಿನ ಬಿಡುವಿಲ್ಲದ ದಿನಗಳಲ್ಲಿ ಜನ ವೈದ್ಯರ ಬಳಿ ಹೋಗುವುದು, ಚಿಕಿತ್ಸೆ ಪಡೆದುಕೊಳ್ಳುವುದು ಕಷ್ಟವಾಗುತ್ತಿದೆ. ಭಾನುವಾರ ಎಲ್ಲರೂ ಹೆಚ್ಚಾಗಿ ಮನೆಯಲ್ಲಿ ಇರುತ್ತಾರೆ, ಆದುದ್ದರಿಂದ ಇಂತಹ ಶಿಬಿರಗಳಿಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಶಿಬಿರಗಳ ಸದುಪಯೋಗ ಪಡೆಯುವಂತೆ ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ. ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ವಿವಿಧ ಸಂಘ ಸಂಸ್ಥೆಗಳ ಮತ್ತು ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ನಿರಂತರವಾಗಿ ಆರೋಗ್ಯ ಶಿಬಿರ ಏರ್ಪಡಿಸುತ್ತಿದೆ. ೧೮,೦೦೦ ಮಿಕ್ಕಿ ಉಚಿತ ಕನ್ನಡಕಗಳನ್ನು ವಿತರಿಸಿದ್ದೇವೆ. ಸಂಘವು ಸ್ಥಳೀಯರಿಗೆ ಆರೋಗ್ಯ ಸಂಬಂದಿಸಿದ ವಿಷಯದಲ್ಲಿ ಪ್ರಯೋಜನ ಆಗುವ ನಿಟ್ಟಿನಲ್ಲಿ ವೈದ್ಯರ ತಂಡಗಳ ಸಹಯೋಗದೊಂದಿಗೆ ತಪಾಸಣೆ ಮಾಡಿ ಅವರಿಗೆ ತೊಂದರೆ ಇದ್ದರೆ ಸ್ಥಳದಲ್ಲಿ ಅವರಿಗೆ ಚಿಕಿತ್ಸೆ ನೀಡಿ, ಹೆಚ್ಚಿನ ತೊಂದರೆ ಇದ್ದರೆ ಸೂಚಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಒದಗಿಸುತ್ತಿದ್ದೇವೆ. ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಾಸಕ ವೇದವ್ಯಾಸ ಡಿ.ಕಾಮತ್, ಮಾಜಿ ಕಾರ್ಪೋರೇಟರ್ ಪ್ರವೀಣ್‌ಚಂದ್ರ ಆಳ್ವ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಗೋಪಾಲ್ ಎಮ್, ಲಯನ್ಸ್ ಕ್ಲಬ್ ಕುಡ್ಲ ಅಧ್ಯಕ್ಷ ಲಯನ್ ಪ್ರಮೋದ್ ರೈ, ಲಯನ್ಸ್ ಕ್ಲಬ್ ಮಂಗಳೂರು, ಪಂಪ್‌ವೆಲ್, ಕಲ್ಪವೃಕ್ಷ ಇದರ ಸ್ಥಾಪಕ ಅಧ್ಯಕ್ಷ ಲಯನ್ ರಾಜೇಶ್ ಶೆಟ್ಟಿ ಶಬರಿ, ಅಧ್ಯಕ್ಷೆ ಲಯನ್ ವಾಣಿ ಶೆಟ್ಟಿ, ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇದರ ನಿಕಟಪೂರ್ವ ಅಧ್ಯಕ್ಷ ಲಯನ್ ಶೀನ ಪೂಜಾರಿ, ಹಿಂದೂ ಯುವಸೇನೆ ಕೇಂದ್ರ ಮಂಡಳಿ ಗೌರವ ಅಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಅಧ್ಯಕ್ಷ ಯಶೋದರ ಚೌಟ, ಪ್ರಸಾದ್ ನೇತ್ರಾಲಯದ ಕಣ್ಣಿನ ವೈದ್ಯರಾದ ಡಾ|| ಶೀತಲ್, ಸಮುದಾಯ ದಂತ ಆರೋಗ್ಯ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ಭರತ್, ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಯ್ಯದ್ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ). ಸಿ.ಎಸ್.ಸಿ ಮಂಗಳೂರು ವತಿಯಿಂದ ವಿಶ್ವಕರ್ಮ, ಆಯುಷ್ಮಾನ್ ಭಾರತ್, ಇ-ಶ್ರಮ್ ಕಾರ್ಡ್ ಉಚಿತ ನೋಂದಣಿ ನಡೆಸಲಾಯಿತು. ೧೫೦ಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ದಂತ ಚಿಕಿತ್ಸೆ ಹಾಗೂ ಕಣ್ಣಿನ ತಪಾಸಣೆ ಮಾಡಲಾಯಿತು. ಕೆ.ವಿ.ಕೆ. ಸೇವಾ ಸಮಿತಿಯ ಸದಸ್ಯೆ ಗುಣವೇಣಿ ಶೆಟ್ಟಿ ವಂದಿಸಿದರು. ಕೋಶಾಧಿಕಾರಿ ಸೌರಭ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.