ಪಾರ್ಲಿಮೆಂಟ್ ಸ್ಥಾಯಿ ಸಮಿತಿ ಶಿಫಾರಸು
ನವದೆಹಲಿ: ರಾಜ್ಯ ಸರ್ಕಾರಗಳು ರಾಜ್ಯ ಮಟ್ಟದಲ್ಲಿ ಸಹಕಾರ ಚುನಾವಣಾ ಪ್ರಾಧಿಕಾರ ಸ್ಥಾಪಿಸಲು ಪ್ರೋತ್ಸಾಹಿಸಬೇಕು ಎಂದು ಸಹಕಾರ ಸಚಿವಾಲಯಕ್ಕೆ ಅನುದಾನ ಬೇಡಿಕೆಯ ತಮ್ಮ ಒಂಬತ್ತನೇ ವರದಿಯಲ್ಲಿ ಪಾರ್ಲಿಮೆಂಟ್‌ನ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
https://chat.whatsapp.com/EbVKVnWB6rlHT1mWtsgbch
ಸಹಕಾರ ಚುನಾವಣಾ ಪ್ರಾಧಿಕಾರ ಸ್ಥಾಪನೆಯಾದರೆ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಇತರ ಸಹಕಾರ ಸಂಘಗಳ ಚುನಾವಣೆಗಳನ್ನು ಅದು ಮೇಲ್ವಿಚಾರಣೆ ಮಾಡಲಿದೆ. ಸಹಕಾರಿ ಸಂಘಗಳಲ್ಲಿ ಪಾರದರ್ಶಕ ಮತ್ತು ನ್ಯಾಯಯುತ ಚುನಾವಣೆಗಳ ಅಗತ್ಯವನ್ನು ಗಮನಿಸಿ ಸ್ಥಾಯಿ ಸಮಿತಿಯು, ಸಹಕಾರ ಚುನಾವಣಾ ಪ್ರಾಧಿಕಾರದ ಅಗತ್ಯವನ್ನು ಒತ್ತಿ ಹೇಳಿದೆ. ಈ ಮಧ್ಯೆ ಬಹು-ರಾಜ್ಯ ಸಹಕಾರಿ ಸಂಘಗಳಿಗೆ ಚುನಾವಣೆ ನಡೆಸಲು, ಬಹು-ರಾಜ್ಯ ಸಹಕಾರಿ ಸಂಘಗಳ ಕಾಯ್ದೆ 2002ರ ಅಡಿಯಲ್ಲಿ ಸ್ವತಂತ್ರ ಸಹಕಾರಿ ಚುನಾವಣಾ ಪ್ರಾಧಿಕಾರ ಸ್ಥಾಪಿಸಿರುವ ಬಗ್ಗೆ ಸಮಿತಿ ತೃಪ್ತಿ ವ್ಯಕ್ತಪಡಿಸಿದೆ. ಮತದಾರರ ಪಟ್ಟಿಗಳ ತಯಾರಿಕೆಗೆ ಸಂಬಂಧಿಸಿದ ವಿಷಯಗಳನ್ನು ಮೇಲ್ವಿಚಾರಣೆ ಮಾಡುವುದು, ನಿರ್ದೇಶಿಸುವುದು ಮತ್ತು ನಿಯಂತ್ರಿಸುವ ಜವಾಬ್ದಾರಿಯನ್ನು ಈ ಪ್ರಾಧಿಕಾರ ಹೊಂದಿದೆ.
ಬಹು-ರಾಜ್ಯ ಸಹಕಾರಿ ಸಂಘಗಳಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಲು ಚುನಾವಣಾ ಕಾರ್ಯಕ್ರಮಗಳನ್ನು ಹೊರಡಿಸಲು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು/ಜಿಲ್ಲಾಧಿಕಾರಿಗಳನ್ನು ರಿಟರ್ನಿಂಗ್ ಅಧಿಕಾರಿಗಳಾಗಿ ನೇಮಿಸಲು ಸಹಕಾರಿ ಚುನಾವಣಾ ಪ್ರಾಧಿಕಾರಕ್ಕೆ ಅಧಿಕಾರವಿದೆ.