ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ 10 ಗ್ರಾಮ್‌ಗೆ 32 ರೂ. ಇದ್ದ ಚಿನ್ನಕ್ಕೆ ಈಗ 91,000 ರೂ.!
ನವದೆಹಲಿ: ದಿನೇದಿನೆ ಏರುಗತಿಯಲ್ಲಿ ಸಾಗುತ್ತಿರುವ ಬಂಗಾರದ ದರ ಸಾರ್ವಕಾಲಿಕ ದಾಖಲೆಯ ದರಕ್ಕೆ ಏರಿಕೆಯಾಗಿದೆ. ಅಖಿಲ ಭಾರತ ಸರಾಫ ಆಸೋಸಿಯೇಶನ್ ಪ್ರಕಾರ ದೆಹಲಿಯಲ್ಲಿ ಸೋಮವಾರ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,300 ರೂ. ಏರಿಕೆಯಾಗಿ, 90,750 ರೂ.ಗೆ ತಲುಪಿದೆ. ಇದು ಚಿನ್ನದ ಬೆಲೆಯಲ್ಲಿ ಇದುವರೆಗಿನ ಸಾರ್ವಕಾಲಿಕ ದಾಖಲೆ.
https://chat.whatsapp.com/EbVKVnWB6rlHT1mWtsgbch
ಸತತ ಏರುಗತಿಯಲ್ಲಿ ಸಾಗುತ್ತಿರುವ ಬಂಗಾರದ ಬೆಲೆ ಮತ್ತೆ ಮತ್ತೆ ಏರಿಕೆಯಾಗಲು ಅಮೆರಿಕ ಅನುಸರಿಸುತ್ತಿರುವ ಸುಂಕ ನೀತಿ ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರಸಕ್ತ ವರ್ಷವೇ ಅಂದರೆ ಎರಡೂವರೆ ತಿಂಗಳಲ್ಲೇ 11,360 ರೂ. ಹೆಚ್ಚಳವಾಗಿದೆ. ಜನವರಿ 1ರಂದು 79,390 ರೂ. ಇದ್ದ ಚಿನ್ನದ ಬೆಲೆ ಮಾ.17ಕ್ಕೆ 90,750 ರೂ.ಗೆ ಏರಿಕೆ ಕಂಡಿದೆ!
ಅಮೆರಿಕ ಅನುಸರಿಸುತ್ತಿರುವ ಸುಂಕ ನೀತಿ, ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ, ಜಾಗತಿಕ ಆರ್ಥಿಕ ಬೆಳವಣಿಗೆ ದರ ಕುಸಿತ ಕಾಣುತ್ತಿರುವುದು ಇತ್ಯಾದಿ ಕಾರಣಗಳಿಂದಾಗಿ ಎಲ್ಲೆಡೆ ಚಿನ್ನದ ದರ ಹೆಚ್ಚುತ್ತಿದೆ. ಚಿನ್ನದ ದರದ ನಾಗಾಲೋಟ ಮಾರುಕಟ್ಟೆ ವಿಶ್ಲೇಷಕರನ್ನೂ ಅಚ್ಚರಿಗೆ ತಳ್ಳಿದೆ. 100 ದಿನಗಳ ಅವಧಿಯಲ್ಲೇ ಚಿನ್ನದ ದರ ಶೇಕಡ 14.31ರಷ್ಟು ಹೆಚ್ಚಳವಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಬೆಳ್ಳಿಯ ದರ ಕೆಜಿಗೆ ಕಳೆದ ವಾರವೇ 1 ಲಕ್ಷ ರೂ. ದಾಟಿದೆ. 2025ರ ವರ್ಷಾಂತ್ಯದಲ್ಲೇ 10 ಗ್ರಾಂ ಬಂಗಾರ ಖರೀದಿಸಲು 1 ಲಕ್ಷ ರೂ. ಪಾವತಿಸುವ ಸನ್ನಿವೇಶ ಸೃಷ್ಟಿಯಾಗಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದೇಶದಲ್ಲಿ ಲಕ್ಷಾಂತರ ಮದುವೆಗಳು ನಡೆಯಲಿದ್ದು, ಚಿನ್ನದ ಖರೀದಿ ಪ್ರಮಾಣ ಹೆಚ್ಚಲಿದೆ. ಆ ವೇಳೆಯೇ ಚಿನ್ನದ ದರ 1 ಲಕ್ಷ ರೂ.ಗೆ ಏರಿದರೆ ಆಶ್ಚರ್ಯ ಪಡಬೇಕಿಲ್ಲ ಎಂಬುದು ವಿಶ್ಲೇಷಕರ ಅಭಿಪ್ರಾಯ.
ಷೇರುಪೇಟೆಯಲ್ಲಿ ಬಂಗಾರದ ಬೆಲೆ ಏರಿಳಿತ ಕಾಣುತ್ತಲೇ ಇದೆ. ಚಿನ್ನಾಭರಣ ಖರೀದಿ ಒಂದೆಡೆಯಾದರೆ ಚಿನ್ನದ ಗಟ್ಟಿ ಖರೀದಿ ಮಾಡುವವರು ಇನ್ನೊಂದೆಡೆ. ಇದರಿಂದ ಚಿನ್ನದ ಬೆಲೆ ಗಗನಮುಖಿಯಾಗಿದ್ದು, ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಬಂಗಾರದ ಮೇಲೆ ಹೆಚ್ಚಿನ ಹೂಡಿಕೆ
ಷೇರುಪೇಟೆಯಲ್ಲಿ ಏರಿಳಿತ ಮುಂದುವರಿಯುತ್ತಿರುವಂತೆಯೇ ಜಗತ್ತಿನ ಹೆಚ್ಚಿನ ಜನ ಹೂಡಿಕೆಗಾಗಿ ಚಿನ್ನದತ್ತಲೇ ಗಮನ ಹರಿಸುತ್ತಿದ್ದಾರೆ. ಚಿನ್ನಾಭರಣ ಖರೀದಿ ಒಂದೆಡೆಯಾದರೆ ಚಿನ್ನದ ಗಟ್ಟಿಯನ್ನು ಖರೀದಿಸಿ ಅದನ್ನು ಕೂಡಿಟ್ಟು ಹೂಡಿಕೆ ಮಾಡುವವರು ಇನ್ನೊಂದೆಡೆ. ಇದು ಬಂಗಾರದ ಬೆಲೆ ಗಗನಮುಖಿಯಾಗಿ ಸಾಗಲು ಕಾರಣವಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಳವಾಗಲಿದ್ದು, ಬಂಗಾರದ ಬೆಲೆ ಗಗನಮುಖಿಯಾಗಲೂ ಇದು ಕಾರಣವಾಗಲಿದೆ ಎನ್ನುತ್ತಾರೆ ತಜ್ಞರು. ಇನ್ನೊಂದೆಡೆ ಜಗತ್ತಿನ ಬಹುತೇಕ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಹಿಂದೆಂದೂ ಕಾಣದ ರೀತಿಯಲ್ಲಿ ಚಿನ್ನದ ಖರೀದಿಯಲ್ಲಿ ತೊಡಗಿವೆ. ರಷ್ಯಾ-ಉಕ್ರೇನ್ ಸಮರದ ಬಳಿಕ ಈ ಪರಂಪರೆ ಮುಂದುವರಿದ ಕಾರಣ ಚಿನ್ನದ ದರ ಹೆಚ್ಚುತ್ತಲೇ ಇದೆ. ಡಾಲರ್ ಎದುರು ರೂಪಾಯಿ ಮೌಲ್ಯವೂ ಕುಸಿತ ಕಾಣುತ್ತಿದ್ದು ಇದು ಕೂಡ ಚಿನ್ನದ ಬೆಲೆ ಏರಲು ಕಾರಣವಾಗುತ್ತಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಕೂಡ ಬಂಗಾರದ ಬೆಲೆ ಏರಿಕೆಗೆ ಪ್ರಮುಖ ಕಾರಣ ವಾಣಿಜ್ಯ ಸಮರ, ನಿರ್ಬಂಧ, ಜಾಗತಿಕ ಬಿಕ್ಕಟ್ಟು ಎಲ್ಲವೂ ಪರಿಣಾಮ ಬೀರಿವೆ.
ಯಾವ ಕಾಲದಲ್ಲಿ ಎಷ್ಟಿತ್ತು ಚಿನ್ನದ ದರ (10 ಗ್ರಾಮ್‌ಗೆ)
1947- 32 ರೂ.
1967 -100 ರೂ.
1975 -500 ರೂ.
1979 -1000 ರೂ.
1985 -2000 ರೂ.
1990 -2500 ರೂ.
1995 -5000 ರೂ.
2005 -7500 ರೂ.
2007 -10000 ರೂ.
2010 -20000 ರೂ.
2011 -25000 ರೂ.
2012 -30000 ರೂ.
2018 -35000 ರೂ.
2019 -40000 ರೂ.
2020 -45000 ರೂ.
2021 -50000 ರೂ.
2022 -60000 ರೂ.
2023 -70000 ರೂ.
2024 -80000 ರೂ.
2025 -90000 ರೂ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com