ಕೊಚ್ಚಿ: ಕೇರಳದ ಕರುವನ್ನೂರ್ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 15ರಂದು ವಿಚಾರಣೆಗೆ ಬರುವಂತೆ ಸಿಪಿಐ(ಎಂ) ಸಂಸದ ಕೆ.ರಾಧಾಕೃಷ್ಣನ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಕಳುಹಿಸಿದೆ.
https://chat.whatsapp.com/EbVKVnWB6rlHT1mWtsgbch
ಅಲತ್ತೂರು ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಕೆ.ರಾಧಾಕೃಷ್ಣನ್ ಅವರು, ಮನಿ ಲ್ಯಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಹೇಳಿಕೆ ದಾಖಲಿಸಲು ಸಮನ್ಸ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಕರುವನ್ನೂರ್ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ 150 ಕೋಟಿ ರೂ. ಮೌಲ್ಯದ ಅಕ್ರಮಗಳು ನಡೆದಿದೆ ಎಂಬ ಆರೋಪದ ಮೇಲೆ 2021ರ ಜುಲೈನಲ್ಲಿ ತ್ರಿಶೂರ್‌ನಲ್ಲಿ ಕೇರಳ ಪೊಲೀಸ್ ಅಪರಾಧ ವಿಭಾಗವು 16 ಎಫ್‌ಐಆರ್ ದಾಖಲಿಸಿತ್ತು. ಈ ಬಗ್ಗೆ ಇಡಿ ತನಿಖೆ ಕೈಗೊಂಡಿದ್ದು, ಈ ಸಹಕಾರಿ ಸಂಘದ ಸದಸ್ಯರ ಅರಿವಿಲ್ಲದೆ ಒಂದೇ ಆಸ್ತಿಯ ಬಗ್ಗೆ ಹಲವು ಬಾರಿ ಈ ಸಹಕಾರಿ ಬ್ಯಾಂಕ್‌ನಿಂದ ನಕಲಿ ಸಾಲಗಳನ್ನು ಮಂಜೂರು ಮಾಡಲಾಗಿದೆ ಎಂದು ಇಡಿ ತನಿಖೆಯಲ್ಲಿ ಕಂಡುಬಂದಿದೆ. ಸದಸ್ಯರಲ್ಲದವರಿಗೆ ಇತರ ಸದಸ್ಯರ ಹೆಸರಿನಲ್ಲಿ ಬೇನಾಮಿ ಸಾಲಗಳನ್ನು ಮಂಜೂರು ಮಾಡಲಾಗಿದೆ ಮತ್ತು ಅಂತಹ ಹಣವನ್ನು ಆರೋಪಿ ಫಲಾನುಭವಿಗಳು ಪಡೆದುಕೊಂಡಿದ್ದಾರೆ ಎಂದು ಇಡಿ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿ 2023 ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಾಲ್ವರನ್ನು ಬಂಧಿಸಿ, 117 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಈ ಕುರಿತು ಕಳೆದ ಜನವರಿಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದ ಜಾರಿ ನಿರ್ದೇಶನಾಲಯವು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಜಿಲ್ಲಾ ಸಮಿತಿ ಸದಸ್ಯರ ಸೂಚನೆಗಳ ಮೇರೆಗೆ ಈ ಸಹಕಾರಿ ಬ್ಯಾಂಕ್ ಬೇನಾಮಿ ಸಾಲ ವಿತರಿಸಿದ್ದು, ಆ ಫಲಾನುಭವಿಗಳಿಂದ ಉಡುಗೊರೆಯಾಗಿ ದೇಣಿಗೆ ಪಡೆದುಕೊಂಡಿದೆ ಎಂದು ಇಡಿ ಹೇಳಿತ್ತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com