ನಾಮನಿರ್ದೇಶಿತರಿಗೆ ಮತದಾನದ ಹಕ್ಕು ನೀಡಿದರೆ ಸಂಘದ ನಿಯಂತ್ರಣಕ್ಕೆ ಅವಕಾಶ ಕೊಟ್ಟಂತೆ ಎಂದ ಗೆಹ್ಲೋತ್
ಬೆಂಗಳೂರು: ಸಹಕಾರ ವಲಯದಲ್ಲಿ ಮಹತ್ವದ ಬದಲಾವಣೆ ತರಬಲ್ಲ ಎರಡು ಪ್ರಮುಖ ಕಾನೂನು ತಿದ್ದುಪಡಿ ವಿಧೇಯಕಗಳನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಎರಡನೇ ಬಾರಿ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಸದನದಲ್ಲಿ ಪಾಸ್ ಆಗಿ ರಾಜ್ಯಪಾಲರ ಅಂಕಿತಕ್ಕೆ ಬಂದಿದ್ದ ‘ಕರ್ನಾಟಕ ಸಹಕಾರಿ ಸಂಘಗಳ (ತಿದ್ದುಪಡಿ) ಮಸೂದೆ-2024’ ಮತ್ತು ‘ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ- 2024’ ಈ ಎರಡನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಸಹಿ ಹಾಕದೆ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದು, ಈ ವಿಷಯದಲ್ಲಿ ಕೆಲವೊಂದು ಸ್ಪಷ್ಟನೆಯನ್ನೂ ಕೇಳಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಕೆಲವು ದಿನಗಳ ಹಿಂದಷ್ಟೇ ‘ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ 2024’ಯನ್ನು ಸಹಿ ಹಾಕದೆ ವಾಪಸ್ ಕಳುಹಿಸಿದ್ದ ರಾಜ್ಯಪಾಲರು ಇದೀಗ ಮತ್ತೆರಡು ವಿಧೇಯಕಗಳನ್ನು ವಾಪಸ್ ಕಳುಹಿಸಿದ್ದಾರೆ. ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಹಲವು ಆಕ್ಷೇಪಗಳನ್ನು ಮಾಡಿದ್ದಾರೆ. ಸಹಕಾರಿ ಸಂಘಗಳಿಗೆ ಮೀಸಲಾತಿ ಆಧಾರದ ಮೇಲೆ ನಾಮನಿರ್ದೇಶನ ಮಾಡುವ ಬಗ್ಗೆ ಸರ್ಕಾರವು ತಿದ್ದುಪಡಿ ಮಾಡಿತ್ತು. ಆದರೆ ಈ ತಿದ್ದುಪಡಿಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾಮನಿರ್ದೇಶಿತರಿಗೆ ಮತದಾನದ ಹಕ್ಕುಗಳನ್ನು ನೀಡಿದರೆ ಸಂಘದ ನಿಯಂತ್ರಣಕ್ಕೆ ಅವಕಾಶ ಕೊಟ್ಟಂತಾಗುತ್ತದೆ. ಚುನಾಯಿತ ಸದಸ್ಯರ ಹಕ್ಕುಗಳನ್ನು ಹಿಂಬಾಗಿಲಿನ ಮೂಲಕ ಕಸಿದುಕೊಳ್ಳಲಾಗುತ್ತದೆ. ಇದು ಸಹಕಾರಿ ಕ್ಷೇತ್ರದ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಹೆಜ್ಜೆಯಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ 2024ಕ್ಕೂ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದು, ಸೌಹಾರ್ದ ಸಹಕಾರಿ ಮಸೂದೆಗೆ ಸಂಬಂಧಿಸಿದಂತೆ, ಅಧಿಕಾರಿಗಳು ನೀಡಿದ ಸ್ಪಷ್ಟನೆಗಳು ತೃಪ್ತಿಕರವಾಗಿಲ್ಲ. ಎಲ್ಲ ಸುಸ್ತಿದಾರರಿಗೆ ಮತದಾನದ ಹಕ್ಕು ನೀಡುವ ಬದಲು, ಅವರು ಮತದಾನ ಮಾಡದಂತೆ ತಡೆಯಲು ಸರಿಯಾದ ವಿಧಾನವನ್ನು ಜಾರಿಗೆ ತರಬೇಕು ಎಂದು ರಾಜ್ಯಪಾಲರು ಸಲಹೆ ನೀಡಿದ್ದಾರೆ.
ವಿಧೇಯಕದಲ್ಲಿ ಏನಿತ್ತು?
ಕೋ-ಆಪರೇಟಿವ್ ಸೊಸೈಟಿಗಳಿಗೆ ಸರ್ಕಾರ ಮಾಡುವ ನಾಮನಿರ್ದೇಶಿತ ಸದಸ್ಯರ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಈ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿತ್ತು. ಸಹಕಾರ ಸಂಘಗಳಲ್ಲಿ ಪ್ರಾತಿನಿಧ್ಯವಿಲ್ಲದ ಶೋಷಿತ ಸಮುದಾಯಗಳಿಗೆ ಅವಕಾಶ ಕಲ್ಪಿಸುವ ಅಂದರೆ ಮೀಸಲು ವ್ಯವಸ್ಥೆ ಗಟ್ಟಿಗೊಳಿಸುವುದು ಈ ವಿಧೇಯಕದ ಉದ್ದೇಶವಾಗಿತ್ತು. ಜತೆಗೆ ಕೋ-ಆಪರೇಟಿವ್ ಚುನಾವಣೆ ಪ್ರಾಧಿಕಾರವನ್ನು ರದ್ದು ಮಾಡಿ ಈ ಅಧಿಕಾರವನ್ನು ಸಹಕಾರ ಸಂಘಗಳ ನಿಬಂಧಕರಿಗೆ ವರ್ಗಾಯಿಸಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿತ್ತು. ವಿಧೇಯಕದ ಈ ಪ್ರಮುಖ ಆಶಯಗಳಿಗೇ ರಾಜ್ಯಪಾಲರು ಗಂಭೀರ ಆಕ್ಷೇಪ ಎತ್ತಿದ್ದಾರೆ. ಸಹಕಾರ ಸಂಘಗಳಿಗೆ ಸರ್ಕಾರ ನಾಮನಿರ್ದೇಶನ ಸದಸ್ಯರ ಪ್ರಮಾಣ ಹೆಚ್ಚಿಸಿ ಅವರಿಗೆ ಮತದಾನದ ಹಕ್ಕು ನೀಡುವುದು ಪ್ರಜಾತಂತ್ರದ ಆಶಯಕ್ಕೆ ವಿರುದ್ಧವಾಗಿದೆ. ಇದು ಸಹಕಾರ ವಲಯದ ಸ್ವಾಯತ್ತತೆಯನ್ನೇ ದುರ್ಬಲಗೊಳಿಸುತ್ತದೆ. ಅನಗತ್ಯ ಹೊರೆ ಎಂಬ ಕಾರಣ ನೀಡಿ ಚುನಾವಣಾ ಪ್ರಾಧಿಕಾರವನ್ನು ರದ್ದುಪಡಿಸುವುದರಿಂದ ಮುಕ್ತ ಮತ್ತು ನ್ಯಾಯಯುತ ಚುನಾವಣೆ ದೃಷ್ಟಿಯಿಂದ ಒಳ್ಳೆಯದಲ್ಲ ಎಂದಿದ್ದಾರೆ.
ಸೌಹಾರ್ದ ಸಹಕಾರಿ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದ ‘ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ’ಕ್ಕೂ ರಾಜ್ಯಪಾಲರು ಅಸಮ್ಮತಿ ಸೂಚಿಸಿದ್ದಾರೆ. ನೋಂದಣಿಯಾದ ಬಳಿಕ ಸೌಹಾರ್ದ ಸಹಕಾರ ಸಂಸ್ಥೆಗಳಲ್ಲಿ ಸರ್ಕಾರದ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಠೇವಣಿದಾರರ ಹಿತದೃಷ್ಟಿಯಿಂದ ಈ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಪೂರಕವಾದ ಅಂಶಗಳನ್ನು ಕಾಯ್ದೆಯಲ್ಲಿ ಸೇರ್ಪಡೆ ಮಾಡಿ ತಿದ್ದುಪಡಿ ವಿಧೇಯಕವನ್ನು ಸರ್ಕಾರ ರೂಪಿಸಿತ್ತು. ಸಹಕಾರಿ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ ತರುವ ಅಂಶಗಳಿವೆ ಎಂಬುದಕ್ಕೆ ಕಾರಣಗಳನ್ನು ಪಟ್ಟಿ ಮಾಡಿರುವ ರಾಜ್ಯಪಾಲರು ಈ ವಿಧೇಯಕವನ್ನೂ ಹಿಂತಿರುಗಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com