ಅಭಿವಂದನೆ ಸ್ವೀಕರಿಸಿ, ಸವಲತ್ತು ವಿತರಿಸಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿಕೆ
ಮಂಗಳೂರು: ಮೊಳಹಳ್ಳಿ ಶಿವರಾಯರಿಂದ ಮೊದಲ್ಗೊಂಡು ಹಲವಾರು ಸಹಕಾರಿ ಧುರೀಣರಿಂದ ಸಹಕಾರಿ ಕ್ಷೇತ್ರ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅವರ ಹಾದಿಯಲ್ಲಿ ಸಾಗಿ ಈ ಕ್ಷೇತ್ರವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವ ತೃಪ್ತಿಯಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
https://chat.whatsapp.com/EbVKVnWB6rlHT1mWtsgbch
ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ‘ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಭಿವಂದನಾ ಸಮಿತಿ’ ವತಿಯಿಂದ ತಮ್ಮ 76ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ಪ್ರಯುಕ್ತ ಏರ್ಪಡಿಸಿದ್ದ ಅಭಿವಂದನಾ ಸಮಾರಂಭ ಹಾಗೂ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಾವಿರಾರು ಕೃಷಿಕರಿಗೆ ಆರ್ಥಿಕ ಶಕ್ತಿಯಾಗಿ ನಿಂತಿರುವ ಸಹಕಾರಿ ಕ್ಷೇತ್ರ ಇಂದು ಲಕ್ಷಾಂತರ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಕೂಡ ನೆರವಾಗಿದೆ. ಹಂತಹಂತವಾಗಿ ಬೆಳೆದ ಸಹಕಾರಿ ರಂಗ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅತ್ಯಂತ ಪವಿತ್ರವಾಗಿರುವ ಸಹಕಾರಿ ಕ್ಷೇತ್ರ, ಜನರ ಆರ್ಥಿಕ ಸಬಲೀಕರಣಕ್ಕೂ ಕಾರಣವಾಗಿದೆ. ಮೊಳಹಳ್ಳಿ ಶಿವರಾಯರು ಭದ್ರ ಬುನಾದಿ ಹಾಕಿರುವ ಅವಿಭಜಿತ ದ.ಕ. ಜಿಲ್ಲೆಯ ಸಹಕಾರಿ ಕ್ಷೇತ್ರ ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 29 ವರ್ಷಗಳಿಂದ ಕೃಷಿ ಸಾಲ ಶೇ.100ರಷ್ಟು ಮರುಪಾವತಿ ಆಗುತ್ತಿದೆ. 27 ವರ್ಷಗಳ ಹಿಂದೆ ನವೋದಯ ಸ್ವಸಹಾಯ ಸಂಘಗಳನ್ನು ಸೃಷ್ಟಿಸಲಾಗಿದ್ದು, 7 ಜಿಲ್ಲೆಗಳ 3.5 ಲಕ್ಷ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಡಾ.ರಾಜೇಂದ್ರ ಕುಮಾರ್ ಹೇಳಿದರು.
ಸರ್ಕಾರ ಕಣ್ತೆರೆಯಲಿ
ಹೊರರಾಜ್ಯಗಳಿಂದ ಬಂದು ಇಲ್ಲಿ ವ್ಯವಹಾರ ಮಾಡುವವರಿಂದ ಸಮಸ್ಯೆಯಾಗಿರಬಹುದು. ಅಧಿಕ ಬಡ್ಡಿ ತೆಗೆದುಕೊಂಡು ಜನರಿಗೆ ವಂಚನೆ ಮಾಡುವವರ ಬಗ್ಗೆ ಸರ್ಕಾರ ಕಣ್ತೆರೆಯಬೇಕು. ಯಾರು ತಪ್ಪಿತಸ್ಥರು ಎಂಬುದನ್ನು ಪತ್ತೆಹಚ್ಚಬೇಕು. ಸಹಕಾರಿ ಬ್ಯಾಂಕ್ ಏಳು ಜಿಲ್ಲೆಗಳಲ್ಲಿ 10 ಮಂದಿ ಇರುವ ಗುಂಪುಗಳಿಗೆ ಸಾಲ ನೀಡುತ್ತದೆ. ಶೇ.೯೯.೫ರಷ್ಟು ಸಾಲ ಮರುಪಾವತಿ ಆಗುತ್ತಿದೆ. ವಸೂಲಾತಿ ಎನ್ನುವ ಕ್ರಮವೇ ಇಲ್ಲ. ಇದನ್ನು ಸರ್ಕಾರ ಗಮನಿಸಬೇಕು ಎಂದು ಡಾ.ರಾಜೇಂದ್ರ ಕುಮಾರ್ ಹೇಳಿದರು.
ರಾಜೇಂದ್ರ ಕುಮಾರ್‌ಗೆ ಬಡವರ ಬಗ್ಗೆ ಕಾಳಜಿ
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಹಕಾರಿ ಕ್ಷೇತ್ರದ ಮೂಲಕ ಇಡೀ ಸಮಾಜವನ್ನು ಒಗ್ಗೂಡಿಸಿದ ದೊಡ್ಡ ಶಕ್ತಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು. ದೇಶದಲ್ಲಿಯೇ ಅತೀ ಹೆಚ್ಚು ಕಿಸಾನ್ ಕಾರ್ಡ್‌ಗಳನ್ನು ಕೊಟ್ಟಿರುವ ಸಹಕಾರಿ ಬ್ಯಾಂಕ್ ಬಡವರ ಬಗ್ಗೆ ಹೆಚ್ಚು ಕಳಕಳಿ ಹೊಂದಿದೆ. ತಾಸುಗಟ್ಟಲೆ ರೈತರನ್ನು ಕಾಯಿಸದೆ ರೈತರಿಗೆ ನೇರ ಸಾಲ ನೀಡುವ ಮೂಲಕ ಕೃಷಿ ಕ್ಷೇತ್ರ ಮತ್ತಷ್ಟು ಬೆಳೆಯಲು ಸಹಕಾರಿಯಾಗಿದೆ. ಇದರ ಹಿಂದಿರುವ ದೊಡ್ಡ ಶಕ್ತಿ ಎಂ.ಎನ್.ರಾಜೇಂದ್ರ ಕುಮಾರ್. ಅವರ ಬದ್ಧತೆ, ಕಾಳಜಿ ಅಭಿವೃದ್ಧಿ ಚಿಂತನೆಯಿಂದಾಗಿ ಸಹಕಾರಿ ರಂಗ ಉತ್ತುಂಗ ಶಿಖರಕ್ಕೇರುತ್ತಿದೆ. ಕಾರ್ನಾಡ್ ಸದಾಶಿವ ರಾಯರು, ಮೊಳಹಳ್ಳಿ ಶಿವರಾಯರ ಸಾಲಿನಲ್ಲಿ ಕಾಣಿಸಿಕೊಳ್ಳುವ ಡಾ.ರಾಜೇಂದ್ರ ಕುಮಾರ್ ಸಹಕಾರಿ ಕ್ಷೇತ್ರದ ಶಕ್ತಿ. ಕಳೆದ ನಾಲ್ಕೂವರೆ ದಶಕದಿಂದ ಸಹಕಾರಿ ಕ್ಷೇತ್ರಕ್ಕೆ ಅವರ ಕೊಡುಗೆ ಮಹತ್ತರವಾದುದು ಎಂದರು.
ಸಹಕಾರಿ ರಂಗದ ಚಾಣಾಕ್ಷ
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ರಾಜೇಂದ್ರ ಕುಮಾರ್ ಅವರು ಸಹಕಾರಿ ರಂಗದ ಚಾಣಾಕ್ಷ. ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುತ್ತ ಅಜಾತಶ್ರುವಾಗಿ ಗುರುತಿಸಿಕೊಂಡಿರುವವ ಅವರು ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೂ ಮಹತ್ತರ ಕೊಡುಗೆ ನೀಡಿದವರು. ಅನೇಕ ಉದ್ಯಮಿಗಳ ನಿರ್ಮಾಣದಲ್ಲೂ ತನ್ನದೇ ಆದ ಪಾತ್ರ ವಹಿಸಿದ್ದಾರೆ ಎಂದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಹಾರಗಳನ್ನು ಮೀರಿ ಸಹಕಾರಿ ಬ್ಯಾಂಕುಗಳು ಮುನ್ನಡೆಯುತ್ತಿವೆ. ಉತ್ತಮ ಸೇವೆ ನೀಡುತ್ತಾ ಜನರ ವಿಶ್ವಾಸ ಗಳಿಸಿರುವ ಈ ಬ್ಯಾಂಕುಗಳ ಬೆಳವಣಿಗೆಯಲ್ಲಿ ರಾಜೇಂದ್ರ ಕುಮಾರ್ ಅವರ ಕೊಡುಗೆ ಬಹು ದೊಡ್ಡದಿದೆ ಎಂದರು.
ಸದಾ ಸಕಾರಾತ್ಮಕ ಚಿಂತನೆಯೊಂದಿಗೆ ಬ್ಯಾಂಕಿನ ಬೆಳವಣಿಗೆಯಲ್ಲಿ ಅತ್ಯಮೂಲ್ಯ ಕೊಡುಗೆ ನೀಡಿರುವ ಎಂಎನ್‌ಆರ್ ಹಂತಹಂತವಾಗಿ ಬೆಳೆದವರು ಈ ಮೂಲಕ ಸಾಧನೆಯ ಹಾದಿಯಲ್ಲಿರುವವರಿಗೆ ಮಾದರಿ ಮೇಲ್ಪಂಕ್ತಿ ಹಾಕಿದ್ದಾರೆ ಎಂದು ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.
ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿ ಸೊತ್ತು ವಶಪಡಿಸಿಕೊಂಡ ಪೊಲೀಸ್ ಇಲಾಖೆಗೆ ಗೌರವ ಸಲ್ಲಿಸುವ ಭಾಗವಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಉದ್ಯಮಿ ಕಣಚೂರು ಮೋನು, ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಡುಪಿ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕೆಎಂಎಫ್ ಉಪಾಧ್ಯಕ್ಷ ಜಯರಾಮ್ ರೈ, ಅಭಿವಂದನಾ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಎಸ್.ಕೋಟ್ಯಾನ್, ಸಹಕಾರಿ ಉಪನಿಬಂಧಕ ರಮೇಶ್, ಡಾ.ರಾಜೇಂದ್ರ ಕುಮಾರ್ ಅವರ ಪುತ್ರ ಮೇಘರಾಜ್ ಜೈನ್, ಸೊಸೆ ಶಮಾ, ಬ್ಯಾಂಕಿನ ನಿರ್ದೇಶಕರು ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com