ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಲಹೆ
ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತಿದಿನ ೩ ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಆದರೆ ಮಾರುಕಟ್ಟೆಯಲ್ಲಿ ೫ ಲಕ್ಷ ಲೀಟರ್ ಹಾಲು ಬೇಡಿಕೆ ಇದೆ. ಆದ್ದರಿಂದ ಹೆಚ್ಚುವರಿ ಹಾಲನ್ನು ಬೇರೆ ಜಿಲ್ಲೆಯಿಂದ ಖರೀದಿಸಿ ಮಾರಾಟ ಮಾಡಲಾಗುತ್ತಿದೆ. ದ.ಕ. ಸಹಕಾರಿ ಹಾಲು ಒಕ್ಕೂಟದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಇನ್ನೂ ಹೆಚ್ಚಿನ ಶ್ರಮ ವಹಿಸಿ, ಹೈನುಗಾರರನ್ನು ಉತ್ತೇಜಿಸಿ ಹೆಚ್ಚು ಹಾಲು ಸಂಗ್ರಹವಾಗುವಂತೆ ಮಾಡಿಕೊಳ್ಳಬೇಕು ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್.ರಾಜೇಂದ್ರ ಕುಮಾರ್ ಸಲಹೆ ನೀಡಿದರು.
https://chat.whatsapp.com/EbVKVnWB6rlHT1mWtsgbch
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದ. ಕ. ಜಿಲ್ಲಾ ಸಹಕಾರ ಯೂನಿಯನ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಇದರ ಅಧಿಕಾರಿಗಳಿಗೆ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದ.ಕ. ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿ ದ.ಕ. ಸಹಕಾರಿ ಹಾಲು ಒಕ್ಕೂಟವು ಕರ್ನಾಟಕದಲ್ಲಿಯೇ ಮಾದರಿ ಹಾಲು ಒಕ್ಕೂಟವಾಗಿದೆ. ಇದಕ್ಕೆ ಸಿಬ್ಬಂದಿಗಳ ಪಾತ್ರ ಮಹತ್ವದ್ದಾಗಿದೆ. ಅವರಿಗೆ ಸರಿಯಾದ ಮಾಹಿತಿ, ತರಬೇತಿ ನೀಡುವುದರಿಂದ ಇನ್ನೂ ಹೆಚ್ಚಿನ ಹಾಲು ಉತ್ಪಾದನೆಯಾಗಲು ಕಾರಣವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಹಾಲು ಉತ್ಪಾದನೆ ಹೆಚ್ಚಾಗಲು ಪ್ರತಿ ಗ್ರಾಮದಲ್ಲೂ, ಹೈನುಗಾರರಿಗೆ ರೈತ ಸಮಾವೇಶಗಳನ್ನು ಮಾಡಿ ಹೈನುಗಾರಿಕೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸಗಳು ಆಗಬೇಕು. ಸಿಬ್ಬಂದಿ ವರ್ಗದವರು, ಪ್ರಸ್ತುತ ಇರುವ ಹೈನುಗಾರರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಪರಿಶೀಲಿಸುವ ಪ್ರಯತ್ನ ಮಾಡಬೇಕು ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ, ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್ ರಮೇಶ್, ಯೂನಿಯನ್ ಉಪಾಧ್ಯಕ್ಷ ನಿಲಯ ಎಂ.ಅಗರಿ, ನಿರ್ದೇಶಕರಾದ ಡಾ.ಎಸ್.ಆರ್.ಹರೀಶ್ ಆಚಾರ್ಯ, ಚಿತ್ತರಂಜನ್ ಬೋಳಾರ್, ಸುಧಾಕರ ಶೆಟ್ಟಿ, ಸಂಜೀವ ಪುಜಾರಿ, ಸವಿತಾ ಎನ್.ಶೆಟ್ಟಿ, ದ.ಕ. ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ, ವ್ಯವಸ್ಥಾಪಕ ರವಿರಾಜ್ ಉಡುಪ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಹಕಾರ ಇಲಾಖೆಯ ಅಧೀಕ್ಷಕ ಎನ್.ಜೆ. ಗೋಪಾಲ್, ಹಾಗೂ ಗಣನಾಥ ಶೆಟ್ಟಿ ಎಕ್ಕಾರು ಭಾಗವಹಿಸಿದ್ದರು. ಯೂನಿಯನ್ ನಿರ್ದೇಶಕ ಡಾ.ಎಸ್. ಆರ್. ಹರೀಶ್ ಆಚಾರ್ಯ ಸ್ವಾಗತಿಸಿದರು. ಸವಿತಾ ಎನ್.ಶೆಟ್ಟಿ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ವಿ. ಹಿರೇಮಠ್ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com