ಸಹಕಾರ ಕ್ಷೇತ್ರದ ಚಟುವಟಿಕೆಗಳಿಗೆ ಬಲ ತುಂಬುವುದು, ಸರ್ಕಾರ ಮತ್ತು ಸಹಕಾರಿ ಸಂಸ್ಥೆಗಳ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುವ ಇರಾದೆ
ಶಿವಮೊಗ್ಗ: ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಚಟುವಟಿಕೆಗಳನ್ನು ಬಲಪಡಿಸಲು ಮತ್ತು ಸರ್ಕಾರ ಮತ್ತು ಸಹಕಾರಿ ಸಂಸ್ಥೆಗಳ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಲು “ಸಹಕಾರಿಗಳ ವೇಗವರ್ಧಕ ಸಮಿತಿ” ಎಂಬ ನೂತನ ಸಂಘಟನೆಯೊಂದನ್ನು ಸ್ಥಾಪಿಸಲಾಗಿದೆ.
https://chat.whatsapp.com/EbVKVnWB6rlHT1mWtsgbch
ಭದ್ರಾವತಿ ತಾಲೂಕಿನ ಬರಂದೂರು ಬಳಿಯ ಪಂಚಮವೇದ ಸಾವಯವ ಕೃಷಿ ಕೇಂದ್ರದಲ್ಲಿ ಭಾನುವಾರ ಈ ಸಮಿತಿಯ ಮೊದಲ ಸಭೆ ನಡೆದಿದ್ದು ಇದೇ ವೇಳೆ ಸಹಕಾರಿಗಳ ವೇಗವರ್ಧಕ ಸಮಿತಿ ರಚಿಸಲಾಗಿದೆ. ರಾಜ್ಯದ ಹಲವಾರು ಹಿರಿಯ ಸಹಕಾರಿ ಮುಖಂಡರು, ಸಹಕಾರಿ ವಲಯದಲ್ಲಿ ಕೆಲಸ ಮಾಡಿದ್ದ ಅಧಿಕಾರಿಗಳು ಮತ್ತು ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಹಿರಿಯರು ಸಭೆಯಲ್ಲಿ ಭಾಗವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿ, ಸಭೆಯಲ್ಲಿ ಮಾತನಾಡಿ, ಈ ಸಮಿತಿಯು ಸಹಕಾರಿ ವಲಯದಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಮತ್ತು ಪ್ರಸ್ತುತ ಘಟನೆಗಳಿಗೆ ಪ್ರತಿಕ್ರಿಯಿಸಬೇಕು. ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಸರ್ಕಾರದಿಂದ ಸಿಗಬೇಕಾದ ಬೆಂಬಲ ಪಡೆಯಲು ಶ್ರಮಿಸಬೇಕು. ಇದು ಸಹಕಾರಿ ವಲಯಕ್ಕೆ ಬೌದ್ಧಿಕ ಚಿಂತಕರ ಚಾವಡಿಯಾಗಿಯೂ ಕಾರ್ಯನಿರ್ವಹಿಸಬೇಕು. ಸಹಕಾರಿ ವಲಯದಲ್ಲಿನ ಬೆಳವಣಿಗೆಗಳನ್ನು ಚರ್ಚಿಸುವುದು ಮಾತ್ರವಲ್ಲದೆ, ತಜ್ಞರ ಅಭಿಪ್ರಾಯಗಳನ್ನು ಸರ್ಕಾರಕ್ಕೆ ತಿಳಿಸುವ ಕೆಲಸವನ್ನೂ ಮಾಡಬೇಕು. ಅದಕ್ಕಾಗಿ ನಿಯಮಿತವಾಗಿ ಸಭೆ ಸೇರಬೇಕು ಎಂದು ಹೇಳಿದರು.
ರಾಜ್ಯದಲ್ಲಿನ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಚರ್ಚೆಯ ನಂತರ, ಎಲ್ಲಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗಳ ಮಾಸಿಕ ವರದಿಯನ್ನು ಪ್ರಕಟಿಸುವ ವಿಶೇಷ ವೆಬ್‌ಸೈಟ್ ಅನ್ನು ಸಹಕಾರಿ ಇಲಾಖೆ ಮಟ್ಟದಲ್ಲಿ ನಿರ್ವಹಿಸಬೇಕೆಂದು ಸಮಿತಿಯು ಶಿಫಾರಸು ಮಾಡಲು ನಿರ್ಧರಿಸಿತು. ನಿಯಮಗಳನ್ನು ಪಾಲಿಸದ ಸಂದರ್ಭದಲ್ಲಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗಳ ಮೇಲೆ ದಂಡ ವಿಧಿಸಲು ಸ್ವಯಂಚಾಲಿತ ವ್ಯವಸ್ಥೆಯೊಂದನ್ನು ರೂಪಿಸಲು ಸರ್ಕಾರಕ್ಕೆ ಶಿಫಾರಸು ಮಾಡಲು ಸಮಿತಿ ನಿರ್ಧರಿಸಿದೆ.
ಸಹಕಾರ ಕಾಯ್ದೆ ಜಾರಿಗೆ ಬಂದ ನಂತರ, ‘ಒಬ್ಬ ಸದಸ್ಯ, ಒಂದು ಮತ’ ಎಂಬ ನೀತಿ ಅನುಸರಿಸಲಾಗುತ್ತಿದೆ. ಆದರೆ ಇದು ಅನೇಕ ಕಡೆ ಪಾಲನೆಯಾಗುತ್ತಿಲ್ಲ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ. ಪ್ರಸಕ್ತ ಸಹಕಾರ ಸಂಘಗಳಲ್ಲಿ ನಿರ್ದೇಶಕರ ಸಂಖ್ಯೆಯ ಆಧಾರದ ಮೇಲೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದು ಸಹಕಾರಿ ತತ್ವಗಳು ಮತ್ತು ಸಹಕಾರಿ ಕಾಯ್ದೆಗೆ ವಿರುದ್ಧವಾಗಿದೆ. ಆದ್ದರಿಂದ, ಪ್ರತಿಯೊಬ್ಬ ಸದಸ್ಯರು ಒಂದು ಮತವನ್ನು ಮಾತ್ರ ಚಲಾಯಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ನಿವೃತ್ತ ಸಹಕಾರಿ ಅಧಿಕಾರಿಗಳಾದ ಪರಶಿವ ಮೂರ್ತಿ, ರತ್ನಾ ನಾಯಕ್, ಮಧುಕರ್ ಹೆಗ್ಡೆ, ಸುಬ್ರಹ್ಮಣ್ಯ ಯದ್ಗೆರೆ, ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವಾ, ಎಚ್.ಎಸ್.ಮಂಜಪ್ಪ, ಗೋಪಾಲಕೃಷ್ಣ ವೈದ್ಯ, ಕರ್ನಾಟಕ ರಾಜ್ಯ ಸಹಕಾರ ಸಂಯುಕ್ತ ಸಂಘದ ಶರಣುಗೌಡ, ವಿಜಯಪುರ ಡಿಸಿಸಿ ಬ್ಯಾಂಕ್ ಅಭಿವೃದ್ಧಿ ಅಧಿಕಾರಿ ಎಂ.ಜಿ ಪಾಟೀಲ್, ಹೊಸಪೇಟೆ ವಿಕಾಸ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ, ಲೇಖಕ ಶಿವಾನಂದ ಕಳವೆ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com