ಬಜೆಟ್ ಮುನ್ನ ಆರ್ಥಿಕ ಸಮೀಕ್ಷೆಯಲ್ಲಿ ಪ್ರತಿಪಾದನೆ
ನವದೆಹಲಿ: ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆ ದರ ಶೇಕಡಾ 6.3ರಿಂದ 6.8ರವರೆಗೆ ಇರಲಿದೆ ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದ್ದು, ಪ್ರಸಕ್ತ ಸಾಲಿನಲ್ಲಿ ನಿರುದ್ಯೋಗ ದರ ಇಳಿಮುಖವಾಗಿದ್ದು, ಸ್ಥಿರ ಹಣದುಬ್ಬರ ಮತ್ತು ಬೆಳವಣಿಗೆಯ ವೇಗ ಉಳಿಸಿಕೊಳ್ಳಲು ಹೆಚ್ಚಿನ ಸುಧಾರಣೆಗಳ ಅಗತ್ಯವಿದೆ ಎಂದು ಬಜೆಟ್ ಮುನ್ನ ಆರ್ಥಿಕ ಸಮೀಕ್ಷೆ ಪ್ರತಿಪಾದಿಸಲಾಗಿದೆ. ಸಮೀಕ್ಷೆಯ ಪ್ರಕಾರ 2025-26ರಲ್ಲಿ ಭಾರತದ ಆರ್ಥಿಕತೆಯು ಶೇ. 6.3ರಿಂದ 6.8ರಷ್ಟು ವೇಗದಲ್ಲಿ ಬೆಳೆಯುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.
https://chat.whatsapp.com/Ge11n7QCiMj5QyPvCc0H19
2025ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಆಹಾರ ಹಣದುಬ್ಬರ ಪ್ರಮಾಣ ಇಳಿಮುಖವಾಗುವ ಸಾಧ್ಯತೆಯಿದೆ. ತರಕಾರಿ ಬೆಲೆ ಕಡಿಮೆಯಾಗುವ ನಿರೀಕ್ಷೆ ಇದ್ದು, ಕೃಷಿ ಉತ್ಪನ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬರುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. 2026ರಲ್ಲಿ ಭಾರತದ ಆರ್ಥಿಕ ಭವಿಷ್ಯ ಸಮತೋಲಿತವಾಗಿದ್ದು, ಜಾಗತಿಕ ರಾಜಕೀಯ ಅನಿಶ್ಚಿತತೆಗಳು ಬೆಳವಣಿಗೆಗೆ ಅಡ್ಡಿಯಾಗಬಹುದು. ಇದನ್ನು ನಿಭಾಯಿಸಲು ತಂತ್ರಗಳು, ವಿವೇಚನಾಯುಕ್ತ ನೀತಿ ನಿರ್ವಹಣೆ ಮತ್ತು ದೇಶೀಯ ಮೂಲಭೂತ ಅಂಶಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಸಮೀಕ್ಷೆಯು ಹೇಳಿದೆ. ಜಾಗತಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಭಾರತವು ತಳಮಟ್ಟದಲ್ಲಿ ರಚನಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸಬೇಕು ಹಾಗೂ ನಿಯಂತ್ರಣಗಳನ್ನು ತೆಗೆದು ಹಾಕಬೇಕು ಎಂದು ಎಂದು ಸಮೀಕ್ಷೆ ಪ್ರತಿಪಾದಿಸಿದೆ.
ಕೃತಕ ಬುದ್ಧಿಮತ್ತೆ ಬಗ್ಗೆಯೂ ಸಮೀಕ್ಷೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಎಐಗೆ ಸೂಕ್ತವಾದ ಆಡಳಿತ ಚೌಕಟ್ಟು ಇಲ್ಲದೇ ಇದ್ದಲ್ಲಿ, ಇದು ತಂತ್ರಜ್ಞಾನದ ದುರುಪಯೋಗಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದೆ. ದಿವಾಳಿತನ ಕಾನೂನಿನ ಪರಿಣಾಮ ಸಾವಿರಾರು ಸಾಲಗ್ರಸ್ತರು ಆರಂಭಿಕ ಹಂತಗಳಲ್ಲಿಯೇ ತಮ್ಮ ಸಂಕಷ್ಟವನ್ನು ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ಸಮೀಕ್ಷೆ ಮೆಚ್ಚುಗೆ ವ್ಯಕ್ತಪಡಿಸಿದೆ. ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಯಲ್ಲಿ ನಗದು ಲಭ್ಯತೆಯನ್ನು ಹೆಚ್ಚಿಸಲು ಪ್ರವೇಶ ವೆಚ್ಚಗಳು, ಮಾಹಿತಿ ಅಸಮಾನತೆ ಮತ್ತು ದ್ವಿತೀಯ ಮಾರುಕಟ್ಟೆಯ ಅನುಪಸ್ಥಿತಿಯನ್ನು ಪರಿಹರಿಸಬೇಕು ಎಂದು ಸಮೀಕ್ಷೆ ಹೇಳಿದೆ. 2024ರಲ್ಲಿ ರೂಪಾಯಿ ಮೌಲ್ಯ ಕುಸಿತಕ್ಕೆ ಬಲವಾದ ಅಮೆರಿಕ ಡಾಲರ್ ಮತ್ತು ಜಾಗತಿಕ ರಾಜಕೀಯ ಉದ್ವಿಗ್ನತೆಗಳು ಕಾರಣ ಎಂದು ಸಮೀಕ್ಷೆ ಹೇಳಿದೆ. ಅಮೆರಿಕಾದ ಚುನಾವಣೆಯ ಸುತ್ತ ಆವರಿಸಿದ್ದ ಅನಿಶ್ಚಿತತೆಯೂ ಇದಕ್ಕೆ ಕಾರಣ ಎಂದು ವರದಿ ತಿಳಿಸಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com