ಮಡಿಕೇರಿಯಲ್ಲಿ ಕೇರಳ ತಂಡದ ವ್ಯವಸ್ಥಿತ ಜಾಲ ಬೇಧಿಸಿದ ಕೊಡಗು ಜಿಲ್ಲಾ ಪೊಲೀಸ್ ತಂಡ
ಮಡಿಕೇರಿ: ನಕಲಿ ಚಿನ್ನ ಅಡಮಾನವಿರಿಸಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗಹೆ ವಂಚಿಸುತ್ತಿರುವ ಪ್ರಕರಣಗಳು ಆಗಿಂದಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಇದೀಗ ಅಂಥದೇ ಪ್ರಕರಣವೊಂದನ್ನು ಬೇಧಿಸಿರುವ ಕೊಡಗು ಜಿಲ್ಲಾ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.
https://chat.whatsapp.com/Ge11n7QCiMj5QyPvCc0H19
ಕೊಡಗು ಜಿಲ್ಲೆಯ ವಿವಿಧ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ನಕಲಿ ಚಿನ್ನ ಅಡಮಾನ ಇರಿಸಿ ಸಾಲ ಪಡೆದುಕೊಂಡು ವಂಚಿಸಿರುವ ಆರೋಪಿಗಳು 625 ಗ್ರಾಂ ತೂಕದ ನಕಲಿ ಚಿನ್ನಾಭರಣವನ್ನು ಅಡವು ಇರಿಸಿ 34.95 ಲಕ್ಷ ರೂ. ಸಾಲ ಪಡೆದಿದ್ದರು. ಈ ಪ್ರಕರಣವನ್ನು ಪತ್ತೆ ಹಚ್ಚಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ನಕಲಿ ಚಿನ್ನ ಅಡಮಾನವಿಟ್ಟು ಸಾಲ ಪಡೆದ ಪ್ರಕರಣದ ಪ್ರಮುಖ ರೂವಾರಿ ಕೇರಳದ ಮೊಹಮ್ಮದ್ ಕುಂಞ (48). ಈತ ಆಭರಣ ತಯಾರಕನಾಗಿದ್ದು, ಪ್ರದೀಪ್ (60) ಎಂಬಾತನಿಗೆ ಹಣ ನೀಡಿ ನುರಿತ ಚಿನ್ನ ಪರೀಕ್ಷಕರಿಗೂ ಗೊತ್ತಾಗದ ಹಾಗೆ ಸುಮಾರು ಒಂದೂವರೆ ಗ್ರಾಂನಷ್ಟು ಚಿನ್ನದ ಕೋಟಿಂಗ್ ಅನ್ನು ಬಳೆಗಳ ಮೇಲೆ ಹಾಕಿ ನಕಲಿ ಬಳೆಗಳನ್ನು ತಯಾರಿಸಿದ್ದ. ಮಧ್ಯವರ್ತಿ ನಿಶಾದ್ ಎಂಬಾತ ಇದನ್ನು ಪಡೆದು ನವಾಜ್ ಎಂಬಾತನಿಗೆ ನೀಡಿದ್ದ. ಹೀಗೆ, ಈ ಜಾಲ ಕೇರಳದಿಂದ ಕೊಡಗಿಗೆ ವಿಸ್ತರಿಸಿತ್ತು.
ಕುಂಜಿಲ ಗ್ರಾಮದ ಕೆ.ಎ.ಮೊಹಮ್ಮದ್ ರಿಜ್ವಾನ್ (35) ಎಂಬಾತ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮಡಿಕೇರಿಯ ಮುಖ್ಯ ಶಾಖೆಯಲ್ಲಿ ಇತ್ತೀಚೆಗೆ 8 ಚಿನ್ನದ ಬಳೆಗಳನ್ನು ಅಡಮಾನ ಮಾಡಿ ಸಾಲ ಪಡೆದುಕೊಳ್ಳುವ ಸಂದರ್ಭ ಅದನ್ನು ಪರಿಶೀಲನೆಗೊಳಪಡಿಸಿದಾಗ ಅವೆಲ್ಲವೂ ನಕಲಿ ಎಂದು ಪತ್ತೆಯಾಗಿದೆ. ನಂತರ ಆತ ಈ ಹಿಂದೆ ಅದೇ ಬ್ಯಾಂಕ್‌ನಲ್ಲಿ ಅಡಮಾನವಿಟ್ಟಿದ್ದ ಆಭರಣಗಳನ್ನೂ ಮತ್ತೊಮ್ಮೆ ಪರಿಶೀಲಿಸಿದ್ದು ಅವುಗಳೂ ನಕಲಿ ಎಂಬುದು ತಿಳಿದುಬಂದಿದೆ. ಕೂಡಲೇ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹೀಗೆ ವಂಚನೆ ಮಾಡುವ ಜಾಲ ಕೊಡಗಿನಲ್ಲಿದೆ ಎಂಬುದು ಗೊತ್ತಾಯಿತು.
ಇದೇ ಆಧಾರದಲ್ಲಿ ಈ ಪ್ರಕರಣದಲ್ಲಿ ಭಾಗಿಗಳಾದ ಕುಂಜಿಲ ಗ್ರಾಮದ ಅಬ್ದುಲ್ ನಾಸಿರ್, ಪಡಿಯಾನಿ ಎಮ್ಮೆಮಾಡು ಗ್ರಾಮದ ಪಿ.ಎಚ್.ರಿಯಾಜ್, ಬಿ.ಎ.ಮೂಸಾ, ಎಂ.ಎಂ.ಮಹಮ್ಮದ್ ಹನೀಫ್, ಖತೀಜಾ, ಭಾಗಮಂಡಲ ಅಯ್ಯಂಗೇರಿಯ ರಫೀಕ್, ಫರ್ಹಾನ್, ಕೇರಳದ ಮಲಪುರಂ ಜಿಲ್ಲೆಯ ಕೆ.ಪಿ.ನವಾಜ್, ಎರ್ನಾಕುಲಂ ಜಿಲ್ಲೆಯ ಕೆ.ಎ.ನಿಶಾದ್ ಸಿಎಂ ಮಹಮ್ಮದ್ ಕುಂಞ, ಪಿ.ಜಿ.ಪುದೀಪ್ ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ 223 ಗ್ರಾಂ ತೂಕದ ಚಿನ್ನ ಲೇಪಿತ 28 ಬಳೆಗಳು, ನಗದು ₹ 2 ಲಕ್ಷ, ಬ್ಯಾಂಕ್ ಖಾತೆಗಳಲ್ಲಿ 2.08 ಲಕ್ಷ, ವಿಮೆ ಮೇಲೆ ಹೂಡಿಕೆ ₹ 1.08 ಲಕ್ಷ, ₹ 1.40 ಲಕ್ಷ ಮೌಲ್ಯದ ಒಂದು ಐಫೋನ್ ವಶಪಡಿಸಿಕೊಳ್ಳಲಾಗಿದೆ.
ಹಂಝ ಎಂಬ ಪ್ರಮುಖ ಆರೋಪಿ ತಪ್ಪಿಸಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಮಡಿಕೇರಿ ನಗರ, ವಿರಾಜಪೇಟೆ ನಗರ, ಗ್ರಾಮಾಂತರ ಮತ್ತು ಭಾಗಮಂಡಲ ಪೊಲೀಸ್ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿತ್ತು. ಪ್ರಮುಖ ಆರೋಪಿ ಪ್ರದೀಪ್ ವಿರುದ್ಧ ಇದೇ ವರ್ಷ 3 ಪ್ರಕರಣಗಳು ಸೇರಿ ಒಟ್ಟು 15 ಪ್ರಕರಣಗಳು ದಾಖಲಾಗಿದ್ದವು. ನಿಶಾದ್ ಎಂಬಾತನ ಮೇಲೆ ದರೋಡೆ ಪ್ರಕರಣ ದಾಖಲಾಗಿದ್ದವು. ಇವರು ಜಾಮೀನಿನ ಮೇಲೆ ಹೊರಬಂದು ಮತ್ತೆ ಮತ್ತೆ ಇಂತಹ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com