ರಾಜ್ಯದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಲಹೆ
ಮಂಗಳೂರಿನಲ್ಲಿ ರಾಜ್ಯಮಟ್ಟದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ
ಮಂಗಳೂರು: ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರು ಕೂಡ ಸಹಕಾರ ಆಂದೋಲನದಲ್ಲಿ ತೊಡಗಿಸಿಕೊಂಡು ಸಹಕಾರ ಚಳವಳಿಯನ್ನು ಮುನ್ನಡೆಸಬೇಕು. ಯುವಕರು ಸಹಕಾರ ಆಂದೋಲನದಲ್ಲಿ ಭಾಗಿಗಳಾಗಿ ಈ ಕ್ಷೇತ್ರವನ್ನು ವಿಸ್ತರಿಸಿ ಸ್ವಾವಲಂಬನೆಯ ಬದುಕು ಸಾಗಿಸಬಹುದು ಎಂದು ರಾಜ್ಯದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್, ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳು, ಎಲ್ಲಾ ವಿಧದ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆಯ ಸಹಯೋಗದೊಂದಿಗೆ ಶನಿವಾರ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
https://chat.whatsapp.com/Ge11n7QCiMj5QyPvCc0H19
ಸಹಕಾರ ಚಳವಳಿ ಜನರ ಆಂದೋಲನವಾಗಿ ರೂಪುಗೊಳ್ಳಬೇಕು. ಸಹಕಾರ ಸಂಸ್ಥೆಗಳು ಜಾತ್ಯತೀತ, ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕು. ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೆಚ್ಚು ಮಾಡುವ ಜೊತೆಗೆ ಸದಸ್ಯರ ಬೇಡಿಕೆ ಪೂರೈಸಿದರೆ ಈ ಕ್ಷೇತ್ರ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ವಿಶ್ಲೇಷಿಸಿದರು.
ದೇಶದಲ್ಲಿ ಆಹಾರ ಸಮಸ್ಯೆಯನ್ನು ನೀಗಿಸುವಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ತರವಾದುದು. ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳು ತಮ್ಮದೇ ಪಾತ್ರವನ್ನು ನಿರ್ವಹಿಸುತ್ತಿವೆ. ಹಲವಾರು ಜನರ ಸ್ವಾವಲಂಬಿ ಬದುಕಿಗೆ ಸಹಕಾರ ಕ್ಷೇತ್ರವೇ ನಾಂದಿ ಹಾಡಿದೆ. ಸಹಕಾರಿ ಸಂಸ್ಥೆಗಳಲ್ಲಿ ಯುವಜನರು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು ಎಂದು ರಾಜಣ್ಣ ಸಲಹೆ ನೀಡಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸಹಕಾರ ಕ್ಷೇತ್ರ ಸಮಾಜವನ್ನು ಬದಲಾಯಿಸುವ ಶಕ್ತಿಯುಳ್ಳ ಕ್ಷೇತ್ರವಾಗಿದೆ. ಉದ್ಯಮ, ಕೃಷಿ ಸೇರಿದಂರೆ ಹಲವು ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಹಕಾರ ಕ್ಷೇತ್ರ ಕಾರಣವಾಗಿದೆ ಎಂದರು.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ವಿಶೇಷ ಸಾಧನೆ ತೋರಿರುವ ಮೂರು ಸಹಕಾರಿ ಸಂಘಗಳಿಗೆ ‘ಸಹಕಾರ ಮಾಣಿಕ್ಯ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೂಡುಬಿದಿರೆ ಸೇವಾ ಸಹಕಾರ ಸಂಘ, ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರ ಸಂಘ ಹಾಗೂ ರಾಮಕೃಷ್ಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಈ ಗೌರವ ಪುರಸ್ಕಾರ ಪಡೆಯಿತು.
ಮತ್ತೆ ನಡೆಯಲಿ ಸಾಲಮೇಳ
ವಸ್ತುಪ್ರದರ್ಶನಗಳನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಬಹಳಷ್ಟು ಜನ ಸಹಕಾರ ಕ್ಷೇತ್ರ ಬೆಳೆಯಲು ಕಾರಣರಾಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಭುಜಕ್ಕೆ ಭುಜ ಕೊಟ್ಟು ದುಡಿದರೆ ಉನ್ನತಿ ಸಾಧ್ಯ. ಹಳ್ಳಿಗಳಲ್ಲಿ ರೈತರು, ಮಹಿಳೆಯರು, ಹೈನುಗಾರರು ಸ್ವಾವಲಂಬಿ ಜೀವನ ಸಾಗಿಸಲು ಸಹಕಾರ ತತ್ವ ಕಾರಣವಾಗಿದೆ ಎಂದು ಹೇಳಿದರು. ಹಿಂದೆ ದೇಶದಲ್ಲಿ ಅಕ್ಕಿಗೆ, ಗೋಧಿಗೆ ಬರಗಾಲ ಇತ್ತು. ಆದರೆ ಈಗ ದೇಶದ ೧೪೦ ಕೋಟಿ ಜನರಿಗೆ ಆಹಾರ ಒದಗಿಸಿ, ಹೊರದೇಶಗಳಿಗೆ ರಫ್ತು ಮಾಡುವಷ್ಟರ ಮಟ್ಟಿಗೆ ನಮ್ಮ ದೇಶ ಸ್ವಾವಲಂಬನೆ ಸಾಧಿಸಿದೆ. ಇದರಲ್ಲಿ ಸಹಕಾರ ತತ್ವದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿದ ರೈತರ ಶ್ರಮವನ್ನು ನಾವು ನೆನೆಯಬೇಕು ಎಂದು ಹೇಳಿದರು. ೧೯೮೦ರ ದಶಕದ ತನಕ ಗ್ರಾಮೀಣ ಭಾಗದ ಜನ, ಮಹಿಳೆಯರು, ಅನಕ್ಷರಸ್ಥರು ಬ್ಯಾಂಕಿಗೆ ಹೋಗುತ್ತಿರಲಿಲ್ಲ. ೧೯೮೦ರ ದಶಕದಲ್ಲಿ ಬಿ.ಜನಾರ್ದನ ಪೂಜಾರಿಯವರು ರಾಷ್ಟ್ರಮಟ್ಟದಲ್ಲಿ ಸಾಲಮೇಳ ಹಮ್ಮಿಕೊಂಡು ಪ್ರತಿಯೊಬ್ಬರೂ ಬ್ಯಾಂಕ್ ಕಡೆ ಹೋಗುವಂತೆ ಮಾಡಿದರು. ಬಡವರಿಗೂ ಸಾಲ ಸಿಗುವಂತಾಯಿತು. ೧೯೮೦ರ ದಶಕದ ನಂತರ ಸಹಕಾರ ಕ್ಷೇತ್ರದ ಬಲವರ್ಧನೆಯಾಯಿತು. ಆ ಬಳಿಕ ಸಾಕಷ್ಟು ಕ್ರಾಂತಿಕಾರಿ ಬದಲಾವಣೆಗಳೂ ಆಗಿವೆ. ಆರ್ಥಿಕತೆ ಚಲನಶೀಲ ಸ್ಥಿತಿಯಲ್ಲಿದ್ದರೆ ಮಾತ್ರ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯ ದಾರಿಯಲ್ಲಿ ಇರುತ್ತದೆ. ಪ್ರಸಕ್ತ ಕಾಲದಲ್ಲಿ ಸಹಕಾರಿ ಸಂಘಗಳೂ ಜನಾರ್ದನ ಪೂಜಾರಿಯವರಂತೆ ಸಾಲಮೇಳ ಹಮ್ಮಿಕೊಳ್ಳಬೇಕು ಎಂದು ಯು.ಟಿ ಖಾದರ್ ಸಲಹೆ ನೀಡಿದರು.
ಫೆಬ್ರವರಿಯಲ್ಲಿ ನವೋದಯ ಸಮಾವೇಶ
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಸಹಕಾರಿ ಕ್ಷೇತ್ರ ಮಹಿಳೆಯರ ಅಭೂತಪೂರ್ವ ಬೆಂಬಲ ಹಾಗೂ ಸಹಕಾರದಿಂದ ನಡೆಯುತ್ತಿದೆ. ಹಳ್ಳಿ ಹಳ್ಳಿಗಳಲ್ಲೂ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಇವರೆಲ್ಲರ ಶ್ರಮದಿಂದ ಸಹಕಾರಿ ಕ್ಷೇತ್ರ ಶ್ರೀಮಂತವಾಗಿದೆ ಎಂದು ಅಭಿಪ್ರಾಯಪಟ್ಟರು. ಮುಂದಿನ ಫೆಬ್ರವರಿ ೨೪ರಂದು ಮಂಗಳೂರಿನಲ್ಲಿ ನವೋಧಯ ಸಮಾವೇಶ ನಡೆಯಲಿದ್ದು ಆ ಕಾರ್ಯಕ್ರಮವನ್ನೂ ಯಶಸ್ವಿ ಮಾಡಬೇಕು ಎಂದು ಸಹಕಾರ ಕೋರಿದರು.
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಯಶ್‌ಪಾಲ್ ಎ.ಸುವರ್ಣ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಂಗಳೂರು ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಸಹಕಾರ ಸಂಘಗಳ ಅಪರ ನಿಬಂಧಕ ಕೆ.ಎಸ್.ನವೀನ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಗುರುಸ್ವಾಮಿ, ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕ ರಮೇಶ್ ಎಚ್.ಎನ್, ಸಹಕಾರ ಸಂಘಗಳ ಮೈಸೂರು ಪ್ರಾಥಮದ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್., ಎಸ್ ಸಿಡಿಸಿಸಿ ಬ್ಯಾಂಕ್ ಸಿಇಒ ಗೋಪಾಲಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಟಿ.ಜಿ.ರಾಜಾರಾಮ ಭಟ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com