ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಆಶೀರ್ವಚನ
ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ 5,000 ಪುಸ್ತಕಗಳ ವಿತರಣೆ
ಮಂಗಳೂರು: ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸ ರೂಢಿಸುವುದು ಶಿಕ್ಷಕರ ಕರ್ತವ್ಯ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಹೇಳಿದರು.
ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಶನಿವಾರ ಶ್ರೀನಿವಾಸ ಹೊಟೇಲ್ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ 50 ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಗ್ರಂಥಾಲಯಗಳಿಗೆ 5,000 ಪುಸ್ತಕಗಳ ವಿತರಣಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
https://chat.whatsapp.com/Ge11n7QCiMj5QyPvCc0H19
ಮಕ್ಕಳಲ್ಲಿ ಪುಸ್ತಕ ಓದುವ ಆಸಕ್ತಿ ಮೂಡಿಸುವುದು ಇಂದಿನ ಅವಶ್ಯಕತೆ. ಅವರಲ್ಲಿ ಓದುವ ಹವ್ಯಾಸ ಮೂಡಿಸಲು ಪ್ರಚೋದಿಸಬೇಕು. ಪಾಠದ ಜತೆಗೆ ಇತರ ಉತ್ತಮ ಪುಸ್ತಕಗಳಲ್ಲಿರುವ ವಿಚಾರಗಳ ತುಣುಕುಗಳನ್ನು ಹೇಳಿ ಆಸಕ್ತಿ ಮೂಡಿಸಬೇಕು. ಈ ಮೂಲಕವೂ ಶಿಕ್ಷಕರು ಸಮಾಜಕ್ಕೆ ಶ್ರೇಷ್ಠ ವ್ಯಕ್ತಿಗಳನ್ನು ನೀಡಲು ಸಾಧ್ಯವಾಗುತ್ತದೆ. ಶಾಲೆಗಳಿಗೆ ಪುಸ್ತಕ ನೀಡುವಂತಹ ಸಮಾಜಸೇವಾ ಕಾರ್ಯ ಮಾದರಿ ಎಂದು ಸ್ವಾಮಿ ಜಿತಕಾಮಾನಂದಜಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಶಾ ಸೌಹಾರ್ದ ಸೊಸೈಟಿ ಅಧ್ಯಕ್ಷ ಎಂ.ಎಸ್.ಗುರುರಾಜ್ ಮಾತನಾಡಿ, ಇನ್ನೂ 5,000 ಪುಸ್ತಕಗಳನ್ನು ಶೀಘ್ರದಲ್ಲೇ ವಿತರಿಸಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ಅಗತ್ಯವಿರುವ ಇತರ ಶಾಲೆಗಳಿಗೂ ಪುಸ್ತಕ ಒದಗಿಸುವ ಚಿಂತನೆ ಇದೆ. ಅಲ್ಲದೆ 10,000 ವಿದ್ಯಾರ್ಥಿಗಳ ಉಚಿತ ವೈದ್ಯಕೀಯ ತಪಾಸಣೆ ಏರ್ಪಡಿಸುವ ಯೋಜನೆ ಇದೆ ಎಂದು ಹೇಳಿದರು.
ಮುಖ್ಯ ಅತಿಥಿ ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳಿಗೆ ದೊಡ್ಡ ಹೆಸರಿದೆ. ಸಹಕಾರಿ ಸಂಸ್ಥೆಗಳು ಎಷ್ಟೋ ಬಡವರ ಬದುಕಿಗೆ ಆಸರೆಯಾಗಿ ನಿಂತಿವೆ. ಇಂತಹ ಸಹಕಾರಿ ಸಂಸ್ಥೆಗಳಲ್ಲೊಂದಾದ ಶ್ರೀಶಾ ಸಹಕಾರಿ ಕೋ-ಆಪರೇಟಿವ್ ಸೊಸೈಟಿ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕ ವಿತರಣೆ ಮಾಡುವ ಮೂಲಕ ಶ್ಲಾಘನೀಯ ಸೇವಾ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೊ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಭಟ್, ದ.ಕ. ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್ ಮುಖ್ಯ ಅತಿಥಿಗಳಾಗಿದ್ದರು. ಉಪಾಧ್ಯಕ್ಷ ಉದಯ ವಿ.ಶಾಸ್ತ್ರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಚಿತ್ರಾ ಡಿಸೋಜ ಉಪಸ್ಥಿತರಿದ್ದರು. ವಿದ್ಯಾ ಕಾರ್ಯಕ್ರಮ ನಿರ್ವಹಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com