ನೋಂದಣಿ ಮತ್ತು ಮುದ್ರಾಂಕ ಆಯುಕ್ತ ದಯಾನಂದ್ ಸ್ಪಷ್ಟನೆ
ಬೆಂಗಳೂರು: ರಾಜ್ಯದಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ನೋಂದಣಿ ಮತ್ತು ಮುದ್ರಾಂಕಗಳ ಆಯುಕ್ತ ಕೆ.ಎ. ದಯಾನಂದ್ ಸ್ಪಷ್ಟನೆ ನೀಡಿದ್ದಾರೆ.
ನೋಂದಣಿ ಕಾಯ್ದೆ 1908ರ ನಿಯಮ 22B ತಿದ್ದುಪಡಿ ವಿರೋಧಿಸಿ ಸೋಮವಾರ ರಾಜ್ಯದ ಐದಾರು ಉಪ ನೋಂದಣಾಧಿಕಾರಿಗಳು ಕೆಲಕಾಲ ನೋಂದಣಿಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರು. ಅವರೊಂದಿಗೆ ಉನ್ನತ ಮಟ್ಟದ ಇಲಾಖೆಯ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಸಮಸ್ಯೆಯ ಬಗ್ಗೆ ಚರ್ಚಿಸಿದ್ದಾರೆ. ಪ್ರತಿಭಟನೆಗೆ ಮುಂದಾದವರ ಮನವೊಲಿಸಲಾಗಿದ್ದು, ನೋಂದಣಿ ಕಾರ್ಯ ಎಂದಿನಂತೆ ಮುಂದುವರಿಸಲು ಕ್ರಮ ವಹಿಸಲಾಗಿದೆ ಎಂದು ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ. ಈಗ ನೋಂದಣಿ ಮಾಡಿಸಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ. ಯಾರು ಬೇಕಾದರೂ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಆಯುಕ್ತ ದಯಾನಂದ್ ಮಾಹಿತಿ ನೀಡಿದ್ದಾರೆ.
https://chat.whatsapp.com/Ge11n7QCiMj5QyPvCc0H19
ರಾಜ್ಯದ ಉಪನೋಂದಣಿ ಕಚೇರಿಗಳಲ್ಲಿ ಸ್ಥಿರಾಸ್ತಿ ನೋಂದಣಿಗೆ ಡಿಜಿಟಲ್ ಖಾತಾ ಕಡ್ಡಾಯಗೊಳಿಸಿದ್ದರಿಂದ ಜನರಿಗೆ ಸಮಸ್ಯೆ ಎದುರಾಗಿತ್ತು. ಅಧಿನಿಯಮ ಜಾರಿಗೆ ತಂದ ಬಳಿಕ ರಿಜಿಸ್ಟ್ರೇಷನ್ ಪಡೆಯಬೇಕಾದ ದಾಖಲೆಗಳ ಅಸ್ಪಷ್ಟತೆಯಿಂದ ಸಬ್‌ರಿಜಿಸ್ಟ್ರಾರ್ ದಸ್ತಾವೇಜು ನೋಂದಣಿ ಸೇವೆಯನ್ನೇ ಸ್ಥಗಿತ ಮಾಡಲು ನಿರ್ಧರಿಸಿದ್ದಾರೆ.
ಈಗಾಗಲೇ ಬಹುತೇಕ ಕಡೆ ಹೊಸ ನೋಂದಣಿ ನಡೆದಿಲ್ಲ. ಕಾವೇರಿ 2.0ರಲ್ಲಿ ಅರ್ಜಿ ಸ್ವೀಕರಿಸಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಡೆದಿದ್ದ ದಸ್ತಾವೇಜುಗಳ ನೋಂದಣಿ ಮಾಡಲಾಗಿದೆ. ಪ್ರತಿದಿನ 10 ಸಾವಿರ ರಿಜಿಸ್ಟ್ರೇಷನ್ ನಡೆಯುತ್ತಿದ್ದ ಕಡೆ ಸೋಮವಾರ 6,120 ಮತ್ತು ಮಂಗಳವಾರ 2,036 ದಸ್ತಾವೇಜುಗಳಷ್ಟೇ ನೋಂದಣಿ ಆಗಿವೆ. ಮುಂದೆ ಹೊಸ ದಸ್ತಾವೇಜು ಸ್ವೀಕರಿಸದೆ ಇರಲು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ ನೌಕರರ ಸಂಘ ನಿರ್ಧರಿಸಿದೆ. ಈ ವಿಷಯದಲ್ಲಿ ಕಂದಾಯ ಇಲಾಖೆಯ (ನೋಂದಣಿ ಮತ್ತು ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಯಾವ ನೋಂದಣಿಗೆ ಯಾವ ದಾಖಲೆ ಪಡೆಯಬೇಕೆಂದು ಮಾರ್ಗಸೂಚಿ ಹೊರಡಿಸಬೇಕೆಂದು ಮನವಿ ಸಲ್ಲಿಸಲಾಗಿದ್ದು ಅನಿರ್ದಿಷ್ಠಾವಧಿವರೆಗೂ ರಿಜಿಸ್ಟ್ರೇಷನ್ ನಿಲ್ಲಿಸಲು ಸಂಘ ನಿರ್ಧರಿಸಿದೆ ಎನ್ನಲಾಗಿದೆ.
ಕೇಂದ್ರ ನೋಂದಣಿ ಕಾಯ್ದೆ 1908ರ ಕರ್ನಾಟಕ ನೋಂದಣಿ ನಿಯಮಾವಳಿ 1965ರ 22 22-ಸಿ ಮತ್ತು 22-ಡಿಗೆ ತಿದ್ದುಪಡಿ ತರಲಾಗುತ್ತಿದೆ. ಕಾಯ್ದೆ 22ಬಿ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಕಾಯ್ದೆಗೆ ವಿರುದ್ಧವಾಗಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಶದಲ್ಲಿನ ಸ್ಥಿರಾಸ್ತಿ ನೋಂದಣಿ ಮಾಡಿದರೆ ಜಿಲ್ಲಾ ನೋಂದಣಾಧಿಕಾರಿ ಅದನ್ನು ರದ್ದುಪಡಿಸುವ ಅಧಿಕಾರ ನೀಡಲಾಗಿದೆ. ಕಾಯ್ದೆ-81ಎ ಪ್ರಕಾರ ದಸ್ತಾವೇಜು ನೋಂದಣಿ ಮಾಡಿದ ಸಬ್‌ರಿಜಿಸ್ಟ್ರಾರ್‌ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ. ಇದು ಸಬ್‌ರಿಜಿಸ್ಟ್ರಾರ್‌ಗಳಲ್ಲಿ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿದೆ.
ಮಾರ್ಗಸೂಚಿ ನಿರೀಕ್ಷೆಯಲ್ಲಿ ಉಪ ನೋಂದಣಾಧಿಕಾರಿಗಳು
ಮ್ಯುಟೇಷನ್, ಭೂಮಿ ಮಾಲೀಕತ್ವದ ಸರ್ಟಿಫಿಕೆಟ್, ಗ್ರಾಮದ ನಕ್ಷೆ, ಕಂದಾಯ ನಕ್ಷೆ, ಅನುಮೋದಿತ ಬಡಾವಣೆಗೆ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರ, ಆಕಾರಬಂದ್ ಮತ್ತು ಸರ್ವೇ ದಾಖಲೆ, ಪಿಟಿಸಿಎಲ್ ಕಾಯ್ದೆಗೆ ಒಳಪಡುವುದಿಲ್ಲ ಎಂಬ ನಿರಾಕ್ಷೇಪಣಾ ಪತ್ರ, ಭೂ ಹಿಡುವಳಿದಾರರ ನಿರಾಕ್ಷೇಪಣಾ ಪತ್ರ ಭೂಮಿ ವಿಭಾಗ ಸಂಬಂಧ ನಕ್ಷೆ, ಭೂ ಪರಿವರ್ತನೆ ಆದೇಶ, ತೆರಿಗೆ ಪಾವತಿ ರಸೀದಿ, 1960ರಿಂದ ಇಲ್ಲಿಯವರೆಗೂ ಪಹಣಿ, ಸೈಟ್ ಅಭಿವೃದ್ಧಿ ಶುಲ್ಕದ ರಸೀದಿ, ವಂಶವೃಕ್ಷ ಮತ್ತು ಕುಟುಂಬ ಸದಸ್ಯರು ಮರಣ ಹೊಂದಿದ್ದರೆ ಮರಣ ಪ್ರಮಾಣ ಪತ್ರ… ಇಷ್ಟೆಲ್ಲಾ ದಾಖಲೆಗಳನ್ನು ಕಡ್ಡಾಯಗೊಳಿಸುವ ಸಾಧ್ಯತೆ ಇದೆ.
ಮದ್ರಾಸ್ ಹೈಕೋರ್ಟ್‌ನಲ್ಲಿ ರದ್ದು
ಕೇಂದ್ರ ನೋಂದಣಿ ಕಾಯ್ದೆ 1908ಕ್ಕೆ 2021ರಲ್ಲಿ ತಮಿಳುನಾಡು ಸರ್ಕಾರ ತಿದ್ದುಪಡಿ ತಂದು ಜಾರಿಗೆ ತಂದಿತ್ತು. ಇದೇ ಮಾದರಿ ರಾಜ್ಯದಲ್ಲೂ ಜಾರಿಗೆ ತರಲಾಗಿದೆ. ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ನಲ್ಲಿ 200 ರಿಟ್ ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಈ ತಿದ್ದುಪಡಿಯು ನ್ಯಾಯಾಂಗಕ್ಕೆ ಸಮಾನಾಂತರ ವೇದಿಕೆ ರಚಿಸಲು ಪ್ರಯತ್ನಿಸಿದೆ. ಕಾರ್ಯಾಂಗಕ್ಕೆ ಅನಗತ್ಯ ಅಧಿಕಾರ ನೀಡಿದೆ ಎಂಬ ಅಭಿಪ್ರಾಯಪಟ್ಟು ತಿದ್ದುಪಡಿಯನ್ನು ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com