ಇಂದು ವಿಶ್ವ ಹತ್ತಿ ದಿನ 2019ರಿಂದ ಪ್ರತಿವರ್ಷ ಅಕ್ಟೋಬರ್ 7ರಂದು ಹತ್ತಿ ದಿನ ಆಚರಣೆ
ಮಂಗಳೂರು: ಹತ್ತಿ ಬೆಳೆ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತಿದ್ದು, ವೈದ್ಯಕೀಯ ಕ್ಷೇತ್ರ, ಪಶು ಆಹಾರ, ಖಾದ್ಯ ತೈಲ ಮತ್ತು ಜವಳಿ ಉದ್ಯಮಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಹತ್ತಿಯಿಂದ ತಯಾರಾದ ಯಾವುದೇ ಬಟ್ಟೆ ಧರಿಸಿದರೂ ಅದು ಹಿತಕರವಾದ ಭಾವ ಉಂಟುಮಾಡುತ್ತದೆ. ಹತ್ತಿಯನ್ನು ಭಾರತವೂ ಸೇರಿದಂತೆ ಉಷ್ಣ ವಲಯದ ದೇಶಗಳಲ್ಲಿ ಹೆಚ್ಚಾಗಿ ಬೆಳೆಸಲಾಗತ್ತದೆ. ವಿಶ್ವದ ಸುಮಾರು 75ಕ್ಕೂ ಅಧಿಕ ದೇಶಗಳಲ್ಲಿ 28.67 ಮಿಲಿಯನ್ನಷ್ಟು ರೈತರು ಹತ್ತಿ ಬೆಳೆ ಬೆಳೆಯುತ್ತಾರೆ. ಹತ್ತಿ ಬೆಳೆಯ ಉತ್ಪಾದನೆಯಿಂದ ಲಕ್ಷಾಂತರ ಬಡ ಕುಟುಂಬದ ಜೀವನ ನಡೆಯುತ್ತಿದೆ. ಹತ್ತಿ ಬೆಳೆಯನ್ನು ಉತ್ತೇಜಿಸುವ ಸಲುವಾಗಿ ಪ್ರತಿವಷರ್ಷ ಅಕ್ಟೋಬರ್ 7ರಂದು ವಿಶ್ವ ಹತ್ತಿ ದಿನವನ್ನು ಆಚರಿಸಲಾಗುತ್ತದೆ.
https://chat.whatsapp.com/Ge11n7QCiMj5QyPvCc0H19
ಬಿಳಿ ಬಂಗಾರವೆಂದೇ ಖ್ಯಾತಿ ಪಡೆದಿರುವ ಹತ್ತಿ ಬೆಳೆಯ ಉತ್ಪಾದನೆಯಲ್ಲಿ ಭಾರತ ವಿಶ್ವದ ಎರಡನೇ ಸ್ಥಾನದಲ್ಲಿದೆ. ಬೇಡಿಕೆಯಲ್ಲಿ ಭಾರತವು ವಿಶ್ವದ ಶೇ.25ರಷ್ಟು ಪಾಲನ್ನು ಪೂರೈಸುತ್ತಿದೆ. ದತ್ತಾಂಶಗಳ ಪ್ರಕಾರ, 2023-24ರಲ್ಲಿ ಚೀನಾ 5.60 ಮಿಲಿಯನ್ ಮೆಟ್ರಿಕ್ ಟನ್ (ಮಿಮೆಟ) ಹತ್ತಿ ಬೆಳೆಯನ್ನು ಉತ್ಪಾದಿಸಿದರೆ, ಭಾರತವು 5.50 ಮಿಮೆಟ ಹತ್ತಿ ಬೆಳೆಯನ್ನು ಉತ್ಪಾದಿಸಿದೆ. ತಾವೇ ಬೆಳೆಸಿದ ಹತ್ತಿಯನ್ನು ಸ್ಥಳೀಯವಾಗಿಯೂ ಅತ್ಯಧಿಕವಾಗಿ ಬಳಸುವ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ (7.80 ಮಿಮೆಟ) ಮತ್ತು ಭಾರತ (5.39 ಮಿಮೆಟ)ವೇ ಅಗ್ರಗಣ್ಯ ಸ್ಥಾನದಲ್ಲಿವೆ. ಚೀನಾ ಅತಿ ಹೆಚ್ಚು 2.40 ಮಿಮೆಟ, ಭಾರತ ಅತಿ ಕಡಿಮೆ 0.20 ಹತ್ತಿಯನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ.
ವಿಶ್ವ ಹತ್ತಿ ದಿನ ಆಚರಣೆಗೂ ಒಂದು ಇತಿಹಾಸವಿದೆ. ಆಫ್ರಿಕಾದ ಹತ್ತಿ ಉತ್ಪಾದಿಸುವ ರಾಜ್ಯಗಳಾದ ಬೆನಿನ್, ಬುರ್ಕಿನಾ ಫಾಸೋ, ಚಾಡ್ ಹಾಗೂ ಮಾಲಿಯಲ್ಲಿ ಪ್ರಾಯೋಗಿಕ ಹಂತವಾಗಿ ವಿಶ್ವ ವಾಣಿಜ್ಯ ಸಂಸ್ಥೆಯು 2019ರಲ್ಲಿ ವಿಶ್ವ ದಿನದ ಆಚರಣೆಯನ್ನು ಆರಂಭ ಮಾಡಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 7 ರಂದು ಈ ದಿನದ ಆಚರಣೆ ನಡೆಯುತ್ತ ಬಂದಿದೆ.
ವಿಶ್ವ ಹತ್ತಿ ದಿನವನ್ನು ಆಚರಣೆ ಮಾಡುವ ಮೂಲ ಉದ್ದೇಶ ಹತ್ತಿಯ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುವುದು. ಈ ಮೂಲಕ ಆರ್ಥಿಕ ಅಭಿವೃದ್ಧಿ ಹಾಗೂ ಬಡತನ ನಿವಾರಣೆಯಲ್ಲಿ ಸುಧಾರಣೆ ತರುವ ಉದ್ದೇಶವನ್ನು ಹೊಂದಲಾಗಿದೆ.
ಹತ್ತಿಯಿಂದ ತಯಾರಾದ ಯಾವುದೇ ಬಟ್ಟೆ ಧರಿಸಿದರೂ ಸಹ ಅದು ಹಿತಕರ ಎಂದೆನಿಸುತ್ತದೆ. ಹೀಗಾಗಿ ಜಗತ್ತಿನಲ್ಲಿ ಮಿಲಿಯನ್‌ಗಟ್ಟಲೇ ಜನರಿಗೆ ಹತ್ತಿ ಬೆಳೆಯು ಜೀವನೋಪಾಯದ ಮಾರ್ಗವಾಗಿದೆ. ಇದು ಎಷ್ಟೋ ಬಡ ಕುಟುಂಬಗಳಿಗೆ ಉದ್ಯೋಗದ ಜೊತೆಗೆ ಆದಾಯವನ್ನು ನೀಡುತ್ತಿದೆ. ಈ ದಿನದಂದು ಹತ್ತಿಯ ಕುರಿತಂತೆ ಹೆಚ್ಚಿನ ಜ್ಞಾನ ಪಸರಿಸುವುದು ಹಾಗೂ ಹತ್ತಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪ್ರದರ್ಶಿಸುವ ಕಾರ್ಯ ಮಾಡಲಾಗುತ್ತದೆ.
ಅಂತರಾಷ್ಟ್ರೀಯ ಹತ್ತಿ ಸಲಹಾ ಸಮಿತಿಯ ಮಾಹಿತಿಯ ಪ್ರಕಾರ, ಪ್ರತಿವರ್ಷ ಹತ್ತಿಯಿಂದ 41.2 ಬಿಲಿಯನ್ ಡಾಲರ್ ಆದಾಯ ಸಿಗುತ್ತದೆ. ಪ್ರತಿವರ್ಷ 18 ಬಿಲಿಯನ್ ಡಾಲರ್ ಮೌಲ್ಯದ ಹತ್ತಿ ವ್ಯಾಪಾರವಾಗುತ್ತದೆ. ಹತ್ತಿಯನ್ನು ಯಾವುದೇ ವಾತಾವರಣದಲ್ಲಿ ಬೆಳೆಯಬಹುದಾಗಿದೆ. ಹತ್ತಿ ಬೆಳೆಯನ್ನು ಒಣ ಹಾಗೂ ಶುಷ್ಕ ವಲಯಗಳೆರಡರಲ್ಲೀ ಬೆಳೆಯಬಹುದು. ಜಗತ್ತಿನ ಕೇವಲ 2.1 ಪ್ರತಿಶತ ಭೂಮಿಯಲ್ಲಿ ಮಾತ್ರ ಹತ್ತಿ ಬೆಳೆಯಲಾಗುತ್ತದೆ.
ಜವಳಿ ಸಚಿವಾಲಯದ ಹತ್ತಿ ಉತ್ಪಾದನೆ ಮತ್ತು ಪೂರೈಕೆ ಸಮಿತಿ (ಸಿಒಸಿಪಿಸಿ) ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ 2023-24ನೇ ಸಾಲಿನಲ್ಲಿ 325.22 ಲಕ್ಷ ಬೇಲ್ಸ್ ಹತ್ತಿ ಬೆಳೆ ಹಾಕಲಾಗಿದ್ದು, ಇದು 2022-23ಕ್ಕೆ ಹೋಲಿಸಿದರೆ, 11.38 ಲಕ್ಷ ಬೇಲ್ಸ್‌ನಷ್ಟು ಕಡಿಮೆ ಇದೆ. ಹೊರದೇಶಗಳಿಂದ ಕಳೆದ ವರ್ಷ 14.60 ಲಕ್ಷ ಬೇಲ್ಸ್ ಆಮದು ಮಾಡಿಕೊಳ್ಳಲಾಗಿತ್ತು. ಅದರ ಪ್ರಮಾಣವೂ ಈ ಸಲ 12.00 ಲಕ್ಷ ಬೇಲ್ಸ್‌ಗೆ ಇಳಿಕೆಯಾಗಿದೆ. ಹೀಗಾಗಿ, ಜವಳಿ ಉದ್ಯಮಗಳಿಗೆ ಹತ್ತಿ ಕೊರತೆ ಎದುರಾಗುವ ಸಾಧ್ಯತೆ ಇದೆ.
ಹತ್ತಿ ಬಟ್ಟೆಯ ಉಪಯೋಗ
ವಿವಿಧ ರೀತಿಯ ತಾಪಮಾನಕ್ಕೆ ಹೊಂದಿಕೊಳ್ಳುವ ಗುಣ ಹತ್ತಿ ಬಟ್ಟೆಯಲ್ಲಿದೆ. ವಾತಾವರಣ ಹಾಗೂ ಋತುಮಾನಕ್ಕೆ ಹೊಂದಿಕೊಳ್ಳುತ್ತದೆ. ಬೇಸಿಗೆಯಲ್ಲಿ ಸೆಕೆಗೆ ತುಂಬಾ ಒಳ್ಳೆಯದು ಮಾತ್ರವಲ್ಲದೆ, ಚಳಿಗಾಲದಲ್ಲಿ ಚಳಿಯನ್ನು ಸಹ ನಿಯಂತ್ರಿಸುವುದು. ಹತ್ತಿ ಬಟ್ಟೆಯು ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ. ಅಂದಾಜಿನ ಪ್ರಕಾರ, ಒಂದು ಟನ್ ಹತ್ತಿಯು ಸರಾಸರಿ ಐದು ಜನರಿಗೆ ಉದ್ಯೋಗ ಒದಗಿಸುತ್ತಿದೆ. ವಿಶ್ವದ ಒಟ್ಟು ಹತ್ತಿ ಉತ್ಪಾದನೆಯ ಶೇ.80ರಷ್ಟನ್ನು ಉಡುಪುಗಳಿಗೆ ಬಳಸಿದರೆ, ಇನ್ನುಳಿದ ಶೇ. 15ರಷ್ಟು ಗೃಹೋಪಯೋಗಿ ಹಾಗೂ ಶೇ.5ರಷ್ಟು ಇತರ ಕಾರಣಗಳಿಗೆ ಬಳಸಲಾಗುತ್ತಿದೆ. ವಿಶ್ವದ ಕೃಷಿಯಲ್ಲಿ ಶೇ.3ರಷ್ಟು ಹತ್ತಿ ಆಕ್ರಮಿಸಿಕೊಂಡಿದೆ. ಹತ್ತಿ ಜವಳಿ ಉದ್ಯಮಗಳಿಗಷ್ಟೇ ಅಲ್ಲದೇ ಹತ್ತಿ ಬೀಜದಿಂದ ಅಡುಗೆ ಎಣ್ಣೆ, ಸೌಂದರ್ಯವರ್ಧಕ, ಸಾಬೂನು, ಪಶು ಆಹಾರವಾಗಿಯೂ ಬಳಸಲಾಗುತ್ತದೆ.
ಬಡವರ ಪಾಲಿನ ಆಧಾರ
ಹತ್ತಿಯನ್ನೇ ನಂಬಿಕೊಂಡು ಹಲವು ಉದ್ಯಮಗಳು ವಿಶ್ವಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಸುಮಾರು 80 ದೇಶಗಳಲ್ಲಿ 10 ಕೋಟಿ ಕುಟುಂಬಗಳು ಇದರ ನೇರ ಪ್ರಯೋಜನ ಪಡೆಯುತ್ತಿವೆ. ಭಾರತದ ಆರ್ಥಿಕತೆಯನ್ನು ಸಬಲಗೊಳಿಸುವಲ್ಲೂ ಹತ್ತಿ ಬಹುದೊಡ್ಡ ಪಾತ್ರ ವಹಿಸುತ್ತಿದೆ. ದೇಶದಲ್ಲಿ ಸುಮಾರು 5 ಕೋಟಿ ಜನ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹತ್ತಿಯಿಂದ ಬದುಕು ಕಟ್ಟಿಕೊಂಡಿದ್ದಾರೆ.
ಬೇಲ್ಸ್ ಎಂದರೇನು?
ಯಾವುದೇ ಪದಾರ್ಥಗಳ ಖರೀದಿಗೂ ಅದರದ್ದೇ ಅಳತೆ ಮಾಪನ ಇರುತ್ತದೆ. ಅದೇ ರೀತಿ, ಹತ್ತಿ ವ್ಯವಹಾರದಲ್ಲಿಬೇಲ್ಸ್ ಬಳಸಲಾಗುತ್ತದೆ. ಭಾರತದಲ್ಲಿ170 ಕೆಜಿ ಹತ್ತಿಗೆ ಒಂದು ಬೇಲ್ ಎನ್ನಲಾಗುತ್ತದೆ. ಅಮೆರಿಕದಲ್ಲಿ226.8 ಕೆಜಿಗೆ ಒಂದು ಬೇಲ್ ಎಂದು ಪರಿಗಣಿಸಲಾಗುತ್ತದೆ.
10 ರಾಜ್ಯಗಳಲ್ಲಿ ಪ್ರಮುಖ ಬೆಳೆ
ದೇಶದ 10 ರಾಜ್ಯಗಳಿಂದ ಹತ್ತಿ ಉತ್ಪಾದನೆಯಾಗುತ್ತಿದ್ದು, ಇವುಗಳನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಉತ್ತರ ವಲಯದಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನಗಳಿವೆ. ಮಧ್ಯ ವಲಯದಲ್ಲಿ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ದಕ್ಷಿಣ ವಲಯದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿವೆ. 2023-24ರಲ್ಲಿ ಉತ್ತರ ವಲಯದಲ್ಲಿ 47.60 ಲಕ್ಷ ಬೇಲ್ಸ್, ಮಧ್ಯ ವಲಯದಲ್ಲಿ 189.06 ಲಕ್ಷ ಬೇಲ್ಸ್ ಹಾಗೂ ದಕ್ಷಿಣ ವಲಯದಲ್ಲಿ 81.30 ಲಕ್ಷ ಬೇಲ್ಸ್ ಉತ್ಪಾದನೆ ಮಾಡಲಾಗಿದೆ.
ಹತ್ತಿಯ ಕುರಿತ ಆಸಕ್ತಿದಾಯಕ ವಿಷಯಗಳು
ಜಾಗತಿಕ ಮಟ್ಟದಲ್ಲಿ ಬೆಳೆಯುವ ಹತ್ತಿಯ ನಾಲ್ಕನೇ ಮೂರು ಭಾಗದಷ್ಟು ಭಾಗವನ್ನು ಜವಳಿ ಉದ್ಯಮದಲ್ಲಿ ಬಳಸಲಾಗುತ್ತದೆ.
ಹತ್ತಿ ಸಸ್ಯ ಶೂನ್ಯ ತ್ಯಾಜ್ಯದ ಖ್ಯಾತಿ ಪಡೆದಿದೆ. ಹತ್ತಿ ಕೃಷಿಯ ಮುಖ್ಯ ಉದ್ದೇಶ ನಾರು. ಹತ್ತಿ ಬೀಜದಿಂದ ಎಣ್ಣೆ ಕೂಡ ತೆಗೆಯಲಾಗುತ್ತದೆ. ಕೊಯ್ಲು ಮಾಡಿದ ನಂತರ ಸಸ್ಯದ ಕಾಂಡಗಳನ್ನು ಮತ್ತೆ ನೆಲ ಉಳುಮೆ ಮಾಡಿ ಮಣ್ಣಿನ ಫಲವತ್ತತೆ ಹೆಚ್ಚಿಸಲಾಗುತ್ತದೆ.
ಬಾಹ್ಯಾಕಾಶದಲ್ಲೂ ಹತ್ತಿ ಬೆಳೆಯುವ ಸಾಹಸಕ್ಕೆ ಚೀನಾ ಕೈ ಹಾಕಿತ್ತು. ಚೀನಾದ ಬಾಹ್ಯಾಕಾಶ ನೌಕೆ ಚಾಂಗ್ ಇ 4 ಬಾಹ್ಯಾ ಮೂಲಕ ಹತ್ತಿ ಬೀಜಗಳನ್ನು ಚಂದ್ರನಲ್ಲಿಗೆ ಕಳುಹಿಸಿದ್ದು 2019ರಲ್ಲಿ ಚಂದ್ರನ ವಾನ್ ನೌಕೆಯೊಳಗೆ ಬೀಜಗಳು ಕಾರ್ಮನ್ ಕ್ರೇಟರ್‌ನಲ್ಲಿ ಮೊಳಕೆಯೊಡಲು ಪ್ರಾರಂಭಿಸಿದವು. ಆದರೆ ಶೀತ ವಾತಾವರಣದ ಕಾರಣದಿಂದ ಬೆಳೆಯಲಿಲ್ಲ.
ಹತ್ತಿಯಿಂದ ನೋಟುಗಳನ್ನು ತಯಾರಿಸಲಾಗುತ್ತದೆ. ಅಮೆರಿಕಾ, ಭಾರತ ಮೊದಲಾದ ದೇಶಗಳಲ್ಲಿ ನೋಟು ತಯಾರಿಸಲು ಶೇ. 75ರಷ್ಟು ಹತ್ತಿಯನ್ನು ಬಳಸಲಾಗುತ್ತದೆ.
(ಮಾಹಿತಿ: ಸಂಗ್ರಹ)
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com