ಶ್ರೀಶಾ ಸೌಹಾರ್ದ ಸೊಸೈಟಿ ಸಮಾಜಮುಖಿ ಕಾರ್ಯಗಳಿಂದ ಮಾದರಿ: ಸ್ವಾಮಿ ಜಿತಕಾಮಾನಂದಜಿ
ಮಂಗಳೂರು: ಮಂಗಳೂರಿನ ರಾಮಕೃಷ್ಣ ಆಶ್ರಮ ಸಭಾಂಗಣದಲ್ಲಿ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಪ್ರಾಯೋಜಕತ್ವದಲ್ಲಿ ಅಕ್ಟೋಬರ್ 2ರ ಸಂಜೆ ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ “ದಾಸವರೇಣ್ಯ ವಿಜಯದಾಸರು” ಎಂಬ ಚಲನಚಿತ್ರ ಉಚಿತ ಪ್ರದರ್ಶನ ಸಂಪೂರ್ಣ ಯಶಸ್ವಿಯಾಯಿತು.
https://chat.whatsapp.com/Ge11n7QCiMj5QyPvCc0H19
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಆಸ್ತಿಕ ಆಸಕ್ತ ಬಂಧುಗಳು ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡರು. ಆರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಾತನಾಡಿ,”ನಮ್ಮ ಸಂಸ್ಕೃತಿ -ಸಂಸ್ಕಾರಕ್ಕೆ ದಾಸ ಸಾಹಿತ್ಯದ ಕೊಡುಗೆ ಬಹು ದೊಡ್ಡದು. ದಾಸರು ತಮ್ಮ ಪದ-ಪದ್ಯಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತಾ, ಜನರಲ್ಲಿ ಭಕ್ತಿಯನ್ನು ಬಿತ್ತಿದ್ದಾರೆ ಮತ್ತು ಜೀವನ ಮೌಲ್ಯಗಳ ವರ್ಧನೆಗೆ ಅಪಾರ ಕೊಡುಗೆ ನೀಡಿದ್ದಾರೆ. ದಾಸ ಸಾಹಿತ್ಯ ಸೇವಾ ಪ್ರತಿಷ್ಠಾನವು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅತ್ಯುತ್ತಮ ಕೆಲಸ ಮಾಡುತ್ತಿದೆ. ಶ್ರೀಶಾ ಸೌಹಾರ್ದ ಸೊಸೈಟಿಯು ತಾನು ಗಳಿಸಿದ ಲಾಭದ ದೊಡ್ಡ ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಅನೇಕ ಸಂಸ್ಥೆಗಳಿಗೆ ಮಾದರಿಯಾಗಿದೆ” ಎಂದು ಬಣ್ಣಿಸಿದರು.
ಚಿತ್ರದ ನಿರ್ದೇಶಕ ಮಧುಸೂದನ ಹವಾಲ್ದಾರ್ ಅವರನ್ನು ಪ್ರತಿಷ್ಠಾನ ಹಾಗೂ ಶ್ರೀಶಾ ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದ ಹವಾಲ್ದಾರ್,”ದಾಸಸಾಹಿತ್ಯ ಸೇವಾ ಪ್ರತಿಷ್ಠಾನವು ಇಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ಉಚಿತವಾಗಿ ಆಯೋಜಿಸುವುದರ ಮೂಲಕ ದಾಸ ಸಾಹಿತ್ಯಕ್ಕೆ ಸಲ್ಲಿಸುತ್ತಿರುವ ಸೇವೆ ನಿಜಕ್ಕೂ ಬೆಲೆ ಕಟ್ಟಲಾಗದ್ದು. ಪ್ರತಿಷ್ಠಾನದ ಸೇವೆ ಹೀಗೆಯೇ ನಿರಂತರ ಮುಂದುವರಿಯಲಿ” ಎಂದು ಹಾರೈಸಿದರು.
ಪ್ರತಿಷ್ಠಾನ ಮತ್ತು ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸುಜಾತಾ ಕಾರಂತ್ ಪ್ರಾರ್ಥನೆ ಮಾಡಿ, ಸುರೇಶ್ ಬೈಂದೂರ್ ವಂದಿಸಿದರು. ಸಂಜನಾ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com