ಲಾಭಾಂಶದಲ್ಲಿ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲು ನಿರ್ಧಾರ: ಸಂಘದ ಅಧ್ಯಕ್ಷ ಎಚ್.ಮಂಜಯ್ಯ ಶೆಟ್ಟಿ ಹರ್ಕೂರು ಹೇಳಿಕೆ
ಮರವಂತೆ: ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಶ್ರೀಮೂಕಾಂಬಿಕಾ ಸಭಾಭವನದಲ್ಲಿ ಸೋಮವಾರ ನಡೆಯಿತು.
https://chat.whatsapp.com/Ge11n7QCiMj5QyPvCc0H19
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಚ್.ಮಂಜಯ್ಯ ಶೆಟ್ಟಿ ಹರ್ಕೂರು ಮಾತನಾಡಿ, ಸಂಘವು ಸದಸ್ಯರು ಮತ್ತು ನಿರ್ದೇಶಕ ಮಂಡಳಿಯ ಸಹಕಾರದಿಂದ ಹಂತಹಂತವಾಗಿ ಅಭಿವೃದ್ಧಿ ಕಾಣುತ್ತ ಇಂದು ಕುಂದಾಪುರ ತಾಲೂಕಿನಲ್ಲಿ ಉತ್ತಮ ಸಹಕಾರಿ ಸಂಘವಾಗಿ ಗುರುತಿಸಿಕೊಂಡಿದೆ. ರೈತರು ಮತ್ತು ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಕಿಕೊಂಡಿದ್ದ ವಿಶೇಷ ಯೋಜನೆಗಳಿಂದಾಗಿ ಜನರ ಪ್ರೀತಿ ವಿಶ್ವಾಸ ಗಳಿಸಿದೆ. ಬೆಳೆ ವಿಮೆ ಸೌಲಭ್ಯ ಮತ್ತು ಪಂಪ್‌ಸೆಟ್‌ಗಳಿಗೆ ರೈತರು ಆಧಾರ್ ಜೋಡಣೆ ಮಾಡಿಕೊಳ್ಳುವುದರ ಮುಖೇನ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು. ಪ್ರಸ್ತುತ ಸಾಲಿನಲ್ಲಿ ಸಂಘವು 80.59 ಲಕ್ಷ ರೂ. ಲಾಭ ಗಳಿಸಿದ್ದು, ಸಂಘದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಂಘದ ಸಿಇಒ ಶಿವರಾಮ ಪೂಜಾರಿ ವಾರ್ಷಿಕ ವರದಿ ಮಂಡಿಸಿದರು. 5ರಿಂದ 10ನೇ ತರಗತಿವರೆಗಿನ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ ಸಂಘದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು.
ಸಂಘದ ಉಪಾಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ, ನಿರ್ದೇಶಕರಾದ ರತ್ನಾಕರ ಎಂ.ಆಚಾರ್ಯ, ಎಚ್.ಶಂಕರ ಶೆಟ್ಟಿ ಎಂ.ಚಂದ್ರಶೇಖರ ಶೆಟ್ಟಿ ಗಂಗಾಧರ ಆಚಾರ್ಯ, ಸುಬ್ಬ ಪೂಜಾರಿ, ರಾಜೇಶ ದೇವಾಡಿಗ, ಅಮರನಾಥ ಶೆಟ್ಟಿ ಸುರೇಂದ್ರ, ಹರೀಶ್, ಲಲಿತಾ ಕುಲಾಲ್, ಅಕ್ಕಯ್ಯ ಯಾನೆ ಆಶಾ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಮ್ಯಾನೇಜರ್ ಸಂಜೀವ ಪೂಜಾರಿ ಸ್ವಾಗತಿಸಿದರು. ಸಿಬ್ಬಂದಿ ಗಣೇಶ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.