ಮಂಗಳೂರು: ಸಹಕಾರಿ ಬ್ಯಾಂಕಿಂಗ್ ರಂಗದಲ್ಲಿ 110 ವರ್ಷಗಳ ಸಾರ್ಥಕ ಸೇವೆ ಪೂರೈಸಿ ಜನಸಾಮಾನ್ಯರ ಶಕ್ತಿಯಾಗಿ ಬೆಳೆದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಎಸ್ ಸಿಡಿಸಿಸಿ ಬ್ಯಾಂಕ್)ಗೆ ಅಟಲ್ ಪಿಂಚಣಿ ಯೋಜನೆಯ ರಾಷ್ಟ್ರೀಯ ಪ್ರಶಸ್ತಿ (ಎಪಿವೈ ಪ್ರಶಸ್ತಿ) ಹಾಗೂ ರಾಜ್ಯದ ಪ್ರತಿಷ್ಠಿತ ಅಪೆಕ್ಸ್ ಬ್ಯಾಂಕಿನ ಪ್ರಥಮ ಪ್ರಶಸ್ತಿಯನ್ನು ಶುಕ್ರವಾರ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.
ಕರ್ನಾಟಕ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಅಟಲ್ ಪಿಂಚಣಿ ಯೋಜನೆಯ ರಾಷ್ಟ್ರೀಯ ಪ್ರಶಸ್ತಿ ಹಾಗೂ ಅಪೆಕ್ಸ್ ಬ್ಯಾಂಕಿನ ಪ್ರಥಮ ಪ್ರಶಸ್ತಿಯನ್ನು ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಬೆಳ್ಳಿಪ್ರಕಾಶ್ ಅವರಿಂದ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ|ಎಂ.ಎನ್ ರಾಜೇಂದ್ರಕುಮಾರ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಗೋಪಾಲಕೃಷ್ಣ ಭಟ್ ಸ್ವೀಕರಿಸಿದರು.
ಭಾರತ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕೋರಿಕೆಯಂತೆ ಎಸ್‌ಸಿಡಿಸಿಸಿ ಬ್ಯಾಂಕ್ 2019ರ ಜನವರಿ -11ರಂದು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದು , ಬ್ಯಾಂಕಿನ ಪ್ರತಿ ಶಾಖೆಗಳಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತಂದು ಚಂದಾದಾರರನ್ನು ನೊಂದಾಯಿಸುವ ಗುರಿಯನ್ನು ನೀಡಲಾಗಿತ್ತು. ಅದರಂತೆ ಈ ಯೋಜನೆಯಲ್ಲಿ ಬ್ಯಾಂಕ್ ಗಣನೀಯ ಪ್ರಗತಿ ಸಾಧಿಸಿದ್ದು ಮಾತ್ರವಲ್ಲ ಇದುವರೆಗೆ ಒಟ್ಟು10717 ಚಂದಾದಾರರ ನೋಂದಣಿಯೊಂದಿಗೆ ದಾಖಲೆ ನಿರ್ಮಿಸಿ ರಾಜ್ಯದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಖ್ಯಾತಿಗೆ ಎಸ್ ಸಿಡಿಸಿಸಿ ಬ್ಯಾಂಕ್ ಪಾತ್ರವಾಗಿ ಇದೀಗ ರಾಷ್ಟ್ರೀಯ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದೆ.
ಅಪೆಕ್ಸ್ ಪ್ರಶಸ್ತಿ
ವೈವಿಧ್ಯಮಯ ಯೋಜನೆಗಳನ್ನು ಕಾರ್ಯಗತಗೊಳಿಸಿ ಆಧುನಿಕ ಬ್ಯಾಂಕಿಂಗ್ ಸೇವೆಯಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿರುವ ಎಸ್ ಸಿಡಿಸಿಸಿ ಬ್ಯಾಂಕ್ 2022-23ನೇ ಸಾಲಿನಲ್ಲಿ ಸರ್ವಾಂಗೀಣ ಪ್ರಗತಿಯೊಂದಿಗೆ ಗುರುತಿಸಿಕೊಂಡು ಲೆಕ್ಕ ಪರಿಶೋಧನೆಯಲ್ಲಿ ‘ಎ’ ವರ್ಗವನ್ನು ಪಡೆದು ಅಪೆಕ್ಸ್ ಬ್ಯಾಂಕಿನ ಪ್ರಥಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ಎಸ್ ಸಿಡಿಸಿಸಿ ಬ್ಯಾಂಕ್ 22ನೇ ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.
113 ಶಾಖೆಗಳಲ್ಲಿ ವಿನೂತನ ಬ್ಯಾಂಕಿಂಗ್ ಸೇವೆ
ಎಸ್ ಸಿಡಿಸಿಸಿ ಬ್ಯಾಂಕಿನ 113 ಶಾಖೆಗಳು ಸಂಪೂರ್ಣ ಗಣಕೀಕರಣಗೊಂಡು ಕೋರ್ ಬ್ಯಾಂಕಿಂಗ್‌ನಂತಹ ಹೊಸತನದ ಬ್ಯಾಂಕಿಂಗ್ ಸೇವೆಯನ್ನು ತನ್ನ ಗ್ರಾಹಕರಿಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಶಾಖೆಗಳ ಮೂಲಕ ನೀಡುತ್ತಿದೆ. ಮಾತ್ರವಲ್ಲ ಉಡುಪಿ ಹಾಗೂ ಮಂಗಳೂರಿನಲ್ಲಿ ಮೊಬೈಲ್ ಬ್ಯಾಂಕಿಂಗ್ ನಂತಹ ವಿನೂತನ ಬ್ಯಾಂಕಿಂಗ್ ಸೇವೆಯನ್ನು ರಾಜ್ಯ ಮಟ್ಟದಲ್ಲೇ ಪರಿಚಯಿಸಿದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎಂಬ ಮನ್ನಣೆಗೂ ಎಸ್ ಸಿಡಿಸಿಸಿ ಬ್ಯಾಂಕ್ ಪಾತ್ರವಾಗಿರುತ್ತದೆ.
ಶುಕ್ರವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರು ಹಾಗೂ ಸಚಿವರಾದ ಶಿವಾನಂದ ಎಸ್. ಪಾಟೀಲ್, ನಿರ್ದೇಶಕರುಗಳಾದ ಸಿದ್ದಪ್ಪ ಕಲ್ಲಪ್ಪ ಸವದಿ, ಶರಣೇಗೌಡ ಬಯ್ಯಾಪುರ್, ಟಿ. ಎಂ. ಚಂದ್ರಶೇಖರಯ್ಯ, ಆರ್. ಎಂ. ಮಂಜುನಾಥ್ ಗೌಡ, ಅಮರಾವತಿ ಸಿ ಅಶ್ವಥ್, ಶಿವಾನಂದ ಅಪ್ಪ ಸಾಹೇಬ್ ಮನಕರ್, ಕೊಡಂದೇರ ಪಿ. ಗಣಪತಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ. ಎನ್. ದೇವರಾಜ್, ಎಸ್ ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ಬಾಲ್ಯೋಟ್ಟು ಮೊದಲಾದವರು ಉಪಸ್ಥಿತರಿದ್ದರು.