ಭಾರತ ಸಂವಿಧಾನ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಎಸ್.ಆರ್.ಹರೀಶ್ ಆಚಾರ್ಯ ಅಭಿಮತ
ಮಂಗಳೂರು: ಸಹಕಾರ ಕ್ಷೇತ್ರ ಎಂದರೆ ಸಂವಿಧಾನದ ತೊಟ್ಟಿಲು. ಇಲ್ಲಿ ರಚನಾತ್ಮಕ ದೃಷ್ಟಿಕೋನದ ಸಾಮೂಹಿಕ ಜವಾಬ್ದಾರಿಯ ಮೂಲಕ ಸೊಸೈಟಿಯ ಚಟುವಟಿಕೆಗಳು ನಡೆಯುತ್ತಿದ್ದು ಎಲ್ಲರನ್ನೂ ಒಳಗೊಂಡು ಸಹಕಾರ ಸಂಘಗಳ ಸಂವಿಧಾನ ರಚನೆಯಾಗಿರುತ್ತದೆ ಎಂದು ಸ್ಪಂದನ ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಆರ್.ಹರೀಶ್ ಆಚಾರ್ಯ ಹೇಳಿದರು.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK
ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಶನಿವಾರ ಭಾರತ ಸಂವಿಧಾನದ 75ನೇ ವರುಷದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಭಾರತ ಸಂವಿಧಾನ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಹಕಾರ ಕ್ಷೇತ್ರ ಶೇ.1, 2ರಷ್ಟಾದರೂ ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತದೆ. ಸಹಕಾರ ಸಂಘಗಳ ಬೈಲಾಗಳು ಸಂವಿಧಾನದ ಆಶಯಗಳಿಗೆ ಪೂರಕವಾಗಿಯೇ ರಚನೆಯಾಗಿರುತ್ತದೆ ಎಂದು ಬಣ್ಣಿಸಿದರು.
ಸಂವಿಧಾನದ ಬಗ್ಗೆ ಉಪನ್ಯಾಸ ನೀಡಲಿರುವ ಡಾ.ಪಿ.ಅನಂತಕೃಷ್ಣ ಭಟ್ ಅವರು ಭಾರತದ ಸಂವಿಧಾನದ ಚಲಿಸುವ ಸಾಧನ ಎಂದು ಬಣ್ಣಸಿದ ಡಾ.ಎಸ್.ಆರ್.ಹರೀಶ್ ಆಚಾರ್ಯ ಅವರು, 75ರ ಹರೆಯದಲ್ಲೂ ಹಲವಾರು ಕಡೆ ಸಂವಿಧಾನದ ಬಗ್ಗೆ ಉಪನ್ಯಾಸ ನೀಡುತ್ತಿರುವ ಡಾ.ಪಿ.ಅನಂತಕೃಷ್ಣ ಭಟ್ ಅವರ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು. 1947ರಿಂದಲೂ ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಭಾರತದ ಸಂವಿಧಾನವು ಕಾಯ್ದುಕೊಂಡು ಬರುತ್ತಿದೆ. ನಮ್ಮ ದೇಶದ ಅಕ್ಕಪಕ್ಕದ ದೇಶಗಳಲ್ಲಿ ರಾಜಕೀಯ ಸ್ಥಿತ್ಯಂತರಗಳು ನಡೆಯುತ್ತಿದ್ದರೂ ಭಾರತದಲ್ಲಿ ಮಾತ್ರ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಜನರ ಹಕ್ಕುಗಳನ್ನು ನಮ್ಮ ಸಂವಿಧಾನವು ಕಾಯ್ದುಕೊಂಡು ಬಂದಿದೆ. ನಮ್ಮ ಸಂವಿಧಾನವು ಅಷ್ಟು ಪ್ರಬಲವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ನಮ್ಮಲ್ಲಿ ಸಂವಿಧಾನದ ಆಶಯಗಳನ್ನು ಬದಿಗೊತ್ತಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ವಿಶ್ಲೇಷಣೆ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿ, ನಮ್ಮ ಸಂವಿಧಾನವು ಜಗತ್ತಿನ ಅತಿದೊಡ್ಡ ಸಂವಿಧಾನವಾಗಿದೆ. ಇಲ್ಲಿ ಎಲ್ಲ ಸಮುದಾಯದವರಿಗೂ ಪ್ರಬಲ ಧ್ವನಿ ಇದೆ. ಇದನ್ನು ಅರ್ಥ ಮಾಡಿಕೊಂಡು ನಾವು ಮುನ್ನಡೆಯಬೇಕು. ಸಂವಿಧಾನದ ಉಳಿವು ಬಹಳ ಅಗತ್ಯ. ವಿದ್ಯಾರ್ಥಿಗಳು ಸಮಾಜದ ಸಾಮರಸ್ಯ ಕಾಯ್ದುಕೊಂಡು ಒಳ್ಳೆಯ ಶಿಕ್ಷಣ ಪಡೆದು, ಕೌಶಲ್ಯ ಬೆಳೆಸಿಕೊಂಡು ಮಾನವೀಯತೆಯ ಆಶಯದಿಂದ ಬೆಳೆಯಬೇಕು ಎಂದು ಹೇಳಿದರು.
ಸಹಕಾರ ಭಾರತಿಯ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಎಸ್.ಆರ್.ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಡಾ.ಪಿ.ಅನಂತಕೃಷ್ಣ ಭಟ್ ಅವರಿಂದ ಸಂವಿಧಾನದ ಬಗ್ಗೆ ಉಪನ್ಯಾಸ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಭಾರತದ ಸಂವಿಧಾನದ ಪುಸ್ತಕಗಳನ್ನು ವಿತರಿಸಲಾಯಿತು.
ಬಾಲಸಂರಕ್ಷಣಾ ಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ.ಪಿ.ಅನಂತಕೃಷ್ಣ ಭಟ್ ಸ್ವಾಗತಿಸಿದರು. ಶಿಲ್ಪಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸುಶ್ಮಿತಾ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com