ಪುರುಷರ ಏಕಸ್ವಾಮ್ಯಕ್ಕೆ ೩೩ ಶೇಕಡಾ ಮೀಸಲಾತಿಯ ತಡೆ
ಮಂಗಳೂರು: ಇಂದು ಮಹಿಳೆಯರು ಪ್ರವೇಶಿಸದ ಕ್ಷೇತ್ರವೇ ಇಲ್ಲ. ಅಡುಗೆ ಮನೆಯಿಂದ ಹಿಡಿದು ಆರ್ಥಿಕ ಕ್ಷೇತ್ರದವರೆಗೂ ಮಹಿಳೆಯರು ತಮ್ಮ ಕಾರ್ಯಬಾಹುಳ್ಯವನ್ನು ವಿಸ್ತರಿಸಿಕೊಂಡಿದ್ದಾರೆ. ಇದೀಗ ಸಹಕಾರ ಕ್ಷೇತ್ರದಲ್ಲೂ ಮಹಿಳೆಯರ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ರೆಡಿಯಾಗಿದೆ.
ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇಕಡಾ 33ರ ಸ್ಥಾನಮಾನ ನೀಡಬೇಕೆಂಬ ಕೂಗು ಬಹಳ ಹಳೆಯದು. ಈಗ ಸಹಕಾರ ಕ್ಷೇತ್ರಕ್ಕೂ ಶೇಕಡಾ 33ರ ಬೇಡಿಕೆ ಕಾಲಿಟ್ಟಿದೆ. ಇದು ಸಹಕಾರಿ ಕ್ಷೇತ್ರದಲ್ಲಿ ಪುರುಷರ ಏಕಸ್ವಾಮ್ಯಕ್ಕೆ ಅಂತ್ಯ ಹಾಡಲಿದೆ. ಇಂಥದೊಂದು ಬೋಲ್ಡ್ ಆದೇಶ ಹೊರಡಿಸಿದ್ದು ಉತ್ತರಾಖಂಡ ಸರ್ಕಾರ.
ಹೌದು, ಉತ್ತರಾಖಂಡದ ಸಹಕಾರಿ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಆದೇಶವನ್ನು ಅಲ್ಲಿನ ಸರ್ಕಾರ ಕಳೆದ ವಾರ ಹೊರಡಿಸಿದೆ. ಅಲ್ಲಿನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅದನ್ನು ಆದೇಶ ಮಾಡಿ ಸರ್ಕಾರ ನಿಯಮ ಜಾರಿಗೆ ತಂದಿದ್ದು ಶನಿವಾರ ಅಂತಾರಾಷ್ಟ್ರೀಯ ಸಹಕಾರ ದಿನಾಚರಣೆಯ ಕಾರ್ಯಕ್ರಮದಲ್ಲಿ ಘೋಷಣೆ ಮಾಡಲಾಗಿದೆ. ಈ ಆದೇಶವು ಸಹಕಾರಿ ಸಂಸ್ಥೆಗಳಲ್ಲಿ ಪುರುಷರ ಪ್ರಾಬಲ್ಯವನ್ನು ಕೊನೆಗೊಳಿಸಲಿದೆ ಎಂದು ಸರ್ಕಾರವು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರದ ಆದೇಶವು ರಾಜ್ಯದ 10 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು, 670 ವಿವಿಧೋದ್ದೇಶ ಸಹಕಾರ ಸಂಘಗಳು ಮತ್ತು ಇತರ ಉನ್ನತ ಸಹಕಾರಿ ಸಂಸ್ಥೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ ಎಂದೂ ಪ್ರಕಟಣೆ ತಿಳಿಸಿದೆ. ಉತ್ತರಾಖಂಡ ರಾಜ್ಯ ಸಹಕಾರಿ ಬ್ಯಾಂಕ್, ರಾಜ್ಯ ಸಹಕಾರ ಮಹಾಮಂಡಳ, ಗೃಹ ನಿರ್ಮಾಣ ಮತ್ತು ನಿರ್ಮಾಣ ಸಹಕಾರ ಒಕ್ಕೂಟ, ಪ್ರಾದೇಶಿಕ ಸಹಕಾರ ಸಂಘ, ಗ್ರಾಹಕ ಸಹಕಾರ ಒಕ್ಕೂಟ, ರೇಷ್ಮೆ ಒಕ್ಕೂಟ ಮುಂತಾದವುಗಳಲ್ಲೂ ಮಹಿಳೆಯರಿಗೆ ಶೇ.33ರ ಕೋಟಾ ಸಿಗಲಿದೆ ಎಂದು ಸರ್ಕಾರ ಹೇಳಿದೆ.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ಮೇಲ್ ಮಾಡಿ:
ಇಮೇಲ್: sahakaraspandana@gmail.com
ಮಾಹಿತಿಗೆ: 9901319694.