ಸಂಪರ್ಕ ಸಭೆ, ತರಬೇತಿ ಕಾರ್ಯಕ್ರಮದಲ್ಲಿ ಜಿ.ನಂಜನ ಗೌಡ ಅಭಿಪ್ರಾಯ
ಮಂಗಳೂರು: ಅತ್ಯಂತ ಬಡವರೂ ಏಳಿಗೆ ಹೊಂದಬೇಕು ಎಂಬುದು ಸೌಹಾರ್ದ ಸಹಕಾರಿಯ ಉದ್ದೇಶ. ಈ ಕ್ಷೇತ್ರದಲ್ಲಿ ಅಧಿಕಾರಿಗಳ ಹಸ್ತಕ್ಷೇಪ ಕಡಿಮೆ. ಆದರೆ ಸೌಹಾರ್ದದ ನಿಯಮಾವಳಿಯ ದುರುಪಯೋಗ ಯಾವತ್ತೂ ಆಗಬಾರದು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ.ನಂಜನ ಗೌಡ ಅಭಿಪ್ರಾಯಪಟ್ಟರು.
ಮಂಗಳೂರಿನಲ್ಲಿ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಮ್ಮಿಕೊಂಡ ಸಂಪರ್ಕ ಸಭೆ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೌಹಾರ್ದ ಸಹಕಾರಿ ಸಂಸ್ಥೆಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಯಾರಿಗಾದರೂ ಸಾಲ ಕೊಡುವಾಗ ಸಂಸ್ಥೆಯ ಅಧ್ಯಕ್ಷರು, ನಿರ್ದೇಶಕರು ಅತ್ಯಂತ ಜಾಗರೂಕರಾಗಿರಬೇಕು. ಪ್ರತಿಯೊಬ್ಬ ನಿರ್ದೇಶಕರೂ ಸಂಸ್ಥೆಯ ಎಲ್ಲ ಆಸ್ತಿಗಳ ಬಗ್ಗೆ ಪೂರ್ಣ ಮಾಹಿತಿ ಹೊಂದಿರಬೇಕು. ಸಂಸ್ಥೆಯ ಬೆಳವಣಿಗೆ, ನಿರ್ವಹಣೆಯ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರಬೇಕು ಮತ್ತು ಸಂಸ್ಥೆಯ ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾಗಬೇಕು. ಸಂಸ್ಥೆಯ ವಿಶ್ವಾಸಕ್ಕೆ ಒಮ್ಮೆ ಧಕ್ಕೆಯಾದರೆ ಇಡೀ ವ್ಯವಸ್ಥೆಯೇ ಹಾಳಾಗುತ್ತದೆ ಎಂಬ ತಿಳಿವಳಿಕೆ ನಮ್ಮಲ್ಲಿರಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ, ದಕ್ಷಿಣ ಕನ್ನಡ ಜಿಲ್ಲಾ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಲಯನ್ ಎ.ಸುರೇಶ್ ರೈ ಮಾತನಾಡಿ, ತಳಪಾಯ ಗಟ್ಟಿಯಿದ್ದರೆ ಎಷ್ಟೇ ದೊಡ್ಡ ಮನೆಯನ್ನಾದರೂ ಕಟ್ಟಬಹುದು. ಸೌಹಾರ್ದ ಸಹಕಾರಿ ಸಂಸ್ಥೆಗಳು ಸಮಾಜಮುಖಿ ಚಟುವಟಕೆಗಳ ಮೂಲಕ ಮಾದರಿಯಾಗಿ ಬೆಳೆಯಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ ಕಾರ್ಯನಿರತನಿಗೆ ಕೆಲಸವೇ ವಿಶ್ರಾಂತಿ, ಸೋಮಾರಿಗೆ ಸುಮ್ಮನೆ ಕುಳಿತುಕೊಳ್ಳುವುದೇ ಕೆಲಸ. ಈ ಮಾತಿನಂತೆ ಆಯಾ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳು, ಸ್ವಚ್ಛತಾ ಕಾರ್ಯಕ್ರಮಗಳಂತಹ ಕಾರ್ಯಕ್ರಮಗಳ ಮೂಲಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು. ಜೊತೆಗೆ ಸಿಬಂದಿಗಳಿಗೆ ಪ್ರತಿ ತಿಂಗಳೂ ತರಬೇತಿ ನೀಡುವತ್ತಲೂ ಗಮನ ಹರಿಸಬೇಕು ಎಂದು ಹೇಳಿದರು.
ಸಂಯುಕ್ತ ಸಹಕಾರಿಯ ಮಾಜಿ ಅಧ್ಯಕ್ಷ ಎಸ್.ಆರ್‌ಸತೀಶ್ಚಂದ್ರ ಮಾತನಾಡಿ, 50 ಶೇಕಡಾ ಮಹಿಳೆಯರು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಆಗ ಈ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಬಲ ಬರುತ್ತದೆ ಎಂದರು.
ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಪೊರೇಟ್ ತರಬೇತುದಾರ ಶ್ರೀಶ ಉಪಸ್ಥಿತರಿದ್ದರು. ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಪ್ರಾಸ್ತಾವಿಕ ಮಾತನಾಡಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಜಿಲ್ಲೆಯಲ್ಲಿ 133 ಸೌಹಾರ್ದ ಸಂಸ್ಥೆಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 133 ಸೌಹಾರ್ದ ಸಹಕಾರಿ ಸಂಸ್ಥೆಗಳಿದ್ದು ಇದರಲ್ಲಿ 128 ಕಾರ್ಯನಿರ್ವಹಣೆಯಲ್ಲಿದೆ. 1,31,000ದಷ್ಟು ಸದಸ್ಯರಿದ್ದು, ಒಂದು ಸಾವಿರಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. 1415 ಕೋಟಿ ರೂ. ದುಡಿಯುವ ಬಂಡವಾಳವಿದ್ದು, 100 ಕೋಟಿ ರೂ. ಅಧಿಕ ವ್ಯವಹಾರ ಹೊಂದಿರುವ ಎರಡು ಸಂಸ್ಥೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ ಎಂದು ಗುರುಪ್ರಸಾದ್ ಬಂಗೇರ ಮಾಹಿತಿ ನೀಡಿದರು.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ಮೇಲ್ ಮಾಡಿ:
ಇಮೇಲ್: sahakaraspandana@gmail.com
ಮಾಹಿತಿಗೆ: 9901319694.