ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಕರೆ
ಗಾಂಧಿನಗರ: ದೇಶದಲ್ಲಿರುವ ಲಕ್ಷಾಂತರ ಬಡಜನರಿಗೆ ಮೂಲಸೌಲಭ್ಯವೊದಗಿಸಲು, ಸಮೃದ್ಧತೆ ತರಲು ಮತ್ತು ಅವರಲ್ಲಿ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಲು ಸಹಕಾರ ಕ್ಷೇತ್ರವನ್ನು ಕೊಂಡಿಯಾಗಿ ಬಳಸಬೇಕು ಎಂದು ಕೇಂದ್ರ ಗೃಹಸಚಿವ ಅಮಿತ್ ಷಾ ಕರೆ ನೀಡಿದರು.
ಗುಜರಾತ್‌ನ ಗಾಂಧಿನಗರದಲ್ಲಿ ಇತ್ತೀಚೆಗೆ 102ನೇ ಅಂತಾರಾಷ್ಟ್ರೀಯ ಸಹಕಾರ ದಿನ ಆಚರಣೆ ಕಾರ್ಯಕ್ರಮದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದರು.
2029ರಲ್ಲಿ ಅಂತಾರಾಷ್ಟ್ರೀಯ ಸಹಕಾರ ದಿನ ಆಚರಿಸುವ ವೇಳೆ ದೇಶದ ಎಲ್ಲ ಪಂಚಾಯಿತಿಗಳಲ್ಲೂ ಕೋ ಆಪರೇಟಿವ್ ಸೊಸೈಟಿಗಳು ಸ್ಥಾಪನೆಯಾಗಲಿವೆ. ಅದರಲ್ಲೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರಚನೆಯಾಗಲಿವೆ ಎಂಬ ವಿಶ್ವಾಸವಿದೆ ಎಂದು ಅಮಿತ್ ಷಾ ಹೇಳಿದರು.
ಕೇಂದ್ರ ಸರ್ಕಾರವು ಸಹಕಾರಿ ವಲಯದಲ್ಲಿ ಎರಡು ಹೊಸ ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ಅಮಿತ್ ಷಾ ತಿಳಿಸಿದರು. ಮೆಕ್ಕೆಜೋಳ ಬೆಳೆಯುವ ರೈತರನ್ನು ಹುರಿದುಂಬಿಸಲು ಎಥೆನಾಲ್ ಮೂಲಕ ಇಂಧನ ತಯಾರಿಸುವುದನ್ನು ಪ್ರೋತ್ಸಾಹಿಸಲಾಗುವುದು. ಆನ್‌ಲೈನ್ ಖರೀದಿ ಮೂಲಕ ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಎರಡು ಪ್ರಮುಖ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ನಾಫೆಡ್(ನ್ಯಾಶನಲ್ ಅಗ್ರಿಕಲ್ಚರಲ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ) ಮತ್ತು ಗ್ರಾಹಕ ಕೋ ಆಪರೇಟಿವ್ ಸಂಸ್ಥೆಗಳು ವಿವಿಧ ಧಾನ್ಯಗಳನ್ನು ಸಂಗ್ರಹಿಸಲಿದೆ ಎಂದು ಮಾಹಿತಿ ನೀಡಿದರು.
ಎಲ್ಲಾ ರಾಜ್ಯಗಳು ಹಾಗೂ ಜಿಲ್ಲೆಗಳು ಗಟ್ಟಿ ತಳಹದಿಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳು ಹಾಗೂ ಜಿಲ್ಲಾಮಟ್ಟದ ಹಾಲು ಉತ್ಪಾದಕ ಸಂಸ್ಥೆಯನ್ನು ಹೊಂದಿರಬೇಕು. ಮುಂದಿನ ಐದು ವರ್ಷದಲ್ಲಿ ದೇಶದ ಎರಡು ಲಕ್ಷ ಪಂಚಾಯಿತಿಗಳಲ್ಲಿ ವಿವಿಧೋದ್ದೇಶ ಪ್ರಾಥಮಿಕ ಸಹಕಾರಿ ಸಂಘಗಳ ರಚನೆಗೆ ಒತ್ತು ನೀಡಲಾಗುವುದು ಎಂದು ಅಮಿತ್ ಷಾ ಹೇಳಿದರು.
ನೂತನ ಸಹಕಾರಿ ನೀತಿ ಮುಂದಿನ ತಿಂಗಳು ಮಂಡನೆ?
ಇದೇ ಸಭೆಯಲ್ಲಿ ಮಾತನಾಡಿದ ಸಹಕಾರ ಸಚಿವ ಅಮಿತ್ ಷಾ ಅವರು ಹೊಸ ಸಹಕಾರಿ ನೀತಿ ಸಿದ್ಧವಾಗಿದ್ದು ಮುಂದಿನ ತಿಂಗಳೇ ಮಂಡಿಸುವ ಸುಳಿವು ನೀಡಿದರು. ಕೇಂದ್ರದ ಮಾಜಿ ಸಚಿವ ಸುರೇಶ್ ಪ್ರಭು ನೇತೃತ್ವದ ತಂಡ ಹೊಸ ಸಹಕಾರಿ ನೀತಿಯ ಕರಡನ್ನು ರೂಪಿಸುತ್ತಿದೆ. ಸಹಕಾರಿ ಸಚಿವಾಲಯಕ್ಕೆ ಇದರ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಿದೆ ಎಂದು ತಿಳಿಸಿದರು. ಈ ಬಗ್ಗೆ ಸಚಿವ ಅಮಿತ್ ಷಾ ಅವರು ಸ್ಪಷ್ಟ ನಿಲುವು ಹೊಂದಿದ್ದು ಶೀಘ್ರದಲ್ಲೇ ಹೊಸ ನೀತಿಯನ್ನು ಮಂಡಿಸುವ ದಿನ ನಿಗದಿಪಡಿಸಲಿದ್ದಾರೆ. ರಾಷ್ಟ್ರೀಯ ಸಹಕಾರ ನೀತಿಯು ಸಹಕಾರಿ ಸಚಿವಾಲಯದ ಮಹತ್ವದ ಉಪಕ್ರಮವಾಗಿದ್ದು, ರಾಜ್ಯ ಮತ್ತು ಪ್ರಾದೇಶಿಕ ಗಡಿಗಳನ್ನು ಮೀರಿದ ದೃಢವಾದ ಸಹಕಾರ ಆಂದೋಲನಕ್ಕೆ ಅಡಿಪಾಯ ಹಾಕುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಿ:
Email: sahakaraspandana@gmail.com
ಮಾಹಿತಿಗೆ: 9901319694.